ಮಂಗಳೂರು: ಕೋಸ್ಟಲ್ವುಡ್ನಲ್ಲಿ ಸದ್ಯ ಸೌಂಡ್ ಮಾಡಿರುವ ಮಂಜು ರೈ ಮೂಳೂರು ಮುಖ್ಯಭೂಮಿಕೆಯ ‘ಮೈ ನೇಮ್ ಈಸ್ ಅಣ್ಣಪ್ಪ’ ಚಿತ್ರದ ಆಡಿಯೋ ಈಗಾಗಲೇ ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 3,500 ಅಧಿಕ ವ್ಯೂಗಳು ಲಭಿಸಿವೆ. ಜೊತೆಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ರೋಹನ್ ಶೆಟ್ಟಿ ನಿರ್ಮಾಣದ, ಮಂಜು ರೈ ಮೂಳೂರು ನಾಯಕನಾಗಿ ನಟಿಸಿರುವ, ಕಲಾತ್ಮಕ ಕಲಾವಿದ ಮಯೂರ್ ಶೆಟ್ಟಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಆರಂಭದಿಂದಲೇ ವಿಭಿನ್ನತೆಯ ಮೂಲಕ ಸದ್ದು ಮಾಡುತ್ತಿದ್ದ ಚಿತ್ರದಲ್ಲಿ ಒಟ್ಟು 10 ಹಾಡುಗಳಿವೆ. ಈ ಹಾಡುಗಳ ಪೈಕಿ ಖ್ಯಾತ ಯಕ್ಷಗಾನ ಭಾಗವತ ದನಿಯಾಗಿರುವ ‘ಮುಗುರು ತೆಲಿಪುದೇ’ ಹಾಡು ಪ್ರೇಕ್ಷಕರಿಗೆ ಬೇಗ ಇಷ್ಟವಾಗಿದೆ. ಇದರ ಜೊತೆಗೆ ಹಿರಿಯ ಭಾಗವತರಾದ ದಿನೇಶ್ ಅಮ್ಮಣ್ಣಾಯ ಅವರು ಧ್ವನಿಗೂಡಿಸಿರುವ ‘ಕನ ನೀರ ಕಡಲ್’ ಎಂಬ ಹಾಡು ಕೂಡ ಮನಕಲಕುವಂತೆ ಮೂಡಿಬಂದಿದೆ. ಜತೆಗೆ ರವಿಚಂದ್ರ ಕನ್ನಡಿಕಟ್ಟೆ ಅವರು ಹಾಡಿರುವ ‘ನಂದಾಕಿಶೋರ’ ಹಾಡಿಗೆ ಕೂಡ ಮೆಚ್ಚುಗೆ ವ್ಯಕ್ತವಾಗಿದೆ.
ಇದರ ಜೊತೆಗೆ ಕನ್ನಡದ ಖ್ಯಾತ ಗಾಯಕರು ಕೂಡ ಚಿತ್ರದ ಹಾಡುಗಳಿಗೆ ಹಾಡಿರುವುದು ವಿಶೇಷ. ಖ್ಯಾತ ಕನ್ನಡ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ‘ಪೀಪಿ’ ಹಾಡು ವಿಭಿನ್ನವಾಗಿ ಟಪ್ಪಾಂಗುಚ್ಚಿ ಫೀಲ್ ನೀಡುತ್ತಿದೆ. ಇನ್ನೋರ್ವ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘುದೀಕ್ಷಿತ್ ‘ ಓ ಸಾದಿ ದೀಪ’ ಎನ್ನುವ ಗೀತೆಯೂ ಕೇಳುಗರ ಮನಮುಟ್ಟುವಂತಿದೆ. ಇನ್ನುಳಿದಂತೆ ಪ್ರಕಾಶ್ ಮಹಾದೇವನ್ ಹಾಡಿರುವ ‘ಕುರ್ತೆಲ್ ಸಾಂಗ್’, ರೂಪಾ ಪ್ರಕಾಶ್ ಮತ್ತು ಪ್ರಕಾಶ್ ಮಹಾದೇವನ್ ಹಾಡಿರುವ ಮಾಂಗಲ್ಯಂ, ಸೋನಲ್ ಮೊಂತೇರೋ ಹಾಡಿರುವ ಸುಗಿತೆ ಹಾಡುಗಳು ಕೂಡ ಭರ್ಜರಿಯಾಗಿಯೇ ಸೌಂಡ್ ಮಾಡುತ್ತಿವೆ. ಹಾಡುಗಳಿಗೆ ಸಾಹಿತ್ಯ ರಚನೆಯ ಜವಾಬ್ದಾರಿ ನಿರ್ವಹಿಸಿರುವ ನಿರ್ದೇಶಕ ಮಯೂರ್ ಶೆಟ್ಟಿ ಅವರ ಸಾಲುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದಲ್ಲಿ ನಾಯಕ ನಟ ಮಂಜು ರ ಜೊತೆಗೆ ನಾಯಕಿಯಾಗಿ ಶುಭಾ ಶೆಟ್ಟಿ, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಸತೀಶ್ ಬಂದಲೆ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ, ಮಿಸ್ಟರ್ ಕರ್ನಾಟಕ ಇಂಟರ್ ನ್ಯಾಷನಲ್ ವಿಜೇತ ಸಂದೀಪ್ ಶೆಟ್ಟಿ ಕಾಟಿಪಳ್ಳ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.