ಉಡುಪಿ: ವೈದ್ಯಾಧಿಕಾರಿಯ ಕಿರುಕುಳ ತಾಳಲಾರದೆ ಸಹಾಯಕ ವೈದ್ಯಾಧಿಕಾರಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬ್ರಹ್ಮಾವರ ಆಸ್ಪತ್ರೆಯಲ್ಲಿ ನಡೆದಿದೆ.
ಬ್ರಹ್ಮಾವರ ಆಸ್ಪತ್ರೆಯಲ್ಲಿ ಕಿರಿಯ ಆರೋಗ್ಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ 25 ವರ್ಷದ ನಾಗರಾಜ್ ಎಂ.ಇ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಅಧಿಕಾರಿ.
ಮೂಲತ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೂಡಲವಿಠಲಾಪುರದ ನಾಗರಾಜ್, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳ ಹಿಂದೆ ನೇಮಕವಾಗಿದ್ದರು. ಕರ್ತವ್ಯದ ವಿಚಾರವಾಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ತಮಗೆ ಕಿರುಕುಳ ನೀಡುತ್ತಿದ್ದರು ಎಂದು ಆತ್ಮಹತ್ಯೆಗೆ ಮುನ್ನ ಬರೆದ ಪತ್ರದಲ್ಲಿ ನಾಗರಾಜ್ ಉಲ್ಲೇಖ ಮಾಡಿದ್ದರು.
ಬ್ರಹ್ಮಾವರ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ್ ಐತಾಳ್ ಎಂಬವರು ತಮಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ನಾಗರಾಜ್ ಆರೋಪಿಸಿದ್ದಾರೆ.
ಈ ಬಗ್ಗೆ ಡಿ.ಎಚ್.ಒ ಗೆ ದೂರು ನೀಡಿದ್ದರೂ ಪ್ರಯೋಜನವಾಗದೇ ಮನನೊಂದು ಆತ್ಮಹತ್ಯೆಗೆ ಮುಂದಾಗಿರುವುದಾಗಿ ನಾಗರಾಜ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ತಕ್ಷಣ ಅವರನ್ನು ರಕ್ಷಣೆ ಮಾಡಲಾಗಿದ್ದು, ತೀವ್ರ ಸ್ವರೂಪದ ಗಾಯಗಳಾಗಿರುವ ನಾಗರಾಜ್ ಅವರು ಸದ್ಯ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.