ವಿದೇಶಿಗನ ಕುಂಚದಲ್ಲಿ ಅರಳಿದ ಹಂಪಿ |
ಪ್ರಕಟಿಸಿದ ದಿನಾಂಕ : 2010-07-29
ಈ ಕಲಾವಿದ ಹಾಲೆಂಡ್ ಮೂಲದವರು. ಪ್ರವಾಸಿಯಾಗಿ ಹಂಪಿಗೆ ಬಂದರು. ಇಲ್ಲಿನ ಸುಂದರ ಪರಿಸರಕ್ಕೆ ಮನಸೋತು ಇಲ್ಲಿಯೇ ಉಳಿಯುವ ನಿರ್ಧಾರ ಮಾಡಿದರು. ಹಂಪಿಯ ಸ್ಮಾರಕಗಳು ಹಾಗೂ ಜನ ಜೀವನ ಕುರಿತು ಅವರು ಅಸಂಖ್ಯಾತ ಚಿತ್ರಗಳನ್ನು ರಚಿಸಿದ್ದಾರೆ!
ಹಂಪಿಗೆ ವರ್ಷದ ಏಳೆಂಟು ತಿಂಗಳ ಕಾಲ ನೂರಾರು ಮಂದಿ ವಿದೇಶಿ ಪ್ರವಾಸಿಗರು ಬಂದು ಹೋಗುತ್ತಾರೆ. ಕೆಲವರು ತಿಂಗಳುಗಟ್ಟಲೇ ಹಂಪಿಯಲ್ಲಿದ್ದು ಅಲ್ಲಿನ ಸ್ಮಾರಕಗಳನ್ನು ನೋಡಿ ಕಣ್ಣು ತುಂಬಿ ಕೊಳ್ಳುತ್ತಾರೆ. ಹಂಪಿಯಲ್ಲೇ ದೀರ್ಘ ಕಾಲ ಉಳಿದವರೂ ಇದ್ದಾರೆ. ಅಂಥವರಲ್ಲಿ ಹಾಲೆಂಡ್‌ನ ರಾಬರ್ಟ್ ಗಿಸಿಂಕ್ ಒಬ್ಬರು.
ಹಂಪಿಯಲ್ಲಿ ವಿರೂಪಾಕ್ಷ ದೇವಸ್ಥಾನದ ಹಿಂಭಾಗದ ಪ್ರಕಾಶ ನಗರದ ಪುಟ್ಟ ಮನೆಯೊಂದರಲ್ಲಿ ರಾಬರ್ಟ್ ವಾಸಿಸುತ್ತಾರೆ. ಮನೆಯ ಮಹಡಿಯಲ್ಲಿ ಕುಳಿತು ಚಿತ್ರ ಬಿಡಿಸುವುದರಲ್ಲಿ ಅವರು ಮಗ್ನನಾಗಿರುತ್ತಾರೆ. ರಾಬರ್ಟ್ ಅವರ ಕುಂಚದಲ್ಲಿ ಹಂಪಿಯ ಜನ ಸಾಮಾನ್ಯರ ಬದುಕು ಮತ್ತು ಸ್ಮಾರಕಗಳ ಸೌಂದರ್ಯ ಅದ್ಭುತವಾಗಿ ಅರಳಿದೆ.
ಸ್ಮಾರಕಗಳು, ದೇವಸ್ಥಾನಗಳು, ತುಂಗಭದ್ರಾ ನದಿ ತೀರ, ವರ್ಣಮಯ ಲಂಬಾಣಿ ಮಹಿಳೆಯರು ಅವರ ಕ್ಯಾನ್ವಾಸ್‌ಗಳ ಮೇಲೆ ಕಲಾಕೃತಿಗಳಾಗಿ ಅರಳಿವೆ. ಅವರ ಚಿತ್ರಗಳಿಗೆ ಯುರೋಪ್ ದೇಶ ಗಳಲ್ಲಿ ಹೆಚ್ಚು ಬೇಡಿಕೆ ಇದೆಯಂತೆ. 1975 ರಿಂದ 1987 ರವರೆಗೆ ಅವರು ಡಚ್ ಸರ್ಕಾರದೊಂ ದಿಗೆ ಒಪ್ಪಂದ ಮಾಡಿಕೊಂಡು ಚಿತ್ರ ಬರೆದು ಕೊಟ್ಟು 25,000 ಮಾಸಿಕ ಗೌರವ ಧನ ಪಡೆಯುತ್ತಿದ್ದರು. ಆಮ್‌ಸ್ಟರ್ ಡ್ಯಾಂನ ಡಚ್ ಗ್ಯಾಲರಿ ಅವರಿಗೆ ಬಿರುದು ನೀಡಿ ಗೌರವಿಸಿದೆ.
ರಾಬರ್ಟ್ ಅವರ ಜೀವನವೂ ಅವರು ಬರೆದ ಚಿತ್ರಗಳಂತೆ ಕಲಾತ್ಮಕವಾಗಿದೆ. ರಾಬರ್ಟ್ ಅವರ ತಂದೆಯೂ ಕಲಾವಿದರು. ಅವರು ಹಾಲಿವುಡ್ ಸಿನಿಮಾಗಳಿಗೆ ಕೆಲಸ ಮಾಡಿದವರು. ಅವರ ಕುಟುಂಬದ ಸದಸ್ಯರೆಲ್ಲ ಕಲಾವಿದರೇ. ರಾಬರ್ಟ್ ಮೊದಲು ಅವರ ತಂದೆಯ ಸ್ಟುಡಿಯೋದಲ್ಲಿ ಗ್ರಾಫಿಕ್ ಕಲಾವಿದರಾಗಿದ್ದರು. ಕೆಲಸದ ಏಕತಾನತೆಯಿಂದ ಬೇಸತ್ತು ಪ್ಯಾರಿಸ್‌ಗೆ ಹೋದರು. ಅಲ್ಲಿನ ನಿಯತಕಾಲಿಕವೊಂದಕ್ಕೆ ಚಿತ್ರ ಕಲಾವಿದರಾಗಿಯೂ ಕೆಲಸ ಮಾಡಿದರು. ನಿಯತಕಾಲಿಕದ ಆಡಳಿತ ವರ್ಗ ಅಮೆರಿಕನ್ ಶೈಲಿಯಲ್ಲಿ ಚಿತ್ರ ಬರೆದುಕೊಡುವಂತೆ ಷರತ್ತು ವಿಧಿಸಿದಾಗ ಅದನ್ನು ವಿರೋಧಿಸಿ ಅವರು ಕೆಲಸ ಬಿಟ್ಟರು.
1978ರಲ್ಲಿ ಭಾರತಕ್ಕೆ ಪ್ರವಾಸಕ್ಕಾಗಿ ಬಂದರು. ಗುಜರಾತ್, ಕನ್ಯಾಕುಮಾರಿ ಮತ್ತಿತರ ಕಡೆ ಪ್ರವಾಸ ಮಾಡಿ ಹಂಪಿಗೂ ಬಂದರು. ಅಲ್ಲಿನ ಸ್ಮಾರಕಗಳು ಹಾಗೂ ಸುಂದರ ಪರಿಸರಕ್ಕೆ ಮನಸೋತು ಇಲ್ಲಿಯೇ ಉಳಿದು ಕಲಾ ಕೃತಿಗಳನ್ನು ರಚಿಸುವ ನಿರ್ಧಾರಕ್ಕೆ ಬಂದರು. ಕೆಲ ಕಾಲ ಹಂಪಿಯ ಆಶ್ರಮವೊಂದರಲ್ಲಿದ್ದರು. ಸ್ಥಳೀಯ ಸೀತಮ್ಮ ಎಂಬ ಲಂಬಾಣಿ ಮಹಿಳೆ ರಾಬರ್ಟ್ ಅವರ ಊಟೋಪಚಾರದ ವ್ಯವಸ್ಥೆ ನೋಡಿ ಕೊಳ್ಳುತ್ತಿದ್ದರು. ಕೆಲ ದಿನಗಳ ನಂತರ ಆ ಮಹಿಳೆಯನ್ನೇ ರಾಬರ್ಟ್ ಮದುವೆಯಾದರು.
ಹಂಪಿಯ ಮರಿಯಮ್ಮನ ಗಡ್ಡೆ ಅವರ ಚಿತ್ರ ಕಲಾ ತಪಸ್ಸಿನ ತಾಣವಾಯಿತು. ಹತ್ತಾರು ಕಲಾ ಕೃತಿಗಳನ್ನು ಅಲ್ಲಿಯೇ ರಚಿಸಿದರು. ಪತ್ನಿಗೂ ಚಿತ್ರ ಬರೆಯವುದನ್ನು ಕಲಿಸಿದರು. ಹದಿನೇಳು ವರ್ಷಗಳ ಕಾಲ ತಮ್ಮ ಜತೆಯಲ್ಲಿ ಸಂಸಾರ ನಡೆಸಿದ ಸೀತಮ್ಮ ಅವರ ಅಕಾಲಿಕ ಸಾವಿನಿಂದ ರಾಬರ್ಟ್ ವಿಚಲಿತರಾದರು. ನಂತರ ಪತ್ನಿಯ ಸಂಬಂಧಿ ಮಹಿಳೆಯನ್ನು ವಿವಾಹವಾದರು. ಈ ದಂಪತಿಗೆ ನಾಲ್ಕು ಮಕ್ಕಳು. ಮೂರು ಹೆಣ್ಣು ಹಾಗೂ ಒಂದು ಗಂಡು. ರಾಬರ್ಟ್ ಈಗ ಸಲೀಸಾಗಿ ಲಂಬಾಣಿ ಭಾಷೆಯಲ್ಲಿ ಮಾತನಾಡುತ್ತಾರೆ.
ರಾಬರ್ಟ್ ಅವರ ಚಿತ್ರ ಕಲಾಕೃತಿಗಳ ಪ್ರದರ್ಶನ ವಿದೇಶಗಳಲ್ಲೇ ಹೆಚ್ಚಾಗಿ ನಡೆದಿದೆ. ಅವರ ಮೊದಲ ಪ್ರದರ್ಶನ ನಡೆದದ್ದು ಆಮ್‌ಸ್ಟರ್ ಡ್ಯಾಂನ ಡಚ್ ಗ್ಯಾಲರಿಯಲ್ಲಿ. ಗೋವಾ, ಮುಂಬೈ ಹಾಗೂ ಬೆಂಗಳೂರುಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ನಡೆದಿವೆ.
ಪುಣೆಯ ಕಲಾಶಾಲೆಯ ವಿದ್ಯಾರ್ಥಿಗಳು ರಾಬರ್ಟ್ ಅವರ ಸಲಹೆ ಹಾಗೂ ಮಾರ್ಗದರ್ಶನ ಪಡೆದಿದ್ದಾರೆ. ಈಗ ವೃದ್ಯಾಪ್ಯದಿಂದ ದೃಷ್ಟಿದೋಷ ಕಾಣಿಸಿ ಕೊಂಡಿದ್ದರಿಂದ ಚಿತ್ರ ಬರೆಯುವು ದನ್ನು ನಿಲ್ಲಿಸಿದ್ದಾರೆ.
ರಾಬರ್ಟ್ ಅವರಿಗೆ ಗಿಟಾರ್, ಸ್ಯಾಕ್ಸೊಫೋನ್ ನುಡಿಸುವುದರಲ್ಲಿ ಆಸಕ್ತಿ ಇದೆ. ಪ್ಯಾರಿಸ್‌ನಲ್ಲಿದ್ದಾಗ ಅಲ್ಲಿನ ನೈಟ್ ಕ್ಲಬ್‌ಗಳಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದರಂತೆ.
ರಾಬರ್ಟ್ ಅವರ ಚಿತ್ರಗಳು ವಾಸ್ತವಕ್ಕೆ ತುಂಬಾ ಹತ್ತಿರಲ್ಲಿವೆ. ಸೂಕ್ಷ್ಮ ವಿವರಗಳನ್ನೂ ಅವರ ಚಿತ್ರಗಳಲ್ಲಿ ಕಾಣಬಹುದು. ರಾಬರ್ಟ್ ಅವರ ಜೀವನ ಹಾಗೂ ಚಿತ್ರಗಳ ಬಗ್ಗೆ ವಿದ್ಯಾರ್ಥಿಯೊಬ್ಬ ರು ಪಿಎಚ್‌ಡಿಗಾಗಿ ಪ್ರಬಂಧವೊಂದನ್ನು ಹಂಪಿಯ ಕನ್ನಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ. ರಾಬರ್ಟ್ ಅವರ ಚಿತ್ರಗಳು ಹಂಪಿಯ ಉದಯ ಫೈನ್ ಆರ್ಟ್ ಗ್ಯಾಲರಿಯಲ್ಲಿ ನೋಡಲು ಸಿಗುತ್ತವೆ.
ರಾಬರ್ಟ್ ಅವರಿಗೆ ಈಗ 68 ವರ್ಷ. ದೇಹಕ್ಕೆ ಮುಪ್ಪು ಆವರಿಸಿದ್ದರೂ ಅವರ ಕಲಾಸಕ್ತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ದೆಹಲಿಯ ಲಲಿತ ಕಲಾ ಅಕಾಡೆಮಿಯ ಗ್ಯಾಲರಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿತ್ರಗಳ ಪ್ರದರ್ಶನ ನಡೆಸಬೇಕು ಎಂಬುದು ಅವರ ಆಸೆ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-07-29
|
|
|