ಮಠದ ಆವರಣದಲ್ಲಿ ಗೋಮೂತ್ರ ಸಿಂಪಡಿಸಿದ ಬಿಜೆಪಿ ಕಾರ್ಯಕರ್ತರು!….
ಶಿರಸಿ: ನಟ ಪ್ರಕಾಶ್ ರೈ ಶನಿವಾರ ಇಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಇಲ್ಲಿನ ಬಿಜೆಪಿ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದರು.
‘ಹಿಂದೂ ಸಮಾಜದವರು ಗೋವನ್ನು ಪೂಜನೀಯ ಸ್ಥಾನದಲ್ಲಿಟ್ಟು ಆರಾಧಿಸುತ್ತಾರೆ. ಗೋಮಾಂಸ ಭಕ್ಷಣೆ ಮಾಡುವ ಹಾಗೂ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ವ್ಯಕ್ತಿಗಳ ಭೇಟಿಯಿಂದ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ಬುದ್ಧಿಜೀವಿ ಪ್ರಕಾಶ್ ರೈ ಅವರನ್ನು ಸಮಾಜ ಕ್ಷಮಿಸದು. ಈ ಪ್ರಯುಕ್ತ ಕಾರ್ಯಕ್ರಮ ನಡೆದ ಧಾರ್ಮಿಕ ಕ್ಷೇತ್ರವನ್ನು ಶುದ್ಧಗೊಳಿಸಲಾಯಿತು’ ಎಂದು ಬಿಜೆಪಿ ಯುವ ಮೋರ್ಚಾದ ನಗರದ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ ಹೇಳಿದರು.
‘ಸ್ವಯಂ ಘೋಷಿತ ಬುದ್ಧಿಜೀವಿಗಳು, ಎಡಬಿಡಂಗಿಗಳು ಕಾರ್ಯಕ್ರಮ ಮಾಡಿ, ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾರೆ. ಇಲ್ಲಿ ಶುದ್ಧೀಕರಣ ಕಾರ್ಯ ಮಾಡಲಾಗುತ್ತದೆ’ ಎಂದು ಭಾನುವಾರವೇ ಪತ್ರಿಕಾ ಹೇಳಿಕೆ ನೀಡಿದ್ದ ಮರಾಠೆ, ಪಕ್ಷದ ಸ್ಥಳೀಯ ಪ್ರಮುಖರಾದ ಗಣಪತಿ ನಾಯ್ಕ, ನಂದನ ಸಾಗರ, ರೇಖಾ ಹೆಗಡೆ, ವೀಣಾ ಭಟ್ಟ, ಸುರೇಶ ಶೆಟ್ಟಿ, ರವೀಶ ಹೆಗಡೆ, ಸುದರ್ಶನ ವೈದ್ಯ ಅವರೊಂದಿಗೆ ಮಠದ ಆವರಣದಲ್ಲಿ ಸೋಮವಾರ ಗೋಮೂತ್ರ ಸಿಂಪಡಿಸಿದರು.
‘ಪ್ರೀತಿ ಪದಗಳ ಪಯಣ’ ಆಯೋಜನಾ ಸಮಿತಿಯು, ಇಲ್ಲಿನ ರಾಘವೇಂದ್ರ ಮಠದಲ್ಲಿ ಶನಿವಾರ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಹೆಸರಿನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಮಾರಂಭ ಉದ್ಘಾಟಿಸಿ ಮಾತನಾಡಿದ್ದ ಪ್ರಕಾಶ್ ರೈ, ಸಂವಿಧಾನ ಬದಲಾಯಿಸುವ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀಡಿದ ಹೇಳಿಕೆಯನ್ನು ಟೀಕಿಸಿದ್ದರು.