ಬೆಂಗಳೂರು: ಮೈತ್ರಿ ಸರ್ಕಾರ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿ, ಸ್ವತಃ ಮುಖ್ಯಮಂತ್ರಿಯವರೇ ಪದತ್ಯಾಗದ ಮಾತಾಡಿದ್ದಾರೆ. ಕೈ ಶಾಸಕರ ಹದ್ದುಮೀರಿದ ವರ್ತನೆಯಿಂದ ಬೇಸತ್ತು ಅವರು ಶಸ್ತ್ರ ತ್ಯಜಿಸುವ ಮಾತಾಡಿದ್ದಾರೆ.
ಬಹಿರಂಗ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಶಾಸಕರ ವಿರುದ್ಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಅಧಿಕಾರದಾಹಿಯಲ್ಲ, ಈಗಲೇ ರಾಜೀನಾಮೆ ನೀಡಲು ಸಿದ್ಧ ಎಂದು ಮಿತ್ರ ಪಕ್ಷಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸಿದ್ದರಾಮಯ್ಯನವರೇ ನಮ್ಮ ನಾಯಕರು ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ಕುರಿತಂತೆ ಸೋಮವಾರ ಸುದ್ದಿಗಾರರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದಾಗ, ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ, ಪದೇ, ಪದೇ, ಕಾಂಗ್ರೆಸ ನಾಯಕರು ಮಿತಿಮೀರಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಈ ಬಗ್ಗೆ ಕಾಂಗ್ರೆಸ್ ನಾಯಕರು, ಹೈಕಮಾಂಡ್ ಉತ್ತರ ಕೊಡಬೇಕು. ನಾನು ಅದಕ್ಕೆ ಉತ್ತರ ಕೊಡಲು ಸಮರ್ಪಕ ವ್ಯಕ್ತಿಯಲ್ಲ. ಆದರೆ ಪದೇ,ಪದೇ ಕಾಂಗ್ರೆಸ್ ಶಾಸಕರು ಹೀಗೆ
ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಸಿಎಂ ಕುರ್ಚಿಯಿಂದಕೆಳಗಿಳಿಯಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.