ಮ೦ಗಳೂರು: ಎ. ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ರಜತಮಹೋತ್ಸವ: ದಂತ ಶಿಕ್ಷಣ ಗುಣಮಟ್ಟದಲ್ಲಿ ರಾಜಿ ಇಲ್ಲ : ಡಾ| ಕೊಹ್ಲಿ |
ಪ್ರಕಟಿಸಿದ ದಿನಾಂಕ : 2010-02-07
ಮಂಗಳೂರು, ಫೆ. ೬: ದಂತ ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಭಾರತೀಯ ದಂತ ವೈದ್ಯಕೀಯ ಮಂಡಳಿ ವಿಶೇಷ ಆದ್ಯತೆ ನೀಡುತ್ತಿದ್ದು, ಇದರಲ್ಲಿ ಯಾವುದೇ ರಾಜಿ ಪ್ರಶ್ನೆ ಇಲ್ಲ ಎಂದು ಮಂಡಳಿ ಅಧ್ಯಕ್ಷ ಬ್ರಿ| ಡಾ| ಅನಿಲ್ ಕೊಹ್ಲಿ ಶನಿವಾರ ಹೇಳಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಎ. ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದಂತ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹಾಗೂ ವೃತ್ತಿ ಕ್ಷೇತ್ರದ ಭವಿಷ್ಯವನ್ನು ಗಮನದಲ್ಲಿಟ್ಟು ಕೊಂಡು, ಮುಂದಿನ ೫ ವರ್ಷಗಳಲ್ಲಿ ಹೊಸ ಕಾಲೇಜುಗಳಿಗೆ ಮಾನ್ಯತೆ ನೀಡದಿರಲು ಮಂಡಳಿ ತೀರ್ಮಾನಿಸಿದೆ. ಇದೇ ಸಂದರ್ಭದಲ್ಲಿ ಪ್ರಸ್ತುತವಿರುವ ಕಾಲೇಜುಗಳಲ್ಲಿ ಗುಣಮಟ್ಟ ಹಾಗೂ ಸೌಲಭ್ಯಗಳ ಕುಸಿತ ಕಂಡು ಬಂದರೆ ಅವುಗಳ ಮಾನ್ಯತೆ ರದ್ದುಪಡಿಸಲು ಹಿಂಜರಿಯುವುದಿಲ್ಲ ಎಂದರು.
ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯ ದೇಶದಲ್ಲೆ ಪ್ರತಿಷ್ಠಿತ ಕಾಲೇಜು ಎಂದು ಗುರುತಿಸಲ್ಪಟ್ಟಿದೆ. ಗುಣಮಟ್ಟದ ಶಿಕ್ಷಣ, ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ ಎಂದ ಅವರು ಇದಕ್ಕಾಗಿ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್. ವಿನಯ ಹೆಗ್ಡೆ ಹಾಗೂ ಪ್ರಾಧ್ಯಾಪಕ ವೃಂದವನ್ನು ಅಭಿನಂದಿಸಿದರು.
ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ, ನಿಟ್ಟೆ ವಿಶ್ವವಿದ್ಯಾನಿಲಯ ಕುಲಪತಿ ಎನ್. ವಿನಯ ಹೆಗ್ಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟೆ ವಿವಿ ಉಪಕುಲಪತಿ ಡಾ| ಎಂ. ಶಾಂತರಾಮ್ ಶೆಟ್ಟಿ ಅತಿಥಿಯಾಗಿದ್ದರು. ಡಾ| ಪ್ರದೀಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ವಿಶಾಲ್ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಪ್ರಾಂಶುಪಾಲ ಡಾ| ಬಿ. ರಾಜೇಂದ್ರ ಪ್ರಸಾದ್ ಸ್ವಾಗತಿಸಿ, ಡೀನ್ ಡಾ| ಯು. ಎಸ್. ಕೃಷ್ಣ ನಾಯಕ್ ವರದಿ ಮಂಡಿಸಿದರು. ರಿಜಿಸ್ಟ್ರಾರ್ ಡಾ| ರಾಜ್‌ಶೇಖರ್ ಎಂ. ಕಾರ್‍ಯ ಕ್ರಮ ನಿರ್ವಹಿಸಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-07
|
|
|