ಉಡುಪಿಯಲ್ಲಿಂದು ಶ್ರೀಕೃಷ್ಣಜನ್ಮಾಷ್ಟಮಿ ಸಡಗರ; ಪರ್ಯಾಯಶ್ರೀ ಸಂದೇಶ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಉಡುಪಿ, ಸೆ.7: ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಪರ್ಯಾಯ ಶ್ರೀಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ನಾಡಿನ ಸಮಸ್ತ ಜನತೆಗೆ ಶುಭವನ್ನು ಹಾರೈಸಿದ್ದಾರೆ.

ಎಲ್ಲಾ ಹಬ್ಬಹರಿದಿನಗಳನ್ನು ಆಚರಿಸುತಿದ್ದರೂ, ಶ್ರೀಕೃಷ್ಣ ಜನ್ಮಾಷ್ಟಮಿ ವ್ರತವು ವಿಶೇಷವಾದ ಛಾಪು ಮೂಡಿಸಿದ್ದು, ಇಂಥ ಆಚರಣೆಯು ಬೇರೆಲ್ಲಿಯೂ ಈ ರೀತಿ ಇರುವುದಿಲ್ಲ ಎಂದು ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.

ಕೃಷ್ಣಜನ್ಮಾಷ್ಟಮಿ: ಶ್ರೀಸೋದೆ ಶ್ರೀಗಳ ಸಂದೇಶ

ಉಡುಪಿ:ಎಲ್ಲ ಹಬ್ಬ ಹರಿದಿನಗಳು ಇದ್ದರೂ ಶ್ರೀಕೃಷ್ಣಜನ್ಮಾಷ್ಟಮೀ ವ್ರತವು ವಿಶೇಷವಾದ ಛಾಪು ಮೂಡಿಸಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಚರಿಸಿದಂತೆ ಜನ್ಮಾಷ್ಟಮೀ ಆಚರಣೆಯು ಬೇರೆಲ್ಲಿಯೂ ಆಚರಿಸಲಾಗುವುದಿಲ್ಲ.

ಸಮುಲಂಘ ಸದಾಚಾರಂ ಕಶ್ಚಿನ್ನಾಪ್ನೊàತಿ ಶೊಭನಮ್‌- ವಿಷ್ಣು ಪುರಾಣ. ಯಾವ ಮನುಷ್ಯನೇ ಆದರೂ ವೇದಸ್ಮತಿಗಳಲ್ಲಿ ಹೇಳಿರುವ ಉತ್ತಮವಾದ ಆಚಾರವನ್ನು ಉಲ್ಲಂ ಸಿ ಸ್ವೇಚ್ಛಾಚಾರದಿಂದ ನಡೆದರೆ ಅವನಿಗೆ ಒಳ್ಳೆಯ ಫ‌ಲ ಮತ್ತು ಶ್ರೇಯಸ್ಸು ಉಂಟಾಗುವುದಿಲ್ಲ. ಅದಕ್ಕಾಗಿ ಶಾಸ್ತ್ರದಲ್ಲಿ ಹೇಳಿದ ಹಬ್ಬಗಳನ್ನು ಆಚರಿಸಬೇಕು.

ಸಿಂಹಮಾಸದ ಅಷ್ಟಮಿ

ವಿಷ್ಣುತೀರ್ಥಿàಯದಲ್ಲಿ- ‘ಸಿಂಹಮಾಸೇ ತು ರೋಹಿಣ್ಯಾಯುತಾಂ ಕೃಷ್ಣಾಷ್ಟಮೀಂ ಪುಮಾನ್‌’ ಎಂಬುದಾಗಿ ಸಿಂಹಮಾಸದ ಕೃಷ್ಣಜನ್ಮಾಷ್ಟಮೀ ದಿನ ಜನ್ಮಾಷ್ಟಮೀ ವ್ರತವನ್ನು ಆಚರಿಸಬೇಕೆಂದಿದ್ದಾರೆ. ಶ್ರೀಕೃಷ್ಣ ತನ್ನ ಜನ್ಮದಿಂದಲೇ ಲೋಕಕ್ಕೆ ಸಂದೇಶವನ್ನು ಇತ್ತಿದ್ದಾನೆ. ಶ್ರೀಕೃಷ್ಣನ ದರ್ಶನವೇ ಮೋಕ್ಷದಾಯಕ ಎನ್ನುವ ನಿದರ್ಶನವನ್ನು ಜನತೆಗೆ ಸಾರಲು ಕೃಷ್ಣನ ಜನನವಾದ ತತ್‌ಕ್ಷಣವೇ ಕಾರಾಗೃಹದಲ್ಲಿದ್ದ ವಸುದೇವ ದೇವಕಿಯರ ಬೇಡಿಗಳು ತನ್ನಿಂತಾನೇ ಕಳಚಿದವು. ಇದನ್ನು ಭಾವಿಸಮೀರ ವಾದಿರಾಜರು ‘ರುಗ್ಮಿàಣೀಶ ವಿಜಯ’ದಲ್ಲಿ ವರ್ಣಿಸಿದ್ದಾರೆ.

ಜನನ ಸಂದೇಶ

ಕೃಷ್ಣನು ಜನಿಸಿದ ಬಳಿಕ ಆತನನ್ನು ನಂದಗೋಕುಲಕ್ಕೆ ವಾಸುದೇವ ಹಿಡಿದುಕೊಂಡುಹೋದ. ಆಗ ಕಾರಾಗೃಹದ ಬಾಗಿಲುಗಳು ತೆರೆದವು. ವರ್ಷಧಾರೆ ಇದ್ದರೂ ಸ್ವತಃ ಶೇಷನೇ ಛತ್ರನಾಗಿ ನಿಂತ. ಯಮುನೆ ತನ್ನಿಂತಾನೇ ಹಿಂದೆ ಸರಿದಳು. ಏಕೆಂದರೆ ವಾದಿರಾಜರು ವರ್ಣಿಸಿದಂತೆ ‘ಕರಸ್ಥ ದೇವಸ್ಯ ಕುತೋಂತರಾಯಃ’ ಅಂದರೆ ಕೈಯಲ್ಲಿ ದೇವರು ಇದ್ದಾಗ ಅಡೆತಡೆಗಳು ಎಲ್ಲಿಂದ? ಹಾಗಾಗಿ ಸದಾ ದೇವರನ್ನು ಹೃದಯದಲ್ಲಿ ತುಂಬಿಕೊಂಡರೆ ಎಂದಿಗೂ ನಮಗೆ ತೊಂದರೆಗಳು ಬರಲಾರವು. ಎಂತಹ ಜಟಿಲ ಸಮಸ್ಯೆಗಳಿದ್ದರೂ ಪರಿಹಾರವಾಗುವುದು.

ರಾಜಕೀಯ ಸಂದೇಶ

ಶ್ರೀಕೃಷ್ಣನು ರಾಜಕೀಯದಲ್ಲಿ ಎಂದಿಗೂ ಅಧಿಕಾರದ ದಾಹವನ್ನು ತೋರಿಸಿಲ್ಲ. ದುಷ್ಟ ಕಂಸನನ್ನು ಕೊಂದು ಉಗ್ರಸೇನನನ್ನು ಅಧಿಕಾರದ ಗದ್ದುಗೆಗೆ ಏರಿಸಿದ. ಜರಾಸಂಧನನ್ನು ಕೊಲ್ಲಿಸಿ ಸಹದೇವನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ. ಮಹಾಭಾರತದಲ್ಲೂ ಧರ್ಮರಾಜನಿಗೆ ಅಭಿಷೇಕಗೈದ. ಹೀಗೆ ತನಗೆ ಸಾಮರ್ಥಯವಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿಯಲಿಲ್ಲ. ಹೀಗೆ ತನ್ನ ಕೃತಿಯಿಂದ ಜಗತ್ತಿಗೆ ಸಂದೇಶವನ್ನು ನೀಡುತ್ತಿರುವ ಕೃಷ್ಣನ ಜನ್ಮದಿನಾಚರಣೆಯು ಇಂದಿಗೂ ಪ್ರಸ್ತುತ.

ಸಪರಿವಾರ ಸಂದೇಶ

ಕೃಷ್ಣಾಷ್ಟಮೀಯಂದು ‘ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ ದೇವಕೀ | ಯಶೋದಾಂ ನಂದಗೋಪಂ ಚ ಸುಭದ್ರಾಂ ತತ್ರ ಪೂಜಯೇತ್‌ ||’ ಎಂದು ಕೇವಲ ಕೃಷ್ಣನನ್ನು ಮಾತ್ರವಲ್ಲದೇ ವಸುದೇವ ದೇವಕಿಯರನ್ನೂ ಪೂಜಿಸಬೇಕು. ಏಕೆಂದರೆ ಮಣಿಮಂಜರಿಯಲ್ಲಿ ಒಂದು ಶ್ಲೋಕವಿದೆ. ‘ದಂಪತ್ಯೋರನಯೋರಾಶಾಃ ಪೂರಯನ್‌ ಸುರಕಾರ್ಯವಾನ್‌’. ಅನಾದಿ ನಿತ್ಯನಾದ ಕೃಷ್ಣನು ವಸುದೇವ ದೇವಕಿಯರಿಗೆ ಮಗನಾಗಿ ಹುಟ್ಟಿದ. ಏಕೆಂದರೆ ಕಶ್ಯಪ ಅದಿತಿಯರು ಭಗವಂತನನ್ನು ಮಗನನ್ನಾಗಿ ಪಡೆಯಲು ಬಹುಕಾಲ ತಪಸ್ಸನ್ನು ಆಚರಿಸಿದರು. ಅವರಿಗೆ ಮಗನಾಗಿ ಹುಟ್ಟಿಬರುವೆನೆಂದು ಹೇಳಿದ ಭಗವಂತ, ವಸುದೇವ ದೇವಕಿಯರಾಗಿ ಬಂದ ಕಶ್ಯಪ ಅದಿತಿಗಳಿಗೆ ಮಗನಾಗಿ ಬಂದ. ಅದಕ್ಕಾಗಿ ಕೇವಲ ಶ್ರೀಕೃಷ್ಣನನ್ನು ಮಾತ್ರ ಪೂಜಿಸದೇ ಅವನ ತಂದೆ ತಾಯಿಗಳಾದ ವಸುದೇವ ದೇವಕಿಯರನ್ನೂ ಪೂಜಿಸಬೇಕು. ಇದರಿಂದ ಎಲ್ಲರೂ ಅವರವರ ತಂದೆ ತಾಯಿಗಳನ್ನು ಗೌರವಿಸಬೇಕೆಂದು ಶಾಸ್ತ್ರದ ಮೂಲಕ ಕೃಷ್ಣ ನಮಗೆ ಶ್ರುತಪಡಿಸಿದ್ದಾನೆ. ಹಾಗೆಯೇ ಸಪರಿವಾರವಾಗಿ ಅಂದರೆ ಕೃಷ್ಣನ ಅಣ್ಣ, ತಂಗಿ, ತಂದೆ, ತಾಯಿ, ಸಾಕುತಂದೆ, ಸಾಕುತಾಯಿ ಹೀಗೆ ಎಲ್ಲರನ್ನು ಪೂಜಿಸಬೇಕೆಂದಾಯಿತು. ಅಂದರೆ ನಾವೆಲ್ಲರೂ ಭಗವಂತನನ್ನು ಆರಾಧಿಸುವಾಗ ಸಪರಿವಾರವಾಗಿ ಪೂಜಿಸಬೇಕು. ಅಂತೆಯೇ ಸಮಾಜದಲ್ಲಿ ಎಲ್ಲರೂ ತಮ್ಮ ತಮ್ಮ ಎಲ್ಲ ಸಂಬಂಧಗಳಿಗೆ ಮಾನ್ಯತೆ ನೀಡಬೇಕೆಂದು ಕೃಷ್ಣನು ಶಾಸ್ತ್ರಗಳ ಮೂಲಕ ಸಂದೇಶವಿತ್ತಿದ್ದಾನೆ.

ಭಗವಂತನ ಸ್ಮರಣೆ ಸಂದೇಶ

ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವೊ ನ ಜಾತು ಚಿತ್‌| ಸರ್ವೆà ವಿಧಿ ನಿಷೇಧಾಃ ಸುÂಃ ಏತಯೋರೇವ ಕಿಂಕರಾಃ || ಎಂಬುದಾಗಿ ಆಚಾರ್ಯ ಮಧ್ವರು ಉದ್ಘೋಷಿಸಿದ್ದಾರೆ. ಅಂದರೆ ಹರಿಸ್ಮರಣೆಯನ್ನು ಸತತವಾಗಿ ನಡೆಸಬೇಕು. ಕೇವಲ ಕಷ್ಟ ಬಂದಾಗ ಮಾತ್ರ ‘ಸಂಕಟ ಬಂದರೆ ವೆಂಕಟರಮಣ’ ಎನ್ನುವ ಗಾದೆಯಂತೆ ಸ್ಮರಣೆ ಮಾಡುವುದಲ್ಲ. ಸತತವೂ ಭಗವಂತನ ಸ್ಮರಣೆ ಮಾಡಬೇಕು. ಕೃಷ್ಣಜನ್ಮಾಷ್ಟಮಿಯನ್ನು ಪ್ರತೀ ವರ್ಷವೂ ಆಚರಿಸಬೇಕು. ನಿತ್ಯ ಕೃಷ್ಣನನ್ನು ಸ್ಮರಿಸಬೇಕು.

ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷಣೆ ಸಂದೇಶ

‘ಜಾತಃ ಕಂಸವಧಾರ್ಥಾಯ ಭೂಭಾರ ಹರಣಾಯ ಚ’ ಎಂಬಂತೆ ದುಷ್ಟ ಕಂಸನ ವಧೆಗೆ ಹಾಗೂ ಭೂಭಾರ ನಾಶಕ್ಕಾಗಿ ಭಗವಂತ ಅವತರಿಸಿದ. ಅಂದರೆ ಕೃಷ್ಣನು ದುಷ್ಟರನ್ನು ಶಿಕ್ಷಿಸಿಯೇ ಶಿಕ್ಷಿಸುತ್ತಾನೆ. ಗೀತೆಯಲ್ಲಿ ಹೇಳಿದಂತೆ ಭಕ್ತರ ಯೋಗಕ್ಷೇಮವನ್ನು ವಹಿಸುವನು. ಭಕ್ತರನ್ನು ರಕ್ಷಿಸಿಯೇ ರಕ್ಷಿಸುತ್ತಾನೆ. ಹಾಗಾಗಿ ನಾವೆಲ್ಲಾ ಶ್ರೀಕೃಷ್ಣಭಕ್ತರಾಗಿ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ.

ಶ್ರೀಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು,
ಶ್ರೀಕೃಷ್ಣಮಠ, ಪರ್ಯಾಯ ಶ್ರೀಸೋದೆ ವಾದಿರಾಜ ಮಠ, ಉಡುಪಿ.

ಉಡುಪಿಯಲ್ಲಿಂದು ಶ್ರೀಕೃಷ್ಣಜನ್ಮಾಷ್ಟಮಿ ಸಡಗರ

ಉಡುಪಿ: ಉಡುಪಿಯ ಸಡಗರದ ಹಬ್ಬ ಶ್ರೀಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿ ಬಂದೇ ಬಿಟ್ಟಿದೆ. ಉತ್ಸವ ಆಚರಣೆಗೆ ಉಡುಪಿ ರಥಬೀದಿ ಸಂಪೂರ್ಣ ಸಜ್ಜಾಗಿ ನಿಂತಿದೆ. ಶ್ರೀಕೃಷ್ಣಮಠ ಹೂವಿನಿಂದ ಸಂಪೂರ್ಣ ಅಲಂಕರಣಗೊಂಡಿದೆಯಾದರೆ ರಥಬೀದಿಯಲ್ಲಿ ನೆಟ್ಟ ಗುಜ್ಜಿಗಳು ವಿಟ್ಲಪಿಂಡಿ ಉತ್ಸವಕ್ಕೆ ಸಾಕ್ಷಿಯಾಗಲು ಕಾದು ನಿಂತಂತಿದೆ.

ಶನಿವಾರ ಬೆಳಗ್ಗಿನಿಂದ ರವಿವಾರ ರಾತ್ರಿವರೆಗೆ ಭಜನಾ ತಂಡಗಳು, ನಾಗಸ್ವರ ವಾದನ ಹೀಗೆ ಒಂದಲ್ಲ ಒಂದು ಚಟುವಟಿಕೆಯಲ್ಲಿ ರಥಬೀದಿ ಪರಿಸರ ತೊಡಗಿಕೊಂಡಿರುತ್ತದೆ. ಸಾವಿರಾರು ಭಕ್ತರು ಈ ಸದವಸರದಲ್ಲಿ ಶ್ರೀಕೃಷ್ಣದರ್ಶನಕ್ಕೆ ನಾಡಿನೆಲ್ಲೆಡೆಯಿಂದ ಬರುತ್ತಾರೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಪರ್ಯಾಯ ಶ್ರೀಸೋದೆ ವಾದಿರಾಜ ಮಠ ಮಾಡಿದೆ.

ಶನಿವಾರ ಬೆಳಗ್ಗೆ ಮಹಾಪೂಜೆಯ ಬಳಿಕ ಪರ್ಯಾಯ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ರಾತ್ರಿಯ ನೈವೇದ್ಯಕ್ಕಾಗಿ ಉಂಡೆ ಕಟ್ಟುವ ಕೆಲಸಕ್ಕೆ ಮುಹೂರ್ತ ಮಾಡುತ್ತಾರೆ. ಏಕಾದಶಿಯಂತೆ ದಿನವಿಡೀ ಉಪವಾಸವಿರುವ ಕಾರಣ ರಾತ್ರಿ ಶ್ರೀಕೃಷ್ಣನಿಗೆ ಲಕ್ಷತುಳಸಿ ಅರ್ಚನೆಯನ್ನು ನಡೆಸುತ್ತಾರೆ. ರಾತ್ರಿ 12.10ಕ್ಕೆ ಕೃಷ್ಣನಿಗೆ ಅಘÂìಪ್ರದಾನ ಮಾಡುತ್ತಾರೆ. ಮರು ದಿನ ರವಿವಾರ ದ್ವಾದಶಿಯಂತೆ ಮುಂಜಾವ ಪೂಜೆ ನಡೆಯುತ್ತದೆ. ಬೆಳಗ್ಗೆ 10ರಿಂದ 3 ಗಂಟೆವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 3 ಗಂಟೆಗೆ ಆಕರ್ಷಕ ವಿಟ್ಲಪಿಂಡಿ ಉತ್ಸವದಲ್ಲಿ ನೂರಾರು ವೇಷಗಳ ನರ್ತನ, ಸ್ಪರ್ಧೆ ಸಂಪನ್ನಗೊಳ್ಳಲಿವೆ. ಈ ಉತ್ಸವದಲ್ಲಿ ಮಾತ್ರ ಮಣ್ಣಿನ ವಿಗ್ರಹವನ್ನು ಪೂಜಿಸಲಾಗುತ್ತದೆ. ಚಾತುರ್ಮಾಸ್ಯದ ಅವಧಿಯಾದ ಕಾರಣ ಉತ್ಸವ ಮೂರ್ತಿಯನ್ನು ಹೊರಗೆ ತರುವುದಿಲ್ಲ. ಪ್ರತಿ ವರ್ಷವೂ ಈ ವಿಗ್ರಹವನ್ನು ಮಾಡುವವರು ಕಲಾವಿದ ಸೋಮನಾಥ ಚಿಟಾ³ಡಿಯವರು. ಕಪ್ಪು ಬಣ್ಣ ಕೊಟ್ಟು ಸುಮಾರು 9 ಇಂಚಿನ ವಿಗ್ರಹವನ್ನು ತಯಾರಿಸಿದ್ದಾರೆ.

ಮಳೆ-ರಜೆ

ಸಾಮಾನ್ಯವಾಗಿ ಮಳೆಗಾಲದಲ್ಲಿಯೇ ಜನ್ಮಾಷ್ಟಮಿ ಬರುತ್ತದೆ. ಶ್ರೀಕೃಷ್ಣ ಹುಟ್ಟುವಾಗಲೂ ಮಳೆ ಬರುತ್ತಿತ್ತು ಎಂಬ ಉಲ್ಲೇಖ ಪುರಾಣಗಳಲ್ಲಿದೆ. ಆದರೆ ವಾಸ್ತವ ಜಗತ್ತಿನಲ್ಲಿ ಮಳೆ ಬಂದರೆ ಸಡಗರಕ್ಕೆ ಧಕ್ಕೆ ಆಗುತ್ತದೆ. ಇನ್ನೊಂದೆಡೆ ವೇಷಗಳನ್ನು ಧರಿಸಿ ಕುಣಿಯುವವರಿಗೆ ಮಳೆ ಬಂದರೆ ಸ್ವಲ್ಪ ತಂಪಾಗುತ್ತದೆ. ಶನಿವಾರ ಎರಡನೆಯ ಶನಿವಾರ ಬಂದ ಕಾರಣ ಹಬ್ಬ ಆಚರಿಸುವವರಿಗೆ ಅನುಕೂಲವಾಗಿದೆ. ವಿಟ್ಲಪಿಂಡಿ ರವಿವಾರ ಬಂದದ್ದರಿಂದ ವಿಟ್ಲಪಿಂಡಿ ಉತ್ಸವದಲ್ಲಿಯೂ ಭಾಗವಹಿಸಬಹುದಾಗಿದೆ.

ಒಂದೇ ಊರಿನಲ್ಲಿ ಒಂದೆಡೆ ಅಗ್ಗ; ಇನ್ನೊಂದೆಡೆ ದುಬಾರಿ ಹೂವುಗಳು

ಶುಕ್ರವಾರವೇ ವ್ಯಾಪಾರಕ್ಕಾಗಿ ಹೂವಾಡಿಗರು ಉಡುಪಿ ರಥಬೀದಿಗೆ ಲಗ್ಗೆ ಹಾಕಿದ್ದಾರೆ. ಸೇವಂತಿಗೆ ಮತ್ತು ಕಾಕಡ ಹೂವಿನ ದರಗಳು ತುಂಬಾ ಅಗ್ಗವಾಗಿದೆ. ರಥಬೀದಿಯಲ್ಲಿ ಒಂದು ಮಾರಿಗೆ 10 ರೂ. ಇದ್ದರೆ ಬಸ್‌ ನಿಲ್ದಾಣದ ಬಳಿ ಒಂದು ಮಾರಿಗೆ 40 ರೂ. ಇದೆ. ರಥಬೀದಿಗೆ ಬಂದವರು ಮೈಸೂರು, ಹಾಸನ ಮೊದಲಾದೆಡೆಯವರು.

ಆಫ್ರಿಕನ್‌ ಹುಲಿಗಳು ಬರ್ತಾವೆ!

ಅಶೋಕ್‌ರಾಜ್‌ ಕಾಡಬೆಟ್ಟು ಅವರು ಪ್ರತಿ ವರ್ಷ ವಿಟ್ಲಪಿಂಡಿಗೆ ವಿಶೇಷ ಆಕರ್ಷಣೆಯನ್ನು ನೀಡುತ್ತಿದ್ದಾರೆ. ಕಪ್ಪು ಹುಲಿಗಳು ಆಫ್ರಿಕನ್‌ ಮಾದರಿಯಲ್ಲಿ ವರ್ತಿಸುತ್ತವೆ. ಎರಡೆರಡು ಹುಲಿಗಳು ನೃತ್ತಿಸುತ್ತವೆ. ಈ ನೃತ್ಯ ಸಾಮಾನ್ಯ ಹುಲಿ ನೃತ್ಯಕ್ಕಿಂತ ಭಿನ್ನವಾಗಿರುತ್ತದೆ. ಕುಳಿತುಕೊಳ್ಳುವುದು, ನರ್ತಿಸುವುದು, ಪಲ್ಟಿಹೊಡೆಯುವುದು, ಪರಚುವುದು ಆಫ್ರಿಕನ್‌ ಮಾದರಿಯದ್ದಾಗಿರುತ್ತದೆ.

7ಗಿ6 ಅಡಿ ಆಕಾರದ ಪಂಜರದಲ್ಲಿರುವ ಹುಲಿಗಳನ್ನು ಕ್ರೇನ್‌ ಸಹಾಯದಿಂದ ಎತ್ತಿಕೊಂಡು ಹೋಗಲಾಗುತ್ತದೆ. ಬೇಕಾದ ಸ್ಥಳದಲ್ಲಿ ಇಳಿಸಿ ನರ್ತಿಸಿ ಇನ್ನೊಂದು ಕಡೆಗೆ ಹೋಗುತ್ತಾರೆ. ಇದು ಈ ಬಾರಿಯ ಅಶೋಕ್‌ ಕಾಡಬೆಟ್ಟು ಅವರ ಕೊಡುಗೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ