ನೇರ ನಗದು ವರ್ಗಾವಣೆಗೆ ಸಿದ್ಧ್ದರಾಗಲು ಬ್ಯಾಂಕ್‌ಗಳಿಗೆ ಸೂಚನೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

lpg-sll-2-2-2012ಮಂಗಳೂರು, 26: ಅಡುಗೆ ಅನಿಲ ಸೇರಿದಂತೆ ಕೇಂದ್ರ ಸರಕಾರದ ಸಬ್ಸಿಡಿ ಯೋಜನೆಯ ಹಣ ನೇರವಾಗಿ ಗ್ರಾಹಕರ ಖಾತೆಗೆ ಸೇರುವ ನೇರ ನಗದು ವರ್ಗಾವಣೆ ಯೋಜನೆ ದ.ಕ. ಜಿಲ್ಲೆಯಲ್ಲಿ 2014ರ ಜನವರಿಯಿಂದ ಜಾರಿಗೆ ಬರುತ್ತಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ದ.ಕ. ಜಿಲ್ಲೆಯ ಬ್ಯಾಂಕ್‌ಗಳು ನವೆಂಬರೊಳಗೆ ಮಾಡಿಕೊಳ್ಳಬೇಕು ಎಂದು ಸಿಂಡಿಕೇಟ್ ಬ್ಯಾಂಕ್ ಡಿಜಿಎಂ ಐ.ಟಿ.ಸೇತುರಾಮನ್ ಹೇಳಿದ್ದಾರೆ.

ಗುರುವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಏರ್ಪಡಿಸಿದ್ದ ಬ್ಯಾಂಕಿಂಗ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಆಧಾರ್ ಕಾರ್ಡ್ ಆಧರಿಸಿ ನೇರ ನಗದು ವರ್ಗಾವಣೆ ಯೋಜನೆ ಜಾರಿಗೆ ಕೇಂದ್ರ ಸರಕಾರ ಸಿದ್ಧತೆ ನಡೆಸಿದ ಪ್ರಕರಣವೀಗ ನ್ಯಾಯಾಲಯದಲ್ಲಿದೆ. ಆದರೂ ನಾವು ಯಾವುದಕ್ಕೂ ಸಿದ್ಧತೆಯಲ್ಲಿರಲೇಬೇಕು ಎಂದು ಅವರು ಸಲಹೆ ನೀಡಿದರು. ಬ್ಯಾಂಕ್‌ಗಳು ವಿವಿಧ ಸರಕಾರಿ ಯೋಜನೆಗಳ ಪ್ರಸ್ತಾವನೆಗಳನ್ನು ಅಕ್ಟೋಬರ್ ಅಂತ್ಯಕ್ಕೆ ಮೊದಲು ಕಳುಹಿಸಿಕೊಡಬೇಕು. ಹಾಗಿದ್ದಲ್ಲಿ ಡಿಸೆಂಬರ್‌ಗೆ ಮೊದಲು ಅವುಗಳಿಗೆ ಅನುಮೋದನೆ ಪಡೆಯುವುದು ಸಾಧ್ಯ ಎಂದು ಅವರು ಮಾಹಿತಿ ನೀಡಿದರು.

ಬ್ಯಾಂಕ್‌ಗಳ ಸಾಲ-ಠೇವಣಿ ಅನುಪಾತ(ಸಿ.ಡಿ) ಸದ್ಯ ಶೇ.53.8 ಆಗಿದೆ. ಕಳೆದ ಸಲಕ್ಕೆ ಹೋಲಿಸಿದರೆ ಇದು ಏರಿಕೆಯಾಗಿದೆ. ಆದರೆ ಇನ್ನಷ್ಟು ಪ್ರಗತಿಯಾಗಬೇಕು. ಈ ಹಣಕಾಸು ವರ್ಷದ ಅಂತ್ಯದೊಳಗೆ ಶೇ. 80ಕ್ಕೆ ಏರಬೇಕಿದೆ ಎಂದರು. ಕಾರ್ಪೊರೇಷನ್ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಶೇ.60ಕ್ಕಿಂತ ಹೆಚ್ಚು ಸಿ.ಡಿ. ಅನುಪಾತ ಹೊಂದಿರುವ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಾಗಿದ್ದರೆ ಎಸ್‌ಸಿಡಿಸಿಸಿ ಬ್ಯಾಂಕ್ ಶೇ. 85ರಷ್ಟು ಸಿ.ಡಿ. ಅನುಪಾತ ಹೊಂದಿದೆ ಎಂದರು.

ವರ್ಷದ ಪ್ರಗತಿ ಪರಿಶೀಲಿಸಿದರೆ ಠೇವಣಿ ಶೇ. 15.32ರಷ್ಟು ಹಾಗೂ ಮುಂಗಡ ಶೇ.20.56ರಷ್ಟು ಏರಿಕೆಯಾಗಿದೆ. ದೇಶಾದ್ಯಂತ ಆರ್ಥಿಕ ಸ್ಥಿತಿಗತಿ ಆಶಾದಾಯಕ ಇಲ್ಲದಿದ್ದರೂ ಜಿಲ್ಲೆಯಲ್ಲಿ ವಹಿವಾಟು ಶೇ.17.10ರಷ್ಟಿದ್ದು 40,570.60 ಕೋಟಿ ರೂ.ಗೆ ಏರಿಕೆಯಾಗಿದೆ. ಠೇವಣಿಗಳು 26,378.88 ಕೋಟಿ ರೂ. ಮತ್ತು ಮುಂಗಡ 14,191.72 ಕೋಟಿ ರೂ. ಆಗಿತ್ತು.

ಈ ಸಾಲಿನ ಜಿಲ್ಲಾ ಸಾಲ ಯೋಜನೆಯ ಅನ್ವಯ ಮೊದಲ ತ್ರೈಮಾಸಿಕ ಅವಧಿಯಲ್ಲಿ 1,600 ಕೋಟಿ ರೂ. ಗುರಿಯಿದ್ದು 1,876 ಕೋಟಿ ರೂ. ಸಾಲ ನೀಡುವ ಮೂಲಕ ಶೇ.117ರ ಸಾಧನೆ ಮಾಡಲಾಗಿದೆ.

ಕೃಷಿ ವಿಭಾಗದಲ್ಲಿ ಸಾಲ ನೀಡಿಕೆ ಗುರಿ 572.25 ಕೋಟಿ ರೂ. ಆಗಿದ್ದರೆ 962 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 136 ಕೋಟಿ ರೂ. ಸೇವಾ ವಲಯದ ಚಟುವಟಿಕೆಗಳಿಗೆ ನಿಗದಿಪಡಿಸಿದ ಗುರಿ 535 ಕೋಟಿ ರೂ. ಆಗಿದ್ದು, 359 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ