ಚೋಮನ ದುಡಿ ಕಾದಂಬರಿ ವೌಲ್ಯದ ಉತ್ಪಾದನೆ: ಡಾ. ನರೇಂದ್ರ ರೈ ದೇರ್ಲ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಗಳೂರು, ಸೆ.13: ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಕೆ. ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿ ವೌಲ್ಯದ ಉತ್ಪಾದನೆ ಎಂದು ಬೆಳ್ಳಾರೆ ಡಾ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಕೆ. ಶಿವರಾಮ ಕಾರಂತ ಪೀಠದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಪ್ರಚಾರೋಪನ್ಯಾಸ ಮಾಲಿಕೆ ಕಾರ್ಯ ಕ್ರಮದ ಅಂಗವಾಗಿ ಇಂದು ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರಂತರ ‘ಚೋಮನ ದುಡಿ’ ಕಾದಂಬರಿಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

1933ರಲ್ಲಿ ದಲಿತ ಪರ ಸಂವೇದನೆ ಯೊಂದಿಗೆ ಹೊರಬಂದ ಚೋಮನ ದುಡಿ ಕಾದಂಬರಿ ಆ ಬಳಿಕ ಬಂದ ದಲಿತ ಲೇಖಕರಿಗೆ ನೈತಿಕ ವಾರಿಸುದಾರಿಕೆಯನ್ನು ನೀಡಿದೆ ಎಂದು ವಿಶ್ಲೇಷಿಸಿದ ಅವರು, ಕಾರಂತರು ತಮ್ಮ ಕಾದಂಬರಿ ಯಲ್ಲಿ ಚೋಮನನ್ನು ದಲಿತನಾಗಿ ಜಾತಿಯ ಆಧಾರದಲ್ಲಿ ಕಾಣು ವುದಕ್ಕೆ ಬದಲಾಗಿ ಶೋಷಿತ ವ್ಯಕ್ತಿಯಾಗಿ ಕಂಡಿದ್ದಾರೆ ಎಂದರು.

ಸ್ವಾತಂತ್ರ ಚಳವಳಿಯ ಸಂದರ್ಭ ಬುದ್ಧಿಜೀವಿಗಳು ಸಾಮಾಜಿಕ ಚಳವಳಿಯಲ್ಲಿ ತೊಡಗಿಕೊಂಡಾಗ ಕಾರಂತರು ತಮ್ಮ ಬರವಣಿಗೆಯ ಮೂಲಕ 6ನೆ ಕಾದಂಬರಿಯಾಗಿ ‘ಚೋಮನ ದುಡಿ’ಯ ಮೂಲಕ ಸಾಮಾಜಿಕ ಪರಿವರ್ತನೆಯ ಕಾರ್ಯ ನಡೆಸಿದ್ದಾರೆ. ಭಾಷೆಯ ಮಡಿವಂತಿಕೆಗೆ ಒತ್ತು ನೀಡದೆ ಲೋಕ ವಿದ್ಯಾಲಯದಲ್ಲಿ ತಾವು ಕಂಡ ಅನುಭವವನ್ನು ಹೊಸ ತಲೆಮಾರಿಗೆ ಮುಟ್ಟಿಸುವ ಕೆಲಸವನ್ನು, ಆ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸವನ್ನು ಕಾರಂತರು ನಿರ್ವಹಿಸಿದ್ದಾರೆ.

ಕತ್ತಲೆಯಿಂದ ಆರಂಭ ವಾಗಿ ಕತ್ತಲೆಯೊಂದಿಗೆ ಅಂತ್ಯಗೊಳ್ಳುವ ಕಾದಂಬರಿಯ ಕಲಾತ್ಮಕತೆಯನ್ನು ಚೋಮನ ಬೆಳಕಿನಲ್ಲಿ ಕಾರಂತರನ್ನು ನೋಡಿದಾಗ ಸಾಮಾಜಿಕ ನ್ಯಾಯ ಪ್ರತಿಬಿಂಬಿತವಾಗುತ್ತದೆ ಎಂದು ನರೇಂದ್ರ ರೈ ವಿಶ್ಲೇಷಿಸಿದರು. ಪೀಠದ ನಿರ್ದೇಶಕಿ ಪ್ರೊ. ಸಬಿಹಾ ಭೂಮಿಗೌಡ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಎಂ.ಎಂ. ಮಂಜುನಾಥ್ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವತ್ಸಲ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ರೇಖಾ ಕಾರ್ಯಕ್ರಮ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ