ಅತ್ಯಾಚಾರಿಯ ಕೊಂದು ರುಂಡ ಚೆಂಡಾಡಿದ ಮಹಿಳೆ!

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಟರ್ಕಿ, ಸೆ. 8 : ಗಂಡನಿಲ್ಲದಾಗ ಹೆದರಿಸಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ವ್ಯಕ್ತಿಯಿಂದ ರೋಸಿಹೋಗಿದ್ದ ಗರ್ಭವತಿ ಮಹಿಳೆಯೊಬ್ಬಳು ಆತನನ್ನು ಗುಂಡಿಟ್ಟು ಸಾಯಿಸಿದ್ದಲ್ಲದೆ, ಆತನ ರುಂಡವನ್ನು ಕತ್ತರಿಸಿ ಗ್ರಾಮದ ಜನರಿಗೆ ಕಾಣುವಂತೆ ನೇತಾಡಿಸಿದ್ದಾಳೆ. ಈ ಘಟನೆ ನಡೆದಿರುವುದು ಟರ್ಕಿಯ ಹಳ್ಳಿಯಲ್ಲಾದರೂ, ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿರುವ ಜಾಗತಿಕ ಮಹಿಳೆಯರಿಗೆ ಸ್ಪಷ್ಟ ಸಂದೇಶ ಸಾರಿದ್ದಾಳೆ.

ನೆವಿನ್ ಯೆಲ್ಡಿರಿಮ್(26) ಮದುವೆಯಾಗಿದ್ದ ಹೆಂಗಸು. ಆಕೆಯ ಗಂಡನಿಗೆ ಊರೂರು ತಿರುಗುವ ಕೆಲಸವಾಗಿದ್ದರಿಂದ ತಿಂಗಳಾನುಗಟ್ಟಲೆ ಮನೆಯಲ್ಲಿ ಇರುತ್ತಿರಲಿಲ್ಲ. ಅವರಿಬ್ಬರಿಗೆ ಆರು ಮತ್ತು ಎರಡು ವರ್ಷದ ಇಬ್ಬರು ಮಕ್ಕಳು. ಆಕೆ ಮತ್ತೆ ಗರ್ಭವತಿಯಾಗಿದ್ದಳು. ಆದರೆ, ಆ ಭ್ರೂಣದ ಅಪ್ಪ ಆಕೆಯ ಗಂಡನಾಗಿರಲಿಲ್ಲ, ಅತ್ಯಾಚಾರಿ ಎಂದು ಆಕೆಯೇ ಹೇಳಿಕೊಂಡಿದ್ದಾಳೆ.

ಇದಕ್ಕೆಲ್ಲ ಅಂತ್ಯಹಾಡಲೇಬೇಕೆಂದು ಬಗೆದ ನೆವಿನ್, ಗಂಡನಿಲ್ಲದ ಸಮಯದಲ್ಲಿ ಕಾಮತೃಷೆ ತೀರಿಸಿಕೊಳ್ಳಲೆಂದು ಗೋಡೆ ಹಾರಿ ಬರುತ್ತಿದ್ದ ಆತನಿಗೆ ಪಿಸ್ತೂಲು ತೋರಿಸಿ, ಓಡಲು ಆರಂಭಿಸಿದಾಗ ಬೆನ್ನತ್ತಿ ನೆಲಕ್ಕೆ ಕೆಡವಿದ್ದಾಳೆ. ಆತ ಕೊಲ್ಲಬೇಡ ಎಂದು ಗೋಗರೆಯುತ್ತಿದ್ದರೂ ಬಿಡದೆ ಹತ್ತು ಬಾರಿ ಆತನ ಮೇಲೆ ಗುಂಡಿನ ಮಳೆಗರೆದಿದ್ದಾಳೆ ನೆವಿನ್. ಹತ್ತರಲ್ಲಿ ಏಳು ಗುಂಡುಗಳು ನೇರವಾಗಿ ಆತನ ಮರ್ಮಾಂಗವನ್ನು ಹೊಕ್ಕಿವೆಯೆಂದರೆ ಆಕೆಯ ರಕ್ತ ಯಾವ ಪರಿ ಕುದಿಯುತ್ತಿತ್ತೆಂದು ಅಂದಾಜು ಮಾಡಬಹುದು.

ನಿಶ್ಚೇಷ್ಟಿತನಾದ ಆತನನ್ನು ಬಿಡದೆ ಮತ್ತೆಮತ್ತೆ ಗುಂಡು ಹಾರಿಸಿ ಹತ್ಯೆಗೈದಿದ್ದಲ್ಲದೆ, ಮುಂಡದಿಂದ ರುಂಡವನ್ನು ಬೇರ್ಪಡಿಸಿದ್ದಾಳೆ. ರಕ್ತ ತೊಟ್ಟಿಕ್ಕುತ್ತಿದ್ದ ಆತನ ರುಂಡವನ್ನು ತೆಗೆದುಕೊಂಡು ಹೋಗಿ ಹಳ್ಳಿಯ ಅಗಸಿ ಬಾಗಿಲಿಗೆ ನೇತು ಹಾಕಿದ್ದಾಳೆ. ಸುದ್ದಿಯನ್ನು ತಿಳಿದ ಕೂಡಲೆ ಅಲ್ಲಿಗೆ ಆಗಮಿಸಿದ್ದ ಖಾಸಗಿ ಟಿವಿ ಚಾನಲ್ ಆ ದೃಶ್ಯವನ್ನು ಸೆರೆಹಿಡಿದಿದೆ.

ಪೊಲೀಸರೆದುರಿಗೆ ಆಕೆ ಹೇಳಿದ್ದೇನೆಂದರೆ, ಆ ಅತ್ಯಾಚಾರಿ ಗಂಡನಿಲ್ಲದ ಸಮಯದಲ್ಲಿ ಬಂದು ಬಂದೂಕು ತೋರಿಸಿ ತನ್ನ ಮೇಲೆ ಲೈಂಗಿಕ ದಬ್ಬಾಳಿಕೆ ನಡೆಸುತ್ತಿದ್ದ. ಪ್ರತಿರೋಧಿಸಿದಾಗ ಮಕ್ಕಳಿಬ್ಬರನ್ನು ಕೊಲ್ಲುವುದಾಗಿ ಹೆದರಿಸುತ್ತಿದ್ದ. ಇಷ್ಟು ಮಾತ್ರವಲ್ಲದೆ, ಒಂದು ರಾತ್ರಿ ಆಕೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ನಗ್ನ ಚಿತ್ರಗಳನ್ನು ಕೂಡ ತೆಗೆದುಕೊಂಡಿದ್ದ. ಮತ್ತು ತನ್ನ ಮೇಲೆ ಅತ್ಯಾಚಾರವೆಸಗಿದ್ದನ್ನು ಊರಿಗೆಲ್ಲ ಹೇಳುವುದಾಗಿ ಹೇಳುತ್ತಿದ್ದ.

ಇದೆಲ್ಲ ಸಾರ್ವಜನಿಕವಾಗಿ ಗೊತ್ತಾದರೆ, ಇನ್ನು ಶಾಲೆಗೆ ಹೋಗುವ ತನ್ನ ಮಗಳನ್ನು ಎಲ್ಲರೂ ಅವಮಾನ ಮಾಡುತ್ತಾರೆಂದು ತಿಳಿದು ಆತನನ್ನು ಮುಗಿಸಿಹಾಕಲು ನಿರ್ಧರಿಸಿದೆ. ಈಗ ಆ ಕರಾಳ ಅಧ್ಯಾಯ ಮುಗಿದಿದೆ. ನನ್ನ ಮಗಳನ್ನು ಯಾರೂ ಅವಮಾನ ಮಾಡುವುದಿಲ್ಲ. ನನ್ನ ಗೌರವವನ್ನು ನಾನೇ ಕಾಪಾಡಿಕೊಂಡಿದ್ದೇನೆ. ಇನ್ನು ಮೇಲೆ ನನ್ನ ಮಕ್ಕಳನ್ನು ತನ್ನ ಗೌರವ ಕಾಪಾಡಿಕೊಂಡು ಮಹಿಳೆಯ ಮಕ್ಕಳೆಂದು ಎಲ್ಲರೂ ಗೌರವದಿಂದ ಕಾಣುತ್ತಾರೆ ಎಂದು ಆಕೆ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಟರ್ಕಿಯ ಮಹಿಳೆ ಸಂಘಟನೆಗಳು ನೆವಿನ್‌ಳ ಧೈರ್ಯವನ್ನು ಕೊಂಡಾಡಿವೆ.

ಈಗ ಬಂಧಿತಳಾಗಿರುವ ನೆವಿನ್, ಅನೈತಿಕ ಸಂಬಂಧದಿಂದ ಆಗಿರುವ ಗರ್ಭವನ್ನು ತೆಗೆಸಲು ಅನುಮತಿ ನೀಡಬೇಕೆಂದು ನ್ಯಾಯಾಲಯದ ನೆವಿನ್ ಅನುಮತಿ ಕೋರಿದ್ದಾಳೆ.

~ ಒನ್ ಇಂಡಿಯಾ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು