ಅಧಿಕಾರಕ್ಕಾಗಿ ಮೀಸಲು ಬದಲಿಸಿದರು| ಅಧಿಕಾರಿಗಳ ಬದಲಿಸುವರು| ಅಧಿಕಾರಸ್ಥರ ಕೈಯಲ್ಲಿ “ಬಂದ್” ಬಾಂಧವರು
ಅಧಿಕಾರ ಇದ್ದಾಗ ಒಂದು ರೀತಿ, ಅಧಿಕಾರ ಕಳೆದುಕೊಂಡಾಗ ಇನ್ನೊಂದು ರೀತಿ, ಆಡಳಿತ ಪಕ್ಷ ಬದಲಾದರೂ ರಾಜಕಾರಣಿಗಳದ್ದು ಮಾತ್ರ ಸ್ವಾರ್ಥ ಅಧಿಕಾರ ಮೋಹ ಬದಲಾಗುವುದಿಲ್ಲ. ರಾಜ್ಯದಲ್ಲಿ ಬಂದ್ ಇರಬಹುದು, ಸ್ಥಳಿಯಾಡಳಿತ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪಟ್ಟಿ ಇರಬಹುದು. ದಕ್ಷ ಅಧಿಕಾರಿಗಳ ವರ್ಗ ಇರಬಹುದು. ಅಧಿಕಾರಸ್ಥರು ತಮಗೆ ಬೇಕಾದ ರೀತಿಯಲ್ಲಿ ಮೂಗಿನ ನೇರಕ್ಕೆ ತಮಗೆ ಲಾಭವಾಗುವಂತೆ ನಡೆದುಕೊಳ್ಳುವುದನ್ನು ಒಂದೊಂದಾಗಿ ಉದಾಹರಣೆ ಸಹಿತ ವಿವರಿಸಬಹುದು.
ಮೊದಲಿಗೆ ಬಂದ್ ವಿಚಾರದಲ್ಲಿಯೇ ನೋಡೋಣ. ಮಂಗಳೂರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ಆಗಮನ ಆಕ್ಷೇಪಿಸಿ ಬಿಜೆಪಿಯವರು ಜಿಲ್ಲಾ ಬಂದ್ಗೆ ಕರೆ ಕೊಟ್ಟಾಗ ಅಂದಿನ ಸಚಿವರಾದ ಯು.ಟಿ.ಖಾದರ್ ಅವರು ಬಂದ್ ಗೆ ಕರೆ ಕೊಟ್ಟವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಗರ್ಜಿಸಿದ್ದರು. ಅಂದಿನ ಉಸ್ತುವಾರಿ ಸಚಿವ ರಮಾನಾಥ ರೈಗಳೂ ಬಂದ್ಗೆ ಕರೆ ನೀಡಿದವರಿಂದಲೇ ನಷ್ಟ ವಸೂಲಿ ಮಾಡುತ್ತೇನೆ ಎಂದು ಗುಡುಗಿದ್ದರು. ಆದರೆ ಇಂದು ರಮಾನಾಥ ರೈಗಳು ಆಲಂಗಿಸಿಕೊಂಡು ಬಂದ್ಗೆ ಬೆಂಬಲ ಕೇಳುತ್ತಿದ್ದಾರೆ.
ಅಂದು ಬಂದ್ಗೆ ಕರೆ ಕೊಟ್ಟ ಬಿಜೆಪಿಯ ಪ್ರಮುಖ ಕಾರ್ಯಕರ್ತರನ್ನು ರಾತೋರಾತ್ರಿ ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗಿತ್ತು. ಬಸ್ಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಂದಿನ ಕಾಂಗ್ರೆಸ್ ಸರಕಾರ ಎಚ್ಚರಿಕೆ ನೀಡಿತ್ತು. ಬಂದ್ ವಿಫಲಗೊಳಿಸಲು ತನ್ನ ಎಲ್ಲ ಅಧಿಕಾರವನ್ನು ಬಳಸಿತ್ತು. ಸಿಪಿಎಂಗೆ ಭರ್ಜರಿ ಬೆಂಬಲ ನೀಡಿತ್ತು. (ಸಣ್ಣ ಕಾರ್ಯಕ್ರಮವಾಗಬಹುದಾಗಿದ್ದ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯೇ ಅಪಪ್ರಚಾರದ ಮೂಲಕ ಪ್ರಚಾರ ನೀಡಿ, ಕಾರ್ಯಕ್ರಮ ಗೌಜಿಯಾಗಿ ನಡೆಯಲು ಕಾರಣವಾಯಿತು. ಇದು ಬೇರೆ ವಿಚಾರ)
ಆದರೆ ಈಗ ಕಾಂಗ್ರೆಸ್ –ಜೆಡಿಎಸ್ ಸಮ್ಮಿಶ್ರ ಸರಕಾರ ಬಂದ್ ಮಾಡಲು ಪಣ ತೊಟ್ಟಿದೆ.
ಕಾಂಗ್ರೆಸ್ ಬಂದ್ಗೆ ಕರೆ ನೀಡಿದ್ದು ಹೌದು ಆದರೆ ಬಂದ್ ಮಾಡುವವರು ಯಾರು ? ಬಂದ್ ಯಶಸ್ವಿಯಾಗಬೇಕಿದ್ದರೆ ಮೊದಲು ಬಸ್ ಬಂದ್ ಆಗಬೇಕು. ಅದು ಕಷ್ಟ ಏಕೆಂದರೆ ಡ್ರೈವರ್ಗಳು ಎಲ್ಲ ಬಿಜೆಪಿ ಅಲ್ವಾ ? ಹೇಗೆ ಬಂದ್ ಮಾಡುತ್ತೀರಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಬಳಿ ಮಾಜಿ ಸಚಿವ ಅಭಯಚಂದ್ರ ಜೈನ್ ಮೊನ್ನೆ ಏರ್ಪೋರ್ಟಲ್ಲಿ ವಾಸ್ತವದ ಪ್ರಶ್ನೆ ಇಟ್ಟಿದ್ದರು. ಈ ಕುರಿತು ಗಂಭೀರ ಚರ್ಚೆಯಾಗಿ ಬಳಿಕ ಬಸ್ ಮಾಲೀಕರನ್ನೇ ಪ್ರಭಾವಕ್ಕೆ ಒಳಪಡಿಸಿ ಬಂದ್ ಮಾಡಿಸುವ ಕುರಿತು ಸ್ಕೆಚ್ ಹಾಕಿದ್ದಿರಬೇಕು. ಅದರಂತೆ ಮರುದಿನವೇ ಬಸ್ ಮಾಲೀಕರು ಸಭೆ ಸೇರಿ ಬಂದ್ ನಡೆಸಲು ನೈತಿಕ ಒಪ್ಪಿಗೆ ನೀಡಿದರು. ಅಲ್ಲಿಗೆ ಕೈ ಮುಖಂಡರು ಅರ್ಧ ತೇರ್ಗಡೆಯಾದರು. ಇನ್ನು ಶಾಲೆಗಳಿಗೆ ರಜೆ ಸಾರಿದರೆ ಬಂದ್ ಅರ್ಧ ಯಶಸ್ಸು.
ಇದಾದ ಮೇಲೆ ಕಾರ್ಮಿಕ ಸಂಘಟನೆಗಳ ಮೂಲಕ ಟೆಂಪೊ, ಬಾಡಿಗೆ ಕಾರ್ ಗಳನ್ನು ಬಂದ್ ಮಾಡಲು ಆರ್ಟಿಒದ ಕೆಳ ಹಂತದ ಅಧಿಕಾರಿಗಳ ಮೂಲಕ ಅಧಿಕಾರ ಪೂರ್ಣವಾಗಿ ವಿನಂತಿ ಮಾಡಿಸಿದರು. ಕೆಎಸ್ಆರ್ಟಿಸಿ ಬಂದ್ ಮಾಡಿಸಲು ಅದರ ಕಾರ್ಮಿಕರ ಸಂಘಟನೆಗಳ ಮೂಲಕ ಹೇಳಿಕೆ ಹೊರಡಿಸಿದರು.
ಬಿಜೆಪಿ ಪರ ಉದ್ಯಮಿಗಳು, ಅಂಗಡಿ, ಹೋಟೇಲ್ ಮಾಲೀಕರು, ವಾಹನ ಚಾಲಕರು ತಾವು ಒಂದು ಗಂಟೆ ಹೆಚ್ಚು ಕೆಲಸ ಮಾಡುವುದಾಗಿ ಘೋಷಣೆ ಮಾಡಿದರು. ಇದೇ ಬಿಜೆಪಿಯವರು ಪ್ರತಿಪಕ್ಷದಲ್ಲಿದ್ದಾಗ ಅಡುಗೆ ಅನಿಲದ ದರ ಏರಿಕೆ ಮಾಡಿರುವುದರ ವಿರುದ್ಧ ಸಿಲಿಂಡರ್, ತರಕಾರಿ ಮುಂದೆ ಇಟ್ಟುಕೊಂಡು ಪ್ರತಿಭಟನೆ ಮಾಡಿದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೂ ಇಂಧನ ಬೆಲೆ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಡಾಲರ್ ಎದುರು ರುಪಾಯಿ ಅಪಮೌಲ್ಯ ತಡೆಯದ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದ್ದರು. ಆದರೆ ಈಗ ಅವರದೇ ಇಂಧನ ಸಚಿವರು ರುಪಾಯಿ ಮೌಲ್ಯ ಹಾಗೆಯೇ ಇದೆ, ಡಾಲರ್ ನದ್ದೇ ಸಮಸ್ಯೆ ಎಂದು ಬಾಲಿಶವಾಗಿ ಹೇಳಿದ್ದಾರೆ.
ಯುಪಿಎ ಸರಕಾರ ಇರುವಾಗ ಕಚ್ಚಾ ತೈಲದ ಬೆಲೆ ದುಪ್ಪಟ್ಟು ಇದ್ದರೂ ಯುಪಿಎ ಅವಧಿಯಲ್ಲಿ ಪೆಟ್ರೋಲ್ ದರ ಕಡಿಮೆ ಇತ್ತು. ಒಮ್ಮೆ ಮಾತ್ರ ಹೆಚ್ಚಾದರೂ 82 ರು. ದಾಟಿರಲಿಲ್ಲ. ಆದರೆ ಈಗ ಕಚ್ಚಾತೈಲದ ಬೆಲ ಅರ್ಧಕ್ಕಿಂತ ಕಡಿಮೆ ಇದ್ದರೂ ಪೆಟ್ರೋಲ್ ಬೆಲೆ 83 ರು. ದಾಟಿದೆ. ಬಿಜೆಪಿ ಜನರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ.
ಅದಕ್ಕೆ ಪ್ರತಿಯಾಗಿ ಬಿಜೆಪಿಯವರು ಹೇಳುವುದು ಹೀಗೆ… ಯುಪಿಎ ಸರಕಾರ ಮಾಡಿದ ಲಕ್ಷ ಕೋಟಿ ರು. ಇಂಧನ ಮೇಲೆ ತೆಗೆದ ಸಾಲವನ್ನು ಮನ್ನಾ ಮಾಡಿದ್ದೇವೆ. ಇದರ ಬಡ್ಡಿಯೇ 70 ಸಾವಿರಕೋಟಿ ರು. ಆಗಿತ್ತು ಎಂದು ಸಮರ್ಥನೆ ಮುಂದಾಗಿದ್ದಾರೆ. ಇದು ವಾಸ್ತವವೂ ಇರಬಹುದು. ಇಂಧನ ತೆರಿಗೆಯಿಂದ ಬಂದ ಹಣದಲ್ಲಿ ಭಾರತದ ಮಾನ ಕಾಪಾಡಿದ್ದೇವೆ, ಹೆದ್ದಾರಿ ನಿರ್ಮಾಣ ಇನ್ನಿತರ ದೇಶದ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗಿದೆ, ರಾಜ್ಯದವರು ತೆರಿಗೆ ಪಡೆಯಬಹುದು. ಕೇಂದ್ರದವರು ಅಭಿವೃದ್ಧಿ ಮಾಡುವುದು ಬೇಡವೇ ಎನ್ನುವುದು ಬಿಜೆಪಿ ವಾದ.
ಬಂದ್ ಮಾಡುವ ಕಾಂಗ್ರೆಸ್ – ಜೆಡಿಎಸ್ಗೆ ನಿಜವಾಗಲೂ ಜನ ಪರ ಕಾಳಜಿ ಇದ್ದರೆ ಇಂಧನದ ಮೇಲೆ ಶೇ.32 ಸೆಸ್ ಕಡಿಮೆ ಮಾಡಲಿ. ಅದು ಬಿಟ್ಟು ಬಂದ್ ಮಾಡುವುದು ಏಕೆ ? ಇದು ಬಿಜೆಪಿ ಪ್ರಶ್ನೆ. ಒಂದು ವೇಳೆ ಇಂಧನ ತೆರಿಗೆ ಇಳಿಸಿದರೆ ಅಧಿಕಾರಿಗಳು, ರಾಜಕಾರಣಿಗಳು ವೈಭವದ ಜೀವನ, ಟಿಎ ಡಿಎ ಹೇಗೆ ತೆಗೆದುಕೊಳ್ಳುವುದು ? ಇದು ಕಹಿಯಾದ ಸತ್ಯ.
ಪ್ರತಿ ಲೀ. 82 ರು. ಪೆಟ್ರೋಲ್ನಲ್ಲಿ ಕೇಂದ್ರಕ್ಕೆ ರಾಜ್ಯಕ್ಕೆ ತಲಾ 21 ರು. ಆಸುಪಾಸು ತೆರಿಗೆ ರೂಪದಲ್ಲಿ ಜನರು ಹೆಚ್ಚುವರಿಯಾಗಿ ನೀಡುತ್ತಿದ್ದಾರೆ. ಅಚ್ಚರಿ ಎಂದರೆ ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೊನ್ನೆಯಷ್ಟೇ ಇಂಧನದ ಮೇಲೆ ಹೆಚ್ಚುವರಿ ಸೆಸ್ ವಿಧಿಸಿದೆ ಮತ್ತು ಈಗ ಬಂದ್ಗೆ ಬೆಂಬಲ ಸೂಚಿಸಿದೆ ಇದೆಂಥ ವಿಪರ್ಯಾಸ !
ಏನೇ ಹೇಳಿದರೂ ಬಡ, ಮಧ್ಯಮ ವರ್ಗದವರ ಆದಾಯದ ತೆರಿಗೆಯ ಮೇಲೆಯೇ ಸರಕಾರಗಳು ನಡೆಯೋದು ಮತ್ತು ಅವರದೇ ಮತಗಳ ಮೇಲೆ ಕಣ್ಣಿಟ್ಟು ಗೆಲ್ಲಬೇಕು. ಅದಕ್ಕೇ ಇದೆಲ್ಲ ನಾಟಕ ? ನಾವೆಲ್ಲಾ ವೀಕ್ಷಕರು.
ಬಿಜೆಪಿ ಬಂದ್ ಹೀಗೆ !
ಹಿಂದೆ ಬಿಜೆಪಿ, ಹಿಂದೂ ಸಂಘಟನೆಗಳು ಬಂದ್ ಮಾಡಲು ಮಾಡುತ್ತಿದ್ದ ಪ್ಲಾನ್ ಅತ್ಯಂತ ಕಡಿಮೆಖರ್ಚಿದ್ದು. ಬೆಳಗ್ಗೆ 4 ಗಂಟೆಗೆ ಹೆದ್ದಾರಿ ಮಧ್ಯೆ ಟಯರ್ಗೆ ಬೆಂಕಿ ಕೊಟ್ಟು ಒಂದೆರಡು ಬಸ್ ಗಳಿಗೆ ಕಲ್ಲು ಹೊಡೆಯೋದು. ಇದು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಬೆಳಗ್ಗೆ ಬಂದು ಬಿಟ್ಟರೆ ಅಲ್ಲಿಗೆ ಬಂದ್ ಸಂಪೂರ್ಣ ಯಶಸ್ವಿ.
ಅಧಿಕಾರ ಆಡಳಿತ ಪಕ್ಷಕ್ಕೆ ಮೀಸಲು !
ಇನ್ನು ಮೀಸಲು ವಿಚಾರ ಚರ್ಚೆ ಮಾಡೋಣ. ಮೊನ್ನೆ ಸ್ಥಳೀಯಾಡಳಿತ ಚುನಾವಣೆ ನಡೆಯಿತು. ಫಲಿತಾಂಶ ಪ್ರಕಟವಾದ ಬಳಿಕ ಬಹುಮತ ಇಲ್ಲದ ಕಡೆಯೂ ಅಧಿಕಾರ ಕಬಳಿಸಲು ಸರಕಾರ ಮತ್ತೆ ಮೀಸಲು ಪರಿಷ್ಕರಣೆ ಮಾಡುವ ಮೂಲಕ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿತು.
ಬಂಟ್ವಾಳದಲ್ಲಿ ಹೊಸ ಮೀಸಲು ಅನ್ವಯ ಕಾಂಗ್ರೆಸಿನ ಜನಾರ್ದನ ಚೆಂಡ್ತಿಮಾರ್ ಅಧ್ಯಕ್ಷರಾಗಲಿದ್ದಾರೆ. ಉಳ್ಳಾಲನಗರ ಸಭೆಯಲ್ಲಿ ಕಾಂಗ್ರೆಸಿಗೆ ಬಹುಮತ ಇಲ್ಲ. ಆದರೆ ಮೀಸಲಿನ ಅನ್ವಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸಿನ ಇಬ್ಬರು ಸದಸ್ಯರಿದ್ದಾರೆ. ಇನ್ನು ಎಸ್ಡಿಪಿಐ ಬೆಂಬಲ ಕೇಳುವ ಪ್ರಶ್ನೆಯೇ ಇಲ್ಲ. ಅವರು ಕೊಟ್ಟರೆ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವುದು ತಪ್ಪುತ್ತದೆ.
ಕುಂದಾಪುರ ಪುರಸಭೆಯಲ್ಲಿ ಬಿಜೆಪಿಯಲ್ಲಿ ಯಾವ ವರ್ಗದವರು ಗೆದ್ದಿಲ್ಲವೋ ಎಂಬುದನ್ನು ಪರಿಶೀಲಿಸಿ, ಹಿಂದುಳಿದ ಬಿ ವರ್ಗಕ್ಕೆ ಮೀಸಲು ನಿಗದಿ ಮಾಡಿದರು. ಹೀಗಾಗಿ ಕಾಂಗ್ರೆಸಿಗೆ ಬಹುಮತ ಇಲ್ಲದೇ ಇದ್ದರೂ ಅಧಿಕಾರ ಸಿಗಲಿದೆ.
ಕಾರ್ಕಳ ಪುರಸಭೆಯಲ್ಲಿಯೂ ಬಿಜೆಪಿಗೆ ಬಹುಮತ ಇದ್ದರೂ ಮೀಸಲು ಬದಲಾಯಿಸಿ ಎಸ್ಸಿ ಮಹಿಳೆಗೆ ಮೀಸಲು ಮಾಡಲಾಗಿದೆ. ಇದರಿಂದ ಕಾಂಗ್ರೆಸ್ಗೆ ಅಧ್ಯಕ್ಷ ಹುದ್ದೆ ಸಿಗಲಿದೆ. ಈ ರೀತಿ ರಾಜ್ಯದ 25 ಕಡೆಗಳಲ್ಲಿ ಫಲಿತಾಂಶ ಬಂದ ಬಳಿಕ ಮೀಸಲು ಬದಲಾಯಿಸುವ ಮೂಲಕ ಕಾಂಗ್ರೆಸ್ ಜೆಡಿಎಸ್ ಸರಕಾರ ತಮ್ಮ ವಿರೋಧಿ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡಲು ಶಾರ್ಟ್ ಕಟ್ ಬಳಸಿಕೊಂಡಿದೆ.
ಈ ಸಮ್ಮಿಶ್ರ ಸರಕಾರ ರಚನೆಯಾಗಿದ್ದೇ ಇಂಥ ಶಾರ್ಟ್ ಕಟ್ ಮೂಲಕ. ಜನರ ತೀರ್ಪಿಗೆ ವಿರುದ್ಧವಾಗಿ ಅಧಿಕಾರ ಬಳಸಿ ಗದ್ದುಗೆ ಹಿಡಿಯುವ ಕೆಲಸ ಮತ್ತೂ ಮುಂದುವರಿದಿದೆ.
ಸೂತ್ರದ ಬೊಂಬೆಗಳಾದರು ಈ ಅಧಿಕಾರಿಗಳು
ತಮ್ಮ ಮಾತು ಕೇಳದ ದಕ್ಷ ಅಧಿಕಾರಿಗಳನ್ನು ಬೇಕಾದಂತೆ ವರ್ಗಾವಣೆ ಮಾಡುತ್ತಾರೆ. ಇದಕ್ಕೆ ಇನ್ಸ್ಪೆಕ್ಟರ್ ಪ್ರಮೋದ್, ಎಸ್ಐ ಕಬ್ಬಲ್ ರಾಜ್ ಮೊದಲಾದವರು ಉದಾಹರಣೆ. ಆದರೆ ಈ ಕಡಕ್ ಅಧಿಕಾರಿಗಳು ಗಲಭೆ ಸಂದರ್ಭ ಇದೇ ರಾಜಕಾರಣಿಗಳಿಗೆ ನೆನಪಾಗುತ್ತಾರೆ. ಉಳ್ಳಾಲದಲ್ಲಿ ಗಲಭೆ ನಿಯಂತ್ರಣವಾಗಬೇಕಾದರೆ ಪ್ರಮೋದ್ ಬೇಕು ಎಂದು ಅಲ್ಲಿನ ಶಾಸಕರು ಅಲ್ಲಿಗೆ ವರ್ಗ ಮಾಡಿಸಿದರು. ಬಳಿಕ ಇವರದೇ ಆಡಳಿತದಲ್ಲಿ ಯಾವುದೋ ಕುಖ್ಯಾತ ಆರೋಪಿಯನ್ನು ಬಂಧಿಸಿದ ಎಂಬ ಕಾರಣಕ್ಕೆ ನಾನ್ ಎಕ್ಸಿಕ್ಯೂಟಿವ್ ವಿಭಾಗಕ್ಕೆ ಕಳುಹಿಸಿದರು.
ಕಡಕ್ ಅಧಿಕಾರಿ ಎಂ.ಕೆ.ಗಣಪತಿ ಅವರನ್ನು ಉಳ್ಳಾಲಕ್ಕೆ ಎರಡು ಬಾರಿ ಅಲ್ಲಿನ ಶಾಸಕರ ಮನವಿ ಮೇರೆಗೆ ವರ್ಗಾಯಿಸಲಾಗಿತ್ತು. ಆದರೆ ಇದೇ ಅಧಿಕಾರಿ ಕೊನೆಗೆ ದೌರ್ಜನ್ಯಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮಾಧ್ಯಮಗಳಲ್ಲಿ ಎಲ್ಲರೂ ಕಣ್ಣಾರೆ ನೋಡಿದವರು. ಆಗ ಮಾತ್ರ ಯಾರೂ ಇಲ್ಲ.
ಇದೀಗ ಕಬ್ಬಾಳ್ ರಾಜ್ ಸರದಿ. ದಕ್ಷ ಅಧಿಕರಿ ಕಬ್ಬಾಳ್ ರಾಜ್ ಅವರು ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ ತಡೆದ ಕಾರಣಕ್ಕೆ ವರ್ಗವಾದರು. ಬಳಿಕ ಪುಟ್ಬಾಲ್ನಂತೆ ಎಲ್ಲೆಡೆ ವರ್ಗವಾಗುತ್ತ ಕೊನೆಗೆ ರಮಾನಾಥ ರೈಮತ್ತು ಯು.ಟಿ.ಖಾದರ್ ಅವರ ಕೃಪಾದೃಷ್ಟಿಗೆ ಸಿಕ್ಕಿ “ಸಿಸಿಬಿ ಬಲಗೊಳಿಸಬೇಕು “ಎಂಬ ಕಾರಣಕ್ಕೆ ನೇಮಕವಾದರು. ನನಗೆ ಉಪದ್ರವ ಮಾಡಿದ್ದರೂ ಒಳ್ಳೆಯ ಅಧಿಕಾರಿ ಎಂಬಕಾರಣಕ್ಕೆ ಶಿಫಾರಸು ಮಾಡಿದ್ದೇನೆ ಎಂದು ರಮಾನಾಥ ರೈಗಳೇ ಹೇಳುತ್ತಾರೆ. ಆದರೆ ಸಿಸಿಬಿ ಬಂದ ಬಳಿಕವೂ ಕಬ್ಬಾಳ್ ರಾಜ್ ಮಸಾಜ್ ಸೆಂಟರ್ಗಳಿಗೆ, ಅಕ್ರಮ ಅಡ್ಡೆಗಳಿಗೆ ದಾಳಿ ಮಾಡುವ ಮೂಲಕ ಮೇಲಧಿಕಾರಿಗಳಿಗೆ ಕಿರಿಕ್ ಪಾರ್ಟಿ ಎನಿಸಿ ಈಗ ಸಂಚಾರಿ ಠಾಣೆಗೆ ಒಒಡಿ ಮೂಲಕ ಕಳುಹಿಸಿ ಬಿಟ್ಟಿದ್ದಾರೆ.
ಸಚಿವ ಖಾದರ್ ಪಾಪ ಆಸ್ಪತ್ರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಮಾನಾಥ ರೈಗಳ ಬಳಿ ಈಗ ಅಧಿಕಾರ ಇಲ್ಲ. ಹೀಗಾಗಿ ಅಧಿಕಾರಿಗೆ ನ್ಯಾಯ ಸಿಕ್ಕಿಲ್ಲ.
ಜಿತೇಂದ್ರ ಕುಂದೇಶ್ವರ
For Feedback:
kundeshwara@gmail.com
9945666324