ವಯೋವೃದ್ಧರು, ಅಂಗವಿಕಲರು, ಅಶಕ್ತರಿಗೆ ಉಮ್ರಾ ನಿರ್ವಹಿಸಬೇಕೆಂಬ ಆಸೆ ಇದೆ. ಆದರೆ ಮಕ್ಕಾದಲ್ಲಿ ಲಕ್ಷಾಂತರ ಜನಜಂಗುಳಿ ಮಧ್ಯೆ ಹೇಗಪ್ಪಾ ಉಮ್ರಾ ನಿರ್ವಹಿಸುವುದು ಎಂಬ ಆತಂಕವಿರುವ ಅಶಕ್ತರು ಇದೀಗ ನಿರಾಯಾಸವಾಗಿ ಯಾರದೇ ಸಹಾಯವಿಲ್ಲದೇ, ವ್ಹೀಲ್ ಚೆಯರ್ ಸಹಾಯಕರಿಲ್ಲದೆ ಉಮ್ರಾ ನಿರ್ವಹಿಸಬಹುದು. ದಿನನಿತ್ಯ ತವಾಫ್ ಕೂಡಾ ಮಾಡಬಹುದು. ಕಅಬಾಲಯಕ್ಕೆ ಸುತ್ತು ಬರಬಹುದು.
ಪವಿತ್ರ ಮಕ್ಕಾದ ಎರಡನೇ ಅಂತಸ್ತು ಇಂತಹವರ ಸೇವೆಗಾಗಿ ಮೀಸಲಾಗಿದೆ. ಅಲ್ಲಿ ಜನಜಂಗುಳಿ ಇಲ್ಲ. ಬದಲಿಗೆ ಎಲೆಕ್ಟ್ರಿಕ್ ವ್ಹೀಲ್ ಚೆಯರ್ ಗಳದ್ದೇ ಕಾರುಬಾರು. ನಿಧಾನಗತಿಯಲ್ಲಿ ಅಂದರೆ ಗಂಟೆಗೆ ಸರಾಸರಿ 10 ಕಿ.ಮೀ. ಚಲಿಸುವ ಈ ಎಲೆಕ್ಟ್ರಿಕ್ ಚೆಯರ್ ಚಾಲನೆ ಮಾಡಲು ಸಹಾಯಕನ ಅಗತ್ಯವಿಲ್ಲ. ಯಾರಿಗೂ ಡ್ರೈವ್ ಮಾಡಬಹುದಾದ ಸಂವಿಧಾನ. ಹ್ಯಾಂಡಲ್ ಹಾಗೂ ಬಲಬದಿಯ ಲಿವರ್ ಹಿಡ್ಕೊಂಡರೆ ಸಾಕು. ಅದರಷ್ಟಕ್ಕೆ ಚಲಿಸುತ್ತಾ ಧ್ಯಾನದಲ್ಲಿ ಮಗ್ನರಾಗಬಹುದು. ಲಿವರ್ ಬಿಟ್ಟರೆ ನಿಲ್ಲುತ್ತದೆ. ಎಡಬದಿಯ ಲಿವರ್ ಹಿಡಿದರೆ ರಿವರ್ಸ್ ಹೋಗುವುದು. ಈ ಚೆಯರ್’ಗೆ ನಾಲ್ಕು ಸಣ್ಣ ಚಕ್ರಗಳಿವೆ. ಇದು ವಿದ್ಯುತ್’ನಲ್ಲಿ ಚಾರ್ಜ್ ಆಗುತ್ತವೆ. ಇದರಲ್ಲಿ ಆಮೆಗತಿಯಲ್ಲೂ ಸಾಗಬಹುದು. ಮೊಲದಂತೆ ಓಡಬಹುದು. ಅಂತೂ ಸ್ಪೀಡ್ ಲಿಮಿಟ್ ಗಂಟೆಗೆ 8 ರಿಂದ 10 ಕಿ.ಮೀ ಅಷ್ಟೆ. ಇಬ್ಬರು ಕೂರುವ ಎಲೆಕ್ಟ್ರಿಕ್ ವ್ಹೀಲ್ ಚೆಯರ್’ಗೆ ಉಮ್ರಾ ನಿರ್ವಹಿಸಲು (ತವಾಫ್ ಮತ್ತು ಸಈ) 200 ರಿಯಾಲ್ ಪಾವತಿಸಬೇಕು. ಒಬ್ಬರ ಚೆಯರ್’ಗೆ 100 ರಿಯಾಲ್. ಇನ್ನು ಉಮ್ರ ನಿರ್ವಹಿಸದೇ ಕೇವಲ ತವಾಫ್ ಮಾಡುವುದಾದಲ್ಲಿ ಇಬ್ಬರಿಗೆ 100 ರಿಯಾಲ್ ಹಾಗೂ ಒಬ್ಬರಿಗಾದರೆ 50 ರಿಯಾಲ್ ಪಾವತಿಸಬೇಕು. ಸಹಸ್ರಾರು ಎಲೆಕ್ಟ್ರಿಕ್ ವ್ಹೀಲ್ ಚೆಯರ್’ಗಳು ಮಕ್ಕಾ ಹರಂನ ಎರಡನೇ ಮಹಡಿಯಲ್ಲಿದೆ.
ಅಲ್ಲಿ ಹೋಗಿ ಕೌಂಟರ್’ನಲ್ಲಿ “ಅರಬಾ ಕಹ್ರಬಾ” ಅಂದರೆ ಸಾಕು. ನೀವು ದುಡ್ಡು ಕೊಟ್ಟು ಇಲೆಕ್ಟ್ರಿಕ್ ವ್ಹೀಲ್ ಚೆಯರ್ ಪಡೆಯಬಹುದು. ಎರಡನೇ ಮಹಡಿಯಲ್ಲಿ ತವಾಫ್ ಮಾಡುವುದೆಂದರೆ ಸರಿ ಸುಮಾರು 1 ಕಿ.ಮೀ. ಇದೆ. ಕನಿಷ್ಟ 7 ಸುತ್ತು ತವಾಫ್’ಗೆ 40 ನಿಮಿಷ ತಗಲುತ್ತದೆ. ಉಮ್ರಾ ನಿರ್ವಹಿಸಲು ಸುಮಾರು ಒಂದೂವರೆ ಗಂಟೆ ಬೇಕು.
ಇದಲ್ಲದೇ ಅಶಕ್ತರಿಗಾಗಿ ಕಅಬಾಲಯ ಪ್ರದಕ್ಷಿಣೆಗೆ 15,000 ಕ್ಕೂ ಅಧಿಕ ಮಾಮೂಲಿ ವ್ಹೀಲ್ ಚೆಯರ್’ಗಳು ಉಚಿತವಾಗಿ ವಿತರಿಸಲಾಗುತ್ತಿದೆ. ಹರಂನ ಹೊರಗಡೆ ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ಎರಡು ವ್ಹೀಲ್ ಚೆಯರ್ ಉಚಿತವಾಗಿ ನೀಡುವ ಕಛೇರಿಗಳಿವೆ. ಅಲ್ಲಿ “ಅರಬಾ ಮಜನನ್” ಅಂತ ಕೇಳಿದರೆ ವಿವರ ದಾಖಲು ಮಾಡಿ ಉಮ್ರಾ ಮತ್ತು ತವಾಫ್’ಗೆ ಉಚಿತ ವ್ಹೀಲ್ ಚೆಯರ್ ಸಂವಿಧಾನವನ್ನು ಪಡೆಯಬಹುದು. ಅದನ್ನು ಪಡೆದರೆ ಅಲ್ಲಿಯೇ ಹಿಂದಿರುಗಿಸಬೇಕೆಂಬ ನಿಯಮವಿದೆ. ಹರಂನ ಸನಿಹವಿರುವ ಹೆಚ್ಚಿನ ಹೋಟೆಲ್’ಗಳಲ್ಲಿ ಕೂಡಾ ವ್ಹೀಲ್ ಚೆಯರ್ ಸೌಲಭ್ಯವಿದೆ. ಯೂನಿಫಾರಂ ಹಾಕಿರುವ ಡ್ರೈವರ್ (ಮುತವ್ವಿಫ್) ಇರುವ ವ್ಹೀಲ್ ಚೆಯರ್ ಪಡೆದರೆ ಅದಕ್ಕವರು ಉಮ್ರ ನಿರ್ವಹಿಸಲು 150 ರಿಯಾಲ್ ಚಾರ್ಜ್ ಮಾಡುತ್ತಾರೆ. ಒಟ್ಟಿನಲ್ಲಿ ಮಕ್ಕಾ ಮಸೀದಿಯಲ್ಲಿ ಎಲ್ಲಾ ಸ್ತರದ ಜನರಿಗೆ ಬೇಕಾದ ಸೌಕರ್ಯಗಳು ಇವೆ.
~ ಬರಹ : ರಶೀದ್ ವಿಟ್ಲ