ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಗಳೂರು :ಯಕ್ಷಗಾನ ರಸ‌ಋಷಿ ಎಂದು ಖ್ಯಾತರಾಗಿರುವ ದೇರಾಜೆ ಸೀತಾರಾಮಯ್ಯ ತಾಳಮದ್ದಳೆ ಕ್ಷೇತ್ರದ ಶ್ರೇಷ್ಠ ಅರ್ಥದಾರಿಗಳಲ್ಲಿ ಒಬ್ಬರು. ಸೃಜನಶೀಲತೆಗೆ ರಸಾಭಿವ್ಯಕ್ತಿಗೆ ಆದ್ಯತೆ ನೀಡಿ ಅರ್ಥಗಾರಿಕೆಗೆ ಹೊಸ ಧ್ವನಿಯನ್ನು ನೀಡಿದವರು. ಶ್ರೀರಾಮ ಚರಿತಾಮೃತಮ್, ಶ್ರೀಮನ್ಮಹಾಭಾರತ ಕಥಾಮೃತಂ, ಕುರುಕ್ಷೇತ್ರಕ್ಕೊಂದು ಆಯೋಗ ಮುಂತಾದ ಕೃತಿಗಳ ಮೂಲಕ ಸಾಹಿತ್ಯ ಲೋಕದಲ್ಲೂ ಗುರುತಿಸಲ್ಪಟ್ಟವರು. ಈ ಮಹಾನ್ ಕಲಾವಿದನ ಹೆಸರಿನಲ್ಲಿ ನೀಡಲಾಗುತ್ತಿರುವ ದೇರಾಜೆ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ಕಲಾವಿದ ನೆಬ್ಬೂರು ಭಾಗವತರಿಗೆ ನೀಡಲಾಗುತ್ತಿದೆ.

ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನ ರಂಗದ ಅಗ್ರಪಂಕ್ತಿಯ ಭಾಗವತರು, ಸಾಂಪ್ರದಾಯಿಕ ಶೈಲಿಯ ಹಾಡುಗಾರಿಕೆ ಹಾಗೂ ನಾದ ಮಾಧುರ್ಯಕ್ಕೆ ಹೆಸರಾದವರು ಪೌರಾಣಿಕ ಪ್ರಸಂಗಗಳನ್ನು ಸನ್ನಿವೇಶಗಳಿಗೆ ಸರಿಹೊಂದಿಸಿ ಸೊಗಸಾಗಿ ಹಾಡುವ ಕಲೆ ಅವರಿಗೆ ಸಿದ್ಧಿಸಿದೆ. ವೇಷಧಾರಿಯನ್ನು ಕುಣಿಸುವಲ್ಲಿ ಸಮಯೋಚಿತ ಪ್ರಜ್ಞೆ ಅವರದು. ಇಡಗುಂಜಿ ಮೇಳದ ಪ್ರಧಾನ ಭಾಗವತರಾಗಿ, ಕೆರೆಮನೆ ಕಲಾವಿದರ ಭಾವಾಭಿನಯಗಳಿಗೆ ಸ್ಪೂರ್ತಿ ತುಂಬಿದವರು. ಸುಮಾರು ಐದು ದಶಕಗಳ ಕಲಾ ಜೀವನದಲ್ಲಿ ಶಿಸ್ತು-ಪ್ರಾಮಾಣಿಕತೆಯನ್ನು ಕಾಯ್ದುಕೊಂಡವರು. ಈಗ ಕರ್ನಾಟಕ ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ನೆಬ್ಬೂರರಿಗೆ ದೇರಾಜೆ ಪ್ರಶಸ್ತಿ ಪುರಸ್ಕಾರ- ದೇರಾಜೆ ಸಂಸ್ಮರಣೆ-ಪಾರಂಪಳ್ಳಿ ಶ್ರೀಧರ ಹಂದೆ ಸಂಸ್ಮರಣೆ ಕಾರ್ಯಕ್ರಮವು ತಾ.15-09-2012 ಶನಿವಾರ ಸಂಜೆ ಶ್ರೀ ಹಂದೆ ಮಹಾಗಣಪತಿ ವಿಷ್ಣುಮೂರ್ತಿ ದೇವಸ್ಥಾನ, ಕೋಟ ಇಲ್ಲಿ ಜರಗಲಿದೆ.

ಕಲ್ಕೂರ ಪ್ರತಿಷ್ಠಾನ ಮಂಗಳೂರು, ದೇರಾಜೆ ಸಂಸ್ಮರಣ ಸಮಿತಿ, ರಂಗ ಬಳಗ ಸಾಂಸ್ಕೃತಿಕ ವೇದಿಕೆ ಕೋಟ, ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಚೊಕ್ಕಾಡಿ ಹಾಗೂ ಕೋಟ-ಸಾಲಿಗ್ರಾಮ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾ. ಕೋಳ್ಯೂರು ರಾಮಚಂದ್ರ ರಾವ್, ಅಂಬಾತನಯ ಮುದ್ರಾಡಿ, ಕೆ.ಪಿ. ಹೆಗಡೆ ಮುಂತಾದವರ ಕೂಡುವಿಕೆಯಲ್ಲಿ ಮೋಹಿನಿ ರುಕ್ಮಾಂಗದ ತಾಳಮದ್ದಳೆಯನ್ನು ಏರ್ಪಡಿಸಲಾಗಿದೆ ಎಂದು ಸಂಯೋಜಕರಾದ ಜನಾರ್ದನ ಹಂದೆ ಹಾಗೂ ಜಿ.ಕೆ. ಭಟ್ ಸೇರಾಜೆ ತಿಳಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು