ಬಾಗಲಕೋಟ\ರಾಯಚೂರು: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದಕ್ಕೆ ರಾಜ್ಯದ ನಾನಾ ಕಡೆಗಳಲ್ಲಿ ಪ್ರತಿಭಟನೆ ಮುಂದುವರಿದಿದೆ.
ಮುಧೋಳದಲ್ಲಿ ಸಚಿವ ತಿಮ್ಮಾಪುರಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಕಾರ್ಯಕರ್ತರು ಬಸ್ಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಲೋಕಾಪುರದಿಂದ ಮುಧೋಳಕ್ಕೆ ತೆರಳುವ ಬಸ್ ಹಾಗೂ ವಾಹನ ಸಂಚಾರ ಸ್ಥಗಿತಗೊಂಡಿದೆ. ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬಾಗಲಕೋಟದಲ್ಲಿ ಶಾಸಕ ಮೇಟಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಮಾಜಿ ಶಾಸಕ ಪೂಜಾರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಪೂಜಾರ ಅವರ ಮನೆ ಎದುರು ಟೈರ್ ಸುಟ್ಟು ಪ್ರತಿಭಟಿಸಲಾಯಿತು. ಪೂಜಾರ ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಅತ್ತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರನ್ನು ಭೇಟಿ ಮಾಡಿದ ಮಾಜಿ ಶಾಸಕ ಪಿ.ಎಚ್.ಪೂಜಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆ ಮುನ್ನವೇ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಶಾಸಕ ಸೈಯದ್ ಯಾಸೀನ್ ಅವರಿಗೆ ಟಿಕೆಟ್ ನೀಡಬಾರದೆಂದು ಕಾಂಗ್ರೆಸ್ ಕಚೇರಿಯಲ್ಲಿ ಸಭೆಕರೆಯಲಾಗಿದೆ. ಮತ್ತೊಂದೆಡೆ ಯಾಸೀನ್ಗೆ ಟಿಕೆಟ್ ನೀಡಿ ಎಂದು ಬೆಂಬಲಿಗರ ಪ್ರತ್ಯೇಕ ಸಭೆ ನಡೆಯುತ್ತಿದೆ. ಇದರಿಂದ ರಾಯಚೂರಿನಲ್ಲಿ ಟಿಕೆಟ್ ಗೊಂದಲ ಮುಂದುವರಿದಿದೆ.