ಸಿದ್ದು ನ್ಯೂಸ್, ಡಿಕೆಶಿ ೨೪೭, ದೇಶು ಎಂಟರ್ಟೇನ್ಮೆಂಟ್ |
ಪ್ರಕಟಿಸಿದ ದಿನಾಂಕ : 2010-07-30
ಕೋರ (ತುಮಕೂರು ಜಿಲ್ಲೆ): ಕರುನಾಡಿನ ಟಿವಿ ಚಾನೆಲ್ ವೀಕ್ಷಕರೇ ನಿಮಗಿದೋ ವಿಚಿತ್ರ ಸುದ್ದಿ. ಈಗಾಗಲೇ ಇರುವ ಹತ್ತಾರು ಚಾನೆಲ್‌ಗಳ ಪೈಕಿ ಯಾವುದನ್ನು ನೋಡಬೇಕೆಂಬ ಗೊಂದಲದಲ್ಲಿ ನೀವಿರುವಾಗಲೇ ಮತ್ತೆ ಮೂರು ಹೊಸ ಚಾನೆಲ್‌ಗಳು ಹಠಾತ್ತನೇ ಹುಟ್ಟಿಕೊಂಡಿವೆ.
ಅವು - ಸಿದ್ದು ನ್ಯೂಸ್ ಚಾನೆಲ್, ಡಿಕೇಶಿ ೨೪x೭ ಮತ್ತು ದೇಶು ಪ್ಲಸ್ ಎಂಟರ್‌ಟೇನ್‌ಮೆಂಟ್. ಈ ಚಾನೆಲ್‌ಗಳು ಹುಟ್ಟಿಕೊಳ್ಳಲು ಪ್ರೇರಣೆ- ಬಿಸಿಲ ನಾಡಿಗೆ ದಂಡೆತ್ತಿ ಹೊರಟ ಕಾಂಗ್ರೆಸ್ ಪದಾತಿ ದಳದ ಪಾದಯಾತ್ರೆ.
ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್‌ನ ಘಟನುಘಟಿ ನಾಯಕರು ಹುಟ್ಟಿಹಾಕಿರುವ ಈ ಚಾನಲ್‌ಗಳು ಕೇಬಲ್ ಅಥವಾ ಡಿಟಿಎಚ್ ಮೂಲಕ ಬಿತ್ತರಗೊಳ್ಳುವುದಿಲ್ಲ. ಹೀಗಾಗಿ ಇವುಗಳನ್ನು ನೋಡುವ ಭಾಗ್ಯ ನಿಮಗಿಲ್ಲ. ಅದು ಇರುವುದು ಸೋನಿಯಾಗಾಂಧಿ ಮತ್ತು ಹೈಕಮಾಂಡ್ ಪ್ರಭಾವಶಾಲಿಗಳಿಗೆ ಮಾತ್ರ.
ಪಾದಯಾತ್ರೆಯಲ್ಲಿ ತಮ್ಮ ಶ್ರಮ, ಹರಿಸುತ್ತಿರುವ ಒಂದೊಂದು ಬೆವರ ಹನಿ, ಕಾಲುಗಳಲ್ಲಿ ಹುಟ್ಟಿಕೊಂಡ ಬೊಬ್ಬೆ, ತಮ್ಮನ್ನು ಸಾರ್ವಜನಿಕರು ಮುತ್ತುತ್ತಿರುವುದು, ಜಯಘೋಷ ಕೂಗುತ್ತಿ ರುವುದು ಹೀಗೆ ಪಾದಯಾತ್ರೆ ಸಂದರ್ಭದಲ್ಲಿ ನಡೆಯುತ್ತಿರುವ ಪ್ರತಿಯೊಂದು ದೃಶ್ಯಾವಳಿಗಳು ಮಿಸ್ ಆಗದಂತೆ ಚಿತ್ರೀಕರಿಸಿ ದಾಖಲಿಸುವ ಸಲುವಾಗಿ ಕಾಂಗ್ರೆಸ್‌ನ ಮೂವರು ದಂಡನಾಯ ಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ತಮ್ಮದೇ ಆದ ಕ್ಯಾಮೆರಾ ಕ್ರೂ (ಸಿಬ್ಬಂದಿಯನ್ನು)ಗಳನ್ನು ನೇಮಿಸಿಕೊಂಡಿದ್ದಾರೆ.
-ಭರದಿಂದ ಚಿತ್ರೀಕರಣ: ಇವರು ತಮ್ಮ ನಾಯಕ ಪಾದಯಾತ್ರೆಯಲ್ಲಿ ಇಟ್ಟ ಒಂದೊಂದು ಹೆಜ್ಜೆಯೂ ಮಿಸ್ ಆಗದಂತೆ ಚಿತ್ರೀಕರಣ ಕಾರ್ಯದಲ್ಲಿ ತೊಡಗಿದ್ದಾರೆ.
ಜತೆಗೆ ಈ ನಾಯಕರು ಛಾಯಾಚಿತ್ರಕಾರರನ್ನು ನೇಮಿಸಿಕೊಂಡು ಟನ್‌ಗಟ್ಟಲೇ ಫೋಟೋಗಳ ನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಪಾದಯಾತ್ರೆಯ ಚಿತ್ರೀಕರಣವನ್ನು ಅನಂತರ ಸೀಡಿಗಳಾಗಿ ಪರಿವ ರ್ತಿಸಿ ಹೈಕಮಾಂಡ್‌ಗಳಿಗೆ ಕಳುಹಿಸುವ ಉದ್ದೇಶವನ್ನು ಇವರು ಹೊಂದಿದ್ದಾರೆ.
ಇಂತಹ ದಾಖಲೆ ಹಾಗೂ ಪತ್ರಿಕಾ ಕಟಿಂಗ್ಸ್‌ನಂತಹ ದಾಖಲೆಗಳ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಾಮರ್ಥ್ಯ ಅಳೆಯುವುದು ಇದಕ್ಕೆ ಕಾರಣವಾಗಿದೆ. ಹಾಗಾಗಿ ಹೈಕಮಾಂಡನ್ನು ಓಲೈಸಲು ತಮಗೇ ಹೆಚ್ಚು ಜನಮೆಚ್ಚುಗೆ ದೊರೆತಿದೆ ಎಂದು ಬಿಂಬಿಸಲು ನಾಯಕರು ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
-ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರ: ಬಿಸಿಲ ನಾಡಿಗೆ ಕಾಂಗ್ರೆಸ್ ಪದಾತಿದಳದ ದಂಡ ಯಾತ್ರೆಯ ಮೂಲ ಉದ್ದೇಶ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದು. ಆದರೆ, ಯಾತ್ರೆಯಲ್ಲಿ ಪಾಲ್ಗೊಂಡಿರುವ ಪ್ರತಿ ಯೊಬ್ಬ ನಾಯಕನಿಗೂ ಈ ಯಾತ್ರೆಯಲ್ಲಿ ತಮ್ಮದೇ ಆದ ವೈಯಕ್ತಿಕ ಲಾಭ-ನಷ್ಟದ ಲೆಕ್ಕಾ ಚಾರಗಳಿವೆ.
-ಸಿದ್ದೂಗೆ ಮಹತ್ವದ್ದು: ದಳ ಪರಿವಾರದಿಂದ ಬಂದು ಈಗ ಕಾಂಗ್ರೆಸ್‌ನಲ್ಲಿ ತುಸು ತಡವಾದರೂ ಉತ್ತಮ ಸ್ಥಾನ ಗಳಿಸಿಕೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈ ಪಾದಯಾತ್ರೆ ಅತ್ಯಂತ ಮಹತ್ವದ್ದು. ಗಣಿ ಸಹೋದರರ ಸವಾಲಿಗೆ ತೊಡೆತಟ್ಟುವ ಧೈರ್ಯ ತೋರಿ ಪಾದ ಯಾತ್ರೆ ಘೋಷಿಸುವ ಮೂಲಕ ಅದರ ಅನಧಿಕೃತ ನಾಯಕತ್ವವನ್ನು ಅವರೇ ವಹಿಸಿಕೊಂಡಿದ್ದಾರೆ.
-ಅಗ್ರಗಣ್ಯರಾಗುವತ್ತ ಚಿತ್ತ: ಇದಕ್ಕೆ ತಕ್ಕಂತೆ ಜನರು ಹಾಗೂ ಮಾಧ್ಯಮಗಳು ತಮ್ಮ ಗಮನವ ನ್ನು ಸಿದ್ದರಾಮಯ್ಯ ಅವರ ಮೇಲೆ ಕೇಂದ್ರೀಕರಿಸಿವೆ. ಪಾದಯಾತ್ರೆ ಘೋಷಣೆ ಮಾಡಿದ್ದರಿಂದ ಅಯಾಚಿತವಾಗಿ ದೊರೆತ ನಾಯಕತ್ವವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ನಿರ್ವಿವಾದ ಅಗ್ರಗಣ್ಯ ನಾಯಕರಾಗಿ ಪ್ರತಿಷ್ಠಾಪನೆಗೊಳ್ಳುವ ಸಾಧ್ಯತೆಯತ್ತ ಗಮನ ಕೇಂದ್ರಿಕರಿಸಿದ್ದಾರೆ.
-ಸಿದ್ದು ಭವಿಷ್ಯ ನಿರ್ಧಾರ: ಇದಕ್ಕೆ ಪೂರಕವಾಗಿಯೇ ಜನರ ಪ್ರತಿಕ್ರಿಯೆ ಹಾಗೂ ಮಾಧ್ಯಮಗಳ ಸ್ಪಂದನೆಯೂ ಇದೆ. ಇದು ಪಾದಯಾತ್ರೆ ಮುಂದುವರೆದಂತೆಲ್ಲಾ ಯಾವ ರೀತಿ ಬೆಳೆಯಬಹುದು ಅಥವಾ ಬದಲಾಗಬಹುದು ಎಂಬುದರ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್‌ನ ಸರ್ವ ಸಮ್ಮತ (ಅರ್ಥಾತ್ ಹೈಕಮಾಂಡ್ ಸಮ್ಮತ) ನಾಯಕರಾಗಿ ರೂಪುಗೊಳ್ಳುತ್ತಾರೆಯೇ ಎಂಬುದು ನಿರ್ಧಾರವಾಗಲಿದೆ.
-ಡಿಕೆಶಿ ಶತ ಪ್ರಯತ್ನ: ಪಾದಯಾತ್ರೆ ‘ಸರ್ವ ಸಿದ್ದು ಮಯಂ’ ಆಗುವ ಅಪಾಯವನ್ನು ಮೊ ದಲು ಗುರುತಿಸಿ ಅದಕ್ಕೆ ಪ್ರತಿಕ್ರಿಯಿಸಿದ್ದು ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್. ಹೀಗಾಗಿಯೇ ಅವರು ಸಿದ್ದುಗೆ ಪರ್ಯಾಯವಾಗಿ ತಮ್ಮನ್ನು ಬಿಂಬಿಸಿಕೊಳ್ಳುವ ಶತ ಪ್ರಯತ್ನ ನಡೆಸುತ್ತಿದ್ದಾರೆ.
ಇವರೊಬ್ಬರ ಪ್ರಯತ್ನ ಇರದಿದ್ದರೆ ಪಾದಯಾತ್ರೆಯ ಎಂಬ ರೇಸ್‌ನಲ್ಲಿ ಗೋಲ್ಡ್ ಮೆಡಲ್ ಅನಾಯಾಸವಾಗಿ ಸಿದ್ದು ಪಾಲಾಗುತ್ತಿತ್ತು. ಮಾಧ್ಯಮ ಹಾಗೂ ಜನರ ಗಮನ ಸಿದ್ದರಾಮಯ್ಯನತ್ತ ತಿರುಗುತ್ತಿರುವುದನ್ನು ಗಮನಿಸಿದ ಡಿಕೆಶಿ ತಮ್ಮ ಬಲ ತೋರಲು ಪಾದಯಾತ್ರೆಯನ್ನು ಅಖಾಡವಾಗಿ ಬಳಸಿಕೊಳ್ಳುತ್ತಿದ್ದಾರೆ.
-ಎಲ್ಲೆಲ್ಲೂ ಡಿಕೆಶಿ ನಾಮ: ಪಾದಯಾತ್ರೆಯ ಮೂರನೇ ದಿನದಿಂದಲೇ ಡಿಕೇಶಿ ಅವರ ಈ ತೀವ್ರ ಪ್ರಯತ್ನ ಆರಂಭಗೊಂಡಿದೆ. ಕನಕಪುರದಿಂದ ಸಾವಿರಾರು ಕಾರ್ಯಕರ್ತರು ಡಿಕೆಎಸ್ ಎಂಬ ಲೋಗೋ ಇರುವ ಟೀಶರ್ಟ್ ತೊಟ್ಟು ಮುಗಿಲು ಮುಟ್ಟುವಂತೆ ಡಿಕೇಶಿ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ರೇನ್ ಕೋಟ್, ಟೋಪಿ ಎಲ್ಲದರ ಮೇಲೂ ಡಿಕೇಶಿ ಹೆಸರು ರಾರಾಜಿಸುತ್ತಿವೆ.
-ಹಾರತುರಾಯಿ ದೃಶ್ಯಗಳು: ಅಧ್ಯಕ್ಷರೊಂದಿಗೆ ನಡೆದ ಶೀತಲ ಸಮರದಿಂದಾಗಿ ತಮ್ಮ ವಿರುದ್ಧ ಹೈಕಮಾಂಡ್‌ಗೆ ದೂರುಗಳು ಹೋಗಿರುವುದನ್ನು ಬಲ್ಲ ಶಿವಕುಮಾರ್ ಈ ಕಳಂಕದಿಂದ ಮುಕ್ತರಾಗಲು ಹಾಗೂ ತಮಗೂ ಅಪಾರ ಜನ ಬೆಂಬಲವಿದೆ ಎಂದು ಬಿಂಬಿಸುವ ಪ್ರಯತ್ನ ಆರಂಭಿಸಿದ್ದಾರೆ. ಇದರ ಪರಿಣಾಮವಾಗಿಯೇ ಪಾದಯಾತ್ರೆಯಲ್ಲಿ ಶಿವಕುಮಾರ್ ಪರ ಘೋಷಣೆ ಗಳು ಈಗ ಹೆಚ್ಚುತ್ತಿವೆ. ರಸ್ತೆಗಳಲ್ಲಿ ಅಭಿಮಾನಿಗಳು ಅಡ್ಡಗಟ್ಟಿ ಹಾರತುರಾಯಿ ಹಾಕುವ ದೃಶ್ಯ ಗಳು ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
-ದೇಹ ಒಲ್ಲೆ ಎಂದರೂ ಜಗ್ಗದ ದೇಶಪಾಂಡೆ: ಪಾದಯಾತ್ರೆ ಆರಂಭವಾದಾಗ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಬೆಂಗಳೂರು ನಗರದ ಎಲ್ಲೆ ದಾಟುತ್ತಾರೆ ಎಂಬ ನಂಬಿಕೆ ಬೇರೆಯವರಿಗೆ ಬಿಡಿ ಖುದ್ದು ದೇಶಪಾಂಡೆ ಅವರಿಗೂ ಇರಲಿಲ್ಲ. ಪಾದಯಾತ್ರೆಗೂ ಮುನ್ನಿನ ಪತ್ರಿಕಾಗೋಷ್ಠಿಗಳಲ್ಲಿ ಅವರು ಈ ಅರ್ಥ ಬರುವಂತಹ ಸೂಚನೆಗಳನ್ನೇ ನೀಡುತ್ತಿದ್ದರು.
ಆದರೆ, ಪಾದಯಾತ್ರೆ ಆರಂಭಗೊಂಡು ಯಾವಾಗ ಜನಸ್ಪಂದನೆ ಊಹೆಗೂ ಹೆಚ್ಚು ದೊರೆಯ ತೊಡಗಿತೋ, ಆಗ ದೇಶಪಾಂಡೆ ಅವರ ಕಾಲುಗಳಿಗೂ ಬಲ ಬರತೊಡಗಿದವು. ಬೆಂಗಳೂರು ದಾಟಿ, ಬೆಂಗಳೂರು ಗ್ರಾಮಾಂತರಕ್ಕೆ ಅವರು ಕಾಲಿಟ್ಟಾಗ ಇನ್ನು ಇವರು ಮುಂದೆ ನಡೆಯಲಾ ರರು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದೆಲ್ಲವನ್ನು ಸುಳ್ಳು ಮಾಡಿ ದೇಶಪಾಂಡೆ ನಡೆಯುತ್ತಲೇ ಇದ್ದಾರೆ.
-ಪ್ರದರ್ಶಿಸುವ ಹಂಬಲ: ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಒಂದು ಕಾಲನ್ನು ಹೊರ ಗಿಟ್ಟಿರುವ ಹಾಗೂ ಇತ್ತೀಚಿನ ನೆರೆ ಹಣ ದುರುಪಯೋಗ ಆರೋಪಗಳಿಗೆ ಒಳಗಾಗಿ ಮಂಕಾದ ತಮ್ಮ ವರ್ಚಸ್ಸನ್ನು ಹೈಕಮಾಂಡ್ ಮುಂದೆ ತುಸುವಾದರೂ ತೋರಿಸಿಕೊಳ್ಳುವ ಹಂಬಲ ಅವರ ನಿಧಾನ ನಡಿಗೆಯಲ್ಲಿ ಎದ್ದು ಕಾಣುತ್ತಿದೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜಿ. ಪರಮೇಶ್ವರ್ ಅವರು ತುಮಕೂರಿನಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಪಾದಯಾತ್ರೆಗೆ ಸಹಕರಿಸುವ ಮೂಲಕ ತಮ್ಮ ಸಂಘಟನಾ ಶಕ್ತಿ ತೋರುತ್ತಿದ್ದಾರೆ.
ಆದರೆ, ಗಣಿ ರೆಡ್ಡಿಗಳ ವಿರುದ್ಧ ಕೊಂಡಯ್ಯ ಅವರೊಂದಿಗೆ ಸೇರಿ ಸಮರವನ್ನೇ ಸಾರಿದ ಹಾಗೂ ಪಾದಯಾತ್ರೆಗೂ ಮುಂಚಿನ ಪತ್ರಿಕಾಗೋಷ್ಠಿಗಳಲ್ಲಿ ಮಿಂಚುತ್ತಿದ್ದ ವಿ.ಎಸ್. ಉಗ್ರಪ್ಪ ಅವರಂತಹ ನಾಯಕರು ಪಾದಯಾತ್ರೆಯಲ್ಲಿ ಘಟಾನುಘಟಿಗಳು ನಡೆಸುತ್ತಿರುವ ಅಬ್ಬರದಲ್ಲಿ ತುಸು ಮಂಕಾಗಿದ್ದಾರೆ.
ಉಳಿದಂತೆ ಯುವ ನಾಯಕರಾದ ಕೃಷ್ಣ ಬೈರೇಗೌಡ, ಸಂತೋಷ್ ಲಾಡ್, ಸಂಪಂಗಿ, ಎಚ್.ಪಿ. ಮಂಜುನಾಥ್, ನೆ.ಲ ನರೇಂದ್ರಬಾಬು ಮೊದಲಾದವರು ತಮಗಿರುವ ಅಲ್ಪ ಅವಕಾಶದಲ್ಲೇ ಮಿಂಚಲು ಯತ್ನಿಸುತ್ತಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30
|
|
|