ಮಂಗಳೂರು;ತುಳು ಚಿತ್ರ ರಂಗದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ ಉಮಿಲ್ ತುಳು ಚಲನಚಿತ್ರ ನಾಳೆ ಬಿಡುಗಡೆ ಆಗಲಿದೆ. ತುಳು ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ನಿರ್ಮಾಣ ವಾದ ಚಿತ್ರ ಶುಕ್ರವಾರ ಬಿಡುಗಡೆ ಆಗಲಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ತುಳು ಚಿತ್ರ ವನ್ನು ವಿಭಿನ್ನ ವಾಗಿ ಮಾಡಬೇಕೆಂದು ಹೊರಟ ಚಿತ್ರತಂಡ ಉಮಿಲ್ ಚಿತ್ರದಲ್ಲಿ ಈ ಪ್ರಯತ್ನ ಮಾಡಿದೆ. ಉಮಿಲ್ ಚಿತ್ರ ಕನ್ನಡದ ಈಗವನ್ನು ನೆನಪಿಸುವ ಚಿತ್ರ. ಈಗದಲ್ಲಿ ನೊಣವನ್ನು ಗ್ರಾಫಿಕ್ಸ್ ಮೂಲಕ ಪ್ರಮುಖ ಪಾತ್ರದಲ್ಲಿ ಚಿತ್ರಿಸಿ ಚಿತ್ರನಿರ್ಮಾಣ ಮಾಡಲಾಗಿದ್ದರೆ ಉಮಿಲ್ ನಲ್ಲಿ ಸೊಳ್ಳೆಯನ್ನು ಪ್ರಮುಖ ಪಾತ್ರದಲ್ಲಿ ಚಿತ್ರಿಸಲಾಗಿದೆ. ತುಳು ಸಿನಿಮಾಪ್ರೇಮಿಗಳನ್ನು ಆಕರ್ಷಿಸಲು ಕಾಮಿಡಿ ಜೊತೆಗೆ ಗ್ರಾಫಿಕ್ಸ್ ತಂತ್ರಜ್ಞಾನದ ಪ್ರಯತ್ನದಿಂದ ತಯಾರಾದ ಚಿತ್ರ ಪ್ರೇಕ್ಷಕರ ಮನ ಗೆಲ್ಲುತ್ತದೆ ಎಂಬುದು ಉಮಿಲ್ ತಂಡದ ನಿರೀಕ್ಷೆಯಾಗಿದೆ.
ಭವಾನಿ ಫಿಲ್ಮ್ ಮೇಕರ್ಸ್ ಬ್ಯಾನರ್ ನಲ್ಲಿ ತಯಾರಾದ ಈ ಚಿತ್ರ ತುಳುವಿನ 101 ನೇ ಸಿನಿಮಾ.
ಉಮಿಲ್ ಚಿತ್ರಕ್ಕೆ ರಂಜಿತ್ ಸುವರ್ಣ ಅವರು ಕಥೆ, ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡಿದ್ದು ಕರುಣಾಕರ ಶೆಟ್ಟಿ, ಪ್ರಜ್ಞೇಶ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪವನ್ ಕರ್ಕೇರ ಛಾಯಾಗ್ರಹಣ ಮಾಡಿದ್ದು ಹರೀಶ್ ಕೊಡ್ಪಾಡಿ ಸಂಕಲನ ಮಾಡಿದ್ದಾರೆ. ಉಮೇಶ್ ಮಿಜಾರ್ ನಾಯಕನಾಗಿ , ಪೂಜಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ತುಳು ಚಿತ್ರರಂಗದ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಮೊದಲಾದವರು ನಟಿಸಿರುವ ಈ ಚಿತ್ರ ಕುತೂಹಲ ಮೂಡಿಸಿದೆ.
ತುಳು ಚಿತ್ರರಸಿಕರು ವಿಭಿನ್ನವಾಗಿ ಮೂಡಿಬಂದ ಚಿತ್ರನೋಡಲು ಕಾತರದಿಂದ ಕಾಯುತ್ತಿದ್ದಾರೆ