ಮಂಗಳೂರು: ಮಾಧ್ಯಮದವರು ನನ್ನ ಮೇಲೆ ಸಿಟ್ಟಿನಿಂದ ಸುದ್ದಿ ಮಾಡುತ್ತಿದ್ದು ಅವರಿಗೆ ಎಥಿಕ್ಸ್ ಇದೆಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇವಲ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ಒಂದೇ ಕಡೆ ಚುನಾವಣೆ ನಡೆಯುತ್ತಿರುವ ಹಾಗೆ ಬಿಂಬಿಸಲು ಹೊರಟಿದ್ದಾರೆ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಮಂಡ್ಯ ಚುನಾವಣೆಯ ಬಗ್ಗೆ ಮೇ 23 ರಂದು ಮಾತನಾಡುತ್ತೇನೆ. ಮಂಡ್ಯದಲ್ಲಿ ಮಾಧ್ಯಮದ ವ್ಯವಸ್ಥಾಪಕರು ಪಕ್ಷಗಳಿಗಿಂತ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ನನ್ನನ್ನು ಯಾವ ರೀತಿ ಮುಗಿಸಬೇಕೆಂದು ಕಾಯುತ್ತಿದ್ದಾರೆ. ನನಗೆ ಮಾಧ್ಯಮದ ಮೇಲೆ ಯಾವುದೇ ಕೋಪ ಇಲ್ಲ. ಆದರೆ ಅವರಿಗೆ ಏಕೆ ಕೋಪ ಎಂದು ಗೊತ್ತಿಲ್ಲ. ಎಲ್ಲಾ ಮಾಧ್ಯಮದವರು ನನ್ನ ವಿರುದ್ಧವಾಗಿ ನಿಂತಿದ್ದಾರೆ. ಇದೊಂದು ಪ್ರಚಾರ ಎಂದು ಹೇಳಲಾಗುತ್ತಾ, ಮಾಧ್ಯಮಗಳಿಗೆ ನೀತಿ ಎಂಬುದಿಲ್ಲವೆ ಎಂದು ಪ್ರಶ್ನಿಸಿದರು.
ನಿಮ್ಮ ಇಡೀ ಸರ್ಕಾರವೇ ಮಂಡ್ಯದಲ್ಲಿ ಹೋಗಿ ಕುಳಿತಿದೆಯಲ್ಲಾ ಎಂಬ ಪ್ರಶ್ನೆಗೆ ಕೆಂಡಾಮಂಡಲವಾದ ಸಿಎಂ, ನಮ್ಮ ಶಾಸಕರೆಲ್ಲ ಇರೋದು ಅಲ್ಲದೆ ಅವರಿನ್ನು ಬೇರೆಡೆ ಹೋಗೋಕಾಗುತ್ತಾ ಅಂತಾಪ್ರಶ್ನಿಸಿದರು.
ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಈ ಮೂರೂ ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೇರಿದಂತೆ ನಮ್ಮ ಮುಖಂಡರುಗಳೊಂದಿಗೆ ಯಾವ ರೀತಿ ಚುನಾವಣೆಯನ್ನು ಎದುರಿಸಬೇಕೆಂದು ಚರ್ಚೆ ಮಾಡಿದ್ದೇವೆ. ಈಗಾಗಾಲೇ ಉತ್ತರ ಕರ್ನಾಟಕ ಭಾಗಗಳಲ್ಲಿ ಹಾಗೂ ಉಡುಪಿ ಚಿಕ್ಕಮಗಳೂರು ಎಲ್ಲಾ ಕಡೆಗಳಲ್ಲಿ ಸಭೆ ನಡೆಸಿದ್ದೇನೆ. ಅಲ್ಲಿ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಿಎಂ ಹೇಳಿದರು.
ನರೇಂದ್ರ ಮೋದಿ ಎ.13 ರಂದು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ. ಅವರದ್ದು 13 ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ತೊಂದರೆ ಆಗುತ್ತೆ ಅನ್ನೋ ಕಾರಣಕ್ಕೆ ಒಂದೆರಡು ದಿನ ಹೆಚ್ಚು ಕಡಿಮೆ ಆಗಬಹುದು ಎಂದು ತಿಳಿಸಿದರು.