ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ |
ಪ್ರಕಟಿಸಿದ ದಿನಾಂಕ : 2010-03-09
ಮುಂದಿನ 3ರಿಂದ 5 ವರ್ಷಗಳಲ್ಲಿ ಭಾರಿ ಪ್ರಮಾಣದ ಖಾಸಗಿ ಬಂಡವಾಳ ಆಕರ್ಷಿಸುವ ರಾಜ್ಯ ಸರ್ಕಾರದ ಮೊಟ್ಟ ಮೊದಲ ಸಮಗ್ರ ಪ್ರವಾಸೋದ್ಯಮ ಯೋಜನೆಯನ್ನು ಸೋಮವಾರ ಇಲ್ಲಿ ಬಿಡುಗಡೆ ಮಾಡಲಾಯಿತು.
ಬೆಂಗಳೂರು ಈ ಸಮಗ್ರ ಪ್ರವಾಸೋದ್ಯಮ ಯೋಜನೆಯಡಿ ಖಾಸಗಿ ರಂಗದಿಂದ ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು.
ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಈ ಸಮಗ್ರ ಪ್ರವಾಸೋದ್ಯಮ ನೀತಿಯಿಂದ ರಾಜ್ಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎರಡು ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸಲು ಸಾಧ್ಯವಿದೆ ಎಂದರು. ಈ ಯೋಜನೆಯು ಉದ್ಯೋಗ ಅವಕಾಶ ಸೃಷ್ಟಿ, ನಿರ್ದಿಷ್ಟ ಪರಿಕಲ್ಪನೆಯ ನಗರ ಮತ್ತು ಉದ್ಯಾನ ನಿರ್ಮಾಣ, ಪ್ರವಾಸಿಗರ ಸುರಕ್ಷತೆ ಮತ್ತು ಪ್ರವಾಸೋದ್ಯಮ ರಂಗದ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ನೆರವಾಗಲಿದೆ ಎಂದರು. ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶಕ್ಕೆ ಬಂಡವಾಳ ಹೂಡಿಕೆ ಮಾಡಲು ರಾಜ್ಯ ಪ್ರವಾಸೋದ್ಯಮ ಇಲಾಖೆಯು ವಿಶೇಷ ಬಂಡವಾಳ ನಿಧಿಯನ್ನೂ ಸ್ಥಾಪಿಸಲಿದೆ ಎಂದರು.
ಸುವರ್ಣ ರಥ ವಿಸ್ತರಣೆ: ವಿಲಾಸಿ ರೈಲು ‘ಸುವರ್ಣ ರಥ’ ಸೇವೆಯನ್ನು ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯದ ಪ್ರವಾಸಿ ಧಾಮಗಳಿಗೂ ವಿಸ್ತರಿಸುವ ಯೋಜನೆಗೂ ಸಚಿವ ಜನಾರ್ದನರೆಡ್ಡಿ ಅವರು ಚಾಲನೆ ನೀಡಿದರು. ರಾಜ್ಯ ಸರ್ಕಾರವೇ ನಿರ್ವಹಿಸುತ್ತಿರುವ ಈ ವಿಲಾಸಿ ರೈಲು ಪ್ರವಾಸ ಯೋಜನೆಯನ್ನು ದಕ್ಷಿಣ ಭಾರತದ ಪ್ರವಾಸಿಗರ ಬೇಡಿಕೆ ಮೇರೆಗೆ ವಿಸ್ತರಿಸಲಾಗುತ್ತಿದೆ. ಏಳು ರಾತ್ರಿ ಮತ್ತು ಎಂಟು ದಿನಗಳ ಈ ಪ್ರವಾಸ ಕಾರ್ಯಕ್ರಮವು ಹಲವಾರು ಆಕರ್ಷಕ ತಾಣಗಳಿಗೆ ಭೇಟಿ ನೀಡುವ ಬಗೆಯಲ್ಲಿ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಈ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ರೂ 15 ಸಾವಿರ ಬೆಲೆ ನಿಗದಿಪಡಿಸಲಾಗಿದೆ.

ಮಧ್ಯಮ ವರ್ಗದವರಿಗೆ ‘ಸಿಲ್ವರ್ ಚಾರಿಯೆಟ್’
ಬೆಂಗಳೂರು, ಮಾ.೮: ಮಧ್ಯಮ ವರ್ಗಕ್ಕೆ ಸಂತಸದ ಸುದ್ದಿ.
ರಾಜ್ಯ ಪ್ರವಾಸೋದ್ಯಮ ಇಲಾಖೆ ಮಧ್ಯಮವರ್ಗಕ್ಕಾಗಿಯೇ ಸಿಲ್ವರ್ ಚಾರಿಯೆಟ್ ಎಂಬ ಪ್ರವಾಸಿ ಬಸ್ ಅನ್ನು ಆರಂಭಿಸಿದೆ. ಜತೆಗೆ ಸುವರ್ಣ ರಥ ರೈಲು ಯೋಜನೆಯನ್ನು ತಮಿಳುನಾಡು, ಕೇರಳ, ಪಾಂಡಿಚರಿಗೆ ವಿಸ್ತರಿಸಲಾಗಿದೆ.
ಸೋಮವಾರ ನಡೆದ ಸುವರ್ಣ ರಥ, ಸುವರ್ಣ ಸಿರಿ ಪ್ರವಾಸ ವಿಸ್ತರಣಾ ಪ್ರಾರಂಭೋತ್ಸವದಲ್ಲಿ ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಸುವರ್ಣ ರಥ ವಿಸ್ತರಣೆ ಹಾಗೂ ಹೊಸ ಪ್ಯಾಕೇಜ್ ಪ್ರವಾಸವನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿದರು.
ಸುವರ್ಣ ರಥ ಪ್ರತಿ ಶುಕ್ರವಾರ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ, ಮಡಿಕೇರಿ, ಹಾಸನ, ಬಾದಾಮಿ, ಹಂಪಿ ಮೂಲಕ ಬೆಂಗಳೂರು ತಲುಪಲಿದೆ ಎಂದು ವಿವರಿಸಿದರು.
ಎರಡು-ಮೂರು ತಿಂಗಳಲ್ಲಿ ರಾಜ್ಯದಲ್ಲಿ ಹೆಲಿಟೂರಿಸಂ ಪ್ರಾರಂಭವಾಗಲಿದೆ. ಇದನ್ನು ಕರಾವಳಿ, ಮಲೆನಾಡು, ಸಾಂಪ್ರದಾಯಿಕ ತಾಣ ಎಂದು ಮೂರು ಪ್ರದೇಶಗಳಿಂದ ಪ್ರಾರಂಭಿಸಲಾಗುವುದು. ಏಪ್ರಿಲ್ ಒಳಗೆ ೨೮ ಕಡೆ ಹೆಲಿಪ್ಯಾಡ್ ನಿರ್ಮಿಸಲಿದ್ದು, ಈಗಾಗಲೇ ಕೆಲವು ಕಡೆ ಪೂರ್ಣಗೊಂಡಿದೆ. ಮಾರ್ಚ್ ೨೧ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯಕ್ಕೆ ಬರುವ ಪ್ರವಾಸಿಗರ ರಕ್ಷಣೆಗೆ ಗ್ರೀನ್ ಪಾಲಿಸಿ ಜಾರಿ ಮಾಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ವಿಶ್ವದ ಗಮನ ಸೆಳೆಯಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ೧೮ ಕೋಟಿ ರು. ವೆಚ್ಚ ದಲ್ಲಿ ನೈಟ್ ಸಫಾರಿ ಯೋಜನೆಯನ್ನು ಕೈಗೆತ್ತಿ ಕೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಟ್ವೆಂಟಿ-೨೦ ಯೋಜನೆ ಸಿದ್ಧಗೊಂಡಿದ್ದು, ಸಂಪುಟ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು. ಸಮಾರಂಭದಲ್ಲಿ ಶಾಸಕ ರೋಷನ್ ಬೇಗ್, ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿ ಜ್ಯೋತಿರಾಮಲಿಂಗಂ, ನಿರ್ದೇಶಕ ವಿಶ್ವನಾಥರೆಡ್ಡಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-09
|
|
|