ಬೆಂಗಳೂರಿನಲ್ಲಿ ಸ್ಪಿನ್ ಅಕಾಡೆಮಿ: ಕುಂಬ್ಳೆ-ಮುರಳಿ ಚಿಂತನೆ |
ಪ್ರಕಟಿಸಿದ ದಿನಾಂಕ : 2010-07-30
ನವದೆಹಲಿ, ಗುರುವಾರ, 29 ಜುಲೈ 2010 ವಿಶ್ವಶ್ರೇಷ್ಠ ಬೌಲರುಗಳಾದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಭಾರತದ ಅನಿಲ್ ಕುಂಬ್ಳೆ ಜತೆಯಾಗಿ ಸೇರಿಕೊಂಡು ಬೆಂಗಳೂರಿನಲ್ಲಿ ಸ್ಪಿನ್ ಅಕಾಡೆಮಿಯೊಂದನ್ನು ಸ್ಥಾಪಿಸುವ ಕುರಿತಂತೆ ಚಿಂತನೆ ನಡೆಸುತ್ತಿದ್ದಾರೆ.
ಈ ಕುರಿತಂತೆ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಜತೆ ಮಾತುಕತೆ ನಡೆಸಲಿದ್ದೇನೆ ಎಂದು ಮುರಳೀಧರನ್ ತಿಳಿಸಿದ್ದಾರೆ.
ನಾನು ಈ ಅಕಾಡೆಮಿಯ ಅಂಗವಾಗಲು ಇಚ್ಛಿಸುತ್ತೇನೆ. ಕೋಚಿಂಗ್ ವೃತ್ತಿ ಬಗ್ಗೆ ಯೋಜನೆ ನಡೆಸಿಲ್ಲ. ಒಂದು ವೇಳೆಸ್ಪಿನ್ ಬೌಲಿಂಗ್ ಅಕಾಡೆಮಿಯೊಂದನ್ನು ಅನಿಲ್ ತೆರೆದರೆ ಅದರ ಅಂಗವಾಗಲು ನಾನು ಸಂತೋಷಪಡಲಿದ್ದೇನೆ ಎಂದವರು ಹೇಳಿದರು.
ಟೆಸ್ಟ್‌ನಲ್ಲಿ 800 ವಿಕೆಟುಗಳನ್ನು ಕಿತ್ತಿದ್ದ ಮುರಳಿ ಇತ್ತೀಚೆಗಷ್ಟೇ ಭಾರತದ ವಿರುದ್ಧ ಅಂತ್ಯಗೊಂಡ ಗಾಲೆ ಟೆಸ್ಟ್ ಪಂದ್ಯದ ನಂತರ ವಿದಾಯ ಹಾಡಿದ್ದರು. ಏಕದಿನದಲ್ಲೂ ಅತ್ಯಧಿಕ ವಿಕೆಟ್ ಸರದಾರನಾಗಿರುವ ಮುರಳಿ ದಾಖಲೆಯ 515 ವಿಕೆಟುಗಳನ್ನು ಪಡೆದಿದ್ದಾರೆ.
ಯೋಜನೆಯು ಇದೀಗ ಆರಂಭಿಕ ಘಟ್ಟದಲ್ಲಿದೆ. ಬೆಂಗಳೂರಿನಲ್ಲಿ ಅನಿಲ್ ಅಕಾಡೆಮಿ ಸ್ಥಾಪಿಸುವ ಇರಾದೆ ಹೊಂದಿದ್ದಾರೆ ಎಂದು ಮುರಳಿ ಹೇಳಿದರು.
ಕಳೆದ ವರ್ಷ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದ ಕುಂಬ್ಳೆ (619) ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪೈಕಿ ಮೂರನೇ ಸ್ಧಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಶೇನ್ ವಾರ್ನ್ 708 ವಿಕೆಟುಗಳನ್ನು ಕಬಳಿಸಿದ್ದಾರೆ.
ಅದೇ ವೇಳೆ ಈ ಬಗ್ಗೆ ಮುರಳಿ ಜತೆ ಸಂಪರ್ಕ ನಡೆಸಿದ್ದೇನೆ ಎಂದು ಕುಂಬ್ಳೆ ಹೇಳಿದ್ದಾರೆ. ಹೀಗಿದ್ದರೂ ಮುರಳಿ ನಿವೃತ್ತಿ ನಂತರ ಮಾತುಕತೆ ನಡೆದಿಲ್ಲ. ಸದ್ಯ ಎಲ್ಲಾ ಸನ್ಮಾನಗಳನ್ನು ಸ್ವೀಕರಿಸುತ್ತಿರುವ ಅವರು ಬ್ಯುಸಿಯಾಗಿದ್ದಾರೆ. ಅದಕ್ಕವರು ಅರ್ಹರು ಕೂಡಾ ಆಗಿದ್ದಾರೆ ಎಂದು ಕುಂಬ್ಳೆ ಹೇಳಿದರು.
ಒಮ್ಮೆ ಮುರಳಿಗೆ ಬಿಡುವು ಲಭಿಸಿದರೆ ನಾನು ಯೋಜನೆಯ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದವರು ಸೇರಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-30
|
|
|