ಮ೦ಗಳೂರು: ಅವನತಿಯತ್ತ ಬಾವಲಿ ಸಂತತಿ |
ಪ್ರಕಟಿಸಿದ ದಿನಾಂಕ : 2010-03-16
ಮಂಗಳೂರು: ಪ್ರಕೃತಿಯ ನಿಯಮವೇ ಒಂದು ವಿಸ್ಮಯ. ಅದು ತನ್ನೊಳಗೆ ಅದೆಷ್ಟೋ ಪ್ರಾಣಿ, ಪಕ್ಷಿ, ಜಲಚರ, ಕೀಟ, ಗಿಡ, ಮರಗಳಿಗೆ ಆಶ್ರಯ ನೀಡಿದೆ. ಪ್ರತಿ ಪ್ರಾಣಿ, ಪಕ್ಷಿಗಳು ಬದುಕುವ ರೀತಿ ನೀತಿ ವಿಭಿನ್ನ. ಅವುಗಳ ಅಂಗ ಸೌಷ್ಠವ, ಜೀವನ ಕ್ರಮ, ರಕ್ಷಣೆ ಪಡೆಯಲು ಆಯ್ದುಕೊಳ್ಳುವ ಸ್ಥಳ ಹೀಗೆ ಎಲ್ಲವೂ ಅರ್ಥಗರ್ಭಿತ.
ಪರಿಸರದಲ್ಲಿ ಅಪರೂಪವಾಗುತ್ತಿರುವ ಬಾವಲಿಯ ಬದುಕು-ಬವಣೆಯತ್ತ ಕಣ್ಣು ಹಾಯಿಸಿದಾಗ ಹಲವು ವಿಸ್ಮಯ ಸಂಗತಿಗಳು ತೆರೆದುಕೊಳ್ಳುತ್ತವೆ. ೧೦ -೧೫ ವರ್ಷ ಹಿಂದೆ ಅಲ್ಲಲ್ಲಿ ಸಂಘ ಜೀವಿಗಳಾಗಿ ಚಿರ್ರ್ ಚಿರ್ರನೆ ಚೀರುತ್ತಾ ಹಲಸಿನ ಹಣ್ಣಿನಂತೆ ಮರದ ಗೆಲ್ಲುಗಳಲ್ಲಿ ನೇತಾಡುತ್ತಿದ್ದ ಹಳದಿ ಮಿಶ್ರಿತ ಕಪ್ಪು ಬಣ್ಣದ ಹೂ ಗುಚ್ಛಗಳಂತೆ ಶೋಭಿಸುವ ಬಾವಲಿಗಳ ರಮಣೀಯ ದೃಶ್ಯ ನೋಡಲು ಕಣ್ಣಿಗೆ ಹಬ್ಬ. ಮಕ್ಕಳಿಗೆ ಮಾತ್ರವಲ್ಲದೆ ಯುವಕರು, ವೃದ್ಧರೂ ಇದರ ಸುಂದರ ಸಂಸಾರ ವನ್ನು ಕಂಡು ಬೆರಗಾಗಲೇ ಬೇಕು. ಆದರೆ ಹಲವು ಕಾರಣಗಳಿಂದ ಅಂತಹ ದೃಶ್ಯ ಕಣ್ಮರೆಯಾಗುತ್ತಿದೆ. ಬಾವಲಿಗಳ ಸಂತತಿಯೂ ಕ್ಷೀಣಿಸುತ್ತಿದೆ.
ಬಾವಲಿಗಳು ನಿಶಾಚರಿಗಳು. ಇವುಗಳಲ್ಲಿ ಹಲವಾರು ಜಾತಿ. ಹಣ್ಣು, ಹುಳ ಹುಪ್ಪಡಿ, ಕ್ರಿಮಿ ಕೀಟಗಳನ್ನು ತಿಂದು ಹೊಟ್ಟೆ ಹೊರೆಯುತ್ತವೆ. ಹಗಲಿನ ಹೊತ್ತು ಮೌನವಾಗಿ ಮರದ ಪೊಟರೆ ಗಳಲ್ಲಿ, ಸುರಂಗಗಳಲ್ಲಿ, ಕಲ್ಲು ಬಂಡೆಗಳ ಎಡೆಗಳಲ್ಲಿ ಶಬ್ದ ಮಾಲಿನ್ಯ ಇಲ್ಲದ ಕಡೆ ವಾಸ ಮಾಡು ತ್ತವೆ. ರಾತ್ರಿ ವೇಳೆ ಆಹಾರ ಹುಡುಕುತ್ತಾ ಎಲ್ಲೆಂದೆಲ್ಲಿಗೂ ಸಂಚರಿಸುವ ಇವುಗಳು ಬೆಳಗಾಗುತ್ತಿ ದ್ದಂತೆ ಮತ್ತೆ ತಮ್ಮ ಗೂಡು ಸೇರಿಕೊಳ್ಳುತ್ತವೆ.
ಕೂಡು ಕುಟುಂಬದಲ್ಲಿ ವಾಸಿಸುವ ಬಾವಲಿಗಳು ಮರದ ಗೆಲ್ಲುಗಳಲ್ಲಿ ನೇತಾಡಿಕೊಳ್ಳುತ್ತವೆ. ತೆವ ಳುತ್ತಾ ಮರದ ತುದಿಯವರೆಗೂ ಹೋಗುತ್ತವೆ. ಒಂದಕ್ಕೊಂದು ಜಗಳವಾಡುತ್ತವೆ. ರೆಕ್ಕೆಗಳನ್ನು ಇಕ್ಕಡೆಗಳಲ್ಲಿ ಕೊಡೆಗಳಂತೆ ವಿಶಾಲವಾಗಿ ತೆರೆದು ವಿವಿಧ ಹಾವ ಭಾವಗಳೊಂದಿಗೆ ಬಿಸಿಲಿಗೆ ಮೈಯ್ಯೊಡ್ಡುತ್ತವೆ.
ಗುಬ್ಬಚ್ಚಿಗಳನ್ನು ನಾಶಗೊಳಿಸಿದ ಮೊಬೈಲ್ ತರಂಗ ಬಾವಲಿಗಳನ್ನೂ ಬಿಟ್ಟಿಲ್ಲ. ಹಿಂಡು ಹಿಂಡಾಗಿ ಮರಗಳಲ್ಲಿ ತೂಗುಯ್ಯಾಲೆಯಾಡುತ್ತಾ ಪ್ರೇಕ್ಷಕರಿಗೆ ಮನೋರಂಜನೆ ನೀಡುವ ಬಾವಲಿಗಳ ಸಂಖ್ಯೆ ಇಳಿಮುಖವಾಗಿದೆ. ಮಾಂಸಕ್ಕಾಗಿ ಅದನ್ನು ಬೇಟೆಯಾಡುವುದು. ವಾಸದ ಮರಗಳ ನಾಶ ಮುಂತಾದ ಕಾರಣದಿಂದಲೂ ಬಾವಲಿಗಳ ಸಂತತಿ ಅವನತಿಯತ್ತ ಸಾಗಲು ಪ್ರಮುಖ ಕಾರಣ.
ಅನೇಕ ಸಿನಿಮಾ, ಸಾಕ್ಷ್ಯಚಿತ್ರಗಳಲ್ಲಿ ಬಾವಲಿಗಳ ಬದುಕಿನ ಸ್ವಾರಸ್ಯಕರ ದೃಶ್ಯಗಳನ್ನು ಕಾಣ ಬಹುದು. ಅವನತಿಯಲ್ಲಿರುವ ಇದರ ಸಂತತಿಯ ರಕ್ಷಣೆಯತ್ತ ಮುಂಜಾಗರುಕತಾ ಕ್ರಮ ಅನು ಸರಿಸದಿದ್ದಲ್ಲಿ ಮುಂದೊಂದು ದಿನ ಅವುಗಳನ್ನು ಚಿತ್ರಗಳಲ್ಲಿ ಮಾತ್ರ ನೋಡುವ ಅನಿವಾರ್ಯತೆ ಬಂದೊದಗುವುದರಲ್ಲಿ ಎರಡು ಮಾತಿಲ್ಲ.
ವರದಿಯ ವಿವರಗಳು |
 |
ಕೃಪೆ : ಹರೀಶ್ ಮೋಟುಕಾನ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-16
|
|
|