“ಸೋಂಪ” ತುಳು ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ – ಚಿತ್ರಕ್ಕೆ ಪ್ರೋತ್ಸಾಹ ನೀಡಿ : ನಮೃತ ಹೆಗ್ಡೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಗಳೂರು,ಸೆಪ್ಟಂಬರ್.೧೪: ತುಳು ಚಲನಚಿತ್ರರಂಗಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯ ಸೋಂಪ ಚಿತ್ರ ತೆರೆಕಂಡಿದೆ. ಪ್ರಖ್ಯಾತ ಕಲಾವಿದರು- ಉದಯೋನ್ಮುಖ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಗರದ ಪ್ರಭಾತ್ ಚಿತ್ರ ಮಂದಿರ ಹಾಗೂ ಭಾರತ್ ಮಾಲ್‌ನ ಬಿಗ್ ಸಿನೆಮಾಸ್‌ನಲ್ಲಿ ಇಂದಿನಿಂದ ಆರಂಭಗೊಂಡ “ಸೋಂಪ” ತುಳು ಚಲನ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ.

ನಮೃತಾ ಹೆಗ್ಡೆ ನಿರ್ಮಾಣದ ಪ್ರಥಮ ಕಾಣಿಕೆ “ಸೋಂಪ” ತುಳು ಚಲನ ಚಿತ್ರವು ನಗರದ ಬಿಗ್ ಸಿನಿಮಾ ಚಿತ್ರಮಂದಿರದಲ್ಲಿ ಗುರುವಾರ ಮೊದಲ ಪ್ರದರ್ಶನ (ಪ್ರೀಮಿಯಾರ್ ಶೋ)ಕಂಡಿತು. ಮಾಜಿ ಸಚಿವ ಅಮರನಾಥ ಶೆಟ್ಟಿ ಅವರು ದೀಪ ಬೆಳಗಿಸಿ, ಚಿತ್ರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಚಿತ್ರದ ನಾಯಕ ಅಜಾತ ಶತ್ರು, ನಾಯಕಿ, ನಿರ್ಮಾಕಿ ನಮೃತ ಹೆಗ್ಡೆ, ಖ್ಯಾತ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಬಿಜೆಪಿ ಮುಖಂಡ ರಾಮಚಂದ್ರ ಬೈಕಂಪಾಡಿ, ಮುಂಬೈ ಉದ್ಯಮಿ ಹರೀಶ್ ವಾಸು ಶೆಟ್ಟಿ, ಉದಯವಾಣಿ ಪತ್ರಿಕೆಯ ಮಂಗಳೂರು ಸುದ್ಧಿ ವಿಭಾಗದ ಮುಖ್ಯಸ್ಥ ಮನೋಹರ್ ಪ್ರಸಾದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗೀತಾ ಹೆಗ್ಡೆ ಮತ್ತು ನಮೃತಾ ಹೆಗ್ಡೆ ನಿರ್ಮಿಸಿರುವ ಮುಂಬಾಯಿಯ ರಾಜನ್ ಲಾಲಪುರಿ ನಿರ್ದೆಶನ ಮಾಡಿರುವ “ಸೋಂಪ” ತುಳು ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.ಸಂಗೀತ – ಇಕ್ಬಾಲ್ ದರ್ಬಾರ್ , ವಿಜಯ ಕುಮಾರ್ ಕೊಡಿಯಾಲ್ ಬೈಲ್, ಶಶಿರಾಜ್ ಕಾವೂರ್, ತಮ್ಮ ಲಕ್ಷ್ಮಣ್ ಮತ್ತು ರಾಜನ್ ಲಾಲಪುರಿ ಸಂಗೀತ ಬರೆದಿದ್ದಾರೆ. ಈ ಚಿತ್ರದಲ್ಲಿ ಒಂದು ಹಿಂದಿ ಭಾಷೆಯ ಹಾಡು ಇದೆ. ಡಾ.ನಿತಿನ್ ಆಚಾರ್ಯ, ಡಾ.ಸುಶೀಲ ರಾವ್, ರಿಮಿದರ್ ಅರಿಫ್ ಹಿನ್ನೆಲೆ ಹಾಡು ಹಾಡಿದ್ದಾರೆ.

ಚಿತ್ರದ ನಾಯಕನಾಗಿ ಅಜಾತಶತ್ರು, ನಾಯಕಿಯಾಗಿ ನಮೃತಾ ಹೆಗ್ಡೆ, ಅರವಿಂದ್ ಬೋಳಾರ್, ಸದಾಶಿವ ಅಮ್ರಪುರ್‌ಕರ್, ರವಿ ಸುರತ್ಕಲ್, ಪ್ರದೀಪ್ ಆಳ್ವ, ಜೀವನ್ ಆಳ್ವ, ತಮ್ಮ ಲಕ್ಷ್ಮಣ್, ಮನೋಜ್ ಅತ್ತವರ್, ನಾಗೇಶ್ ದಂಬೇಲ್,  ಪ್ರದೀಪ್‌ ಆಳ್ವ, ಶಶಿರಾಜ್‌ ಕಾವೂರು, ಶೋಭಾ ಶೆಟ್ಟಿ, ಜೀವನ್‌ ಉಳ್ಳಾಲ್‌, ರಾಜೇಶ್‌ ಕೆಂಚನಕೆರೆ ಅಲ್ಲದೇ ಮುಂಬಾಯಿಯ ಕೆಲವು ತುಳು ಕಲಾವಿದರು ನಟಿಸಿದ್ದಾರೆ.

ಅಭಿನಯಕ್ಕೆ ಪ್ರಥಮ ಆದ್ಯತೆ : ನಮೃತಾ ಹೆಗ್ಡೆ

ಮೂಲತಃ ಮಂಗಳೂರಿನ ಬೊಂದೇಲ್‌ನವರಾಗಿದ್ದು ದುಬೈನಲ್ಲಿ ಜನಿಸಿ, ಅಲ್ಲಿ ವ್ಯಾಸಂಗ ನಡೆಸಿ, ಅಮೆರಿಕಾದಲ್ಲಿ ಎಂಬಿ‌ಎ ಪಡೆದ ನಮೃತಾ ಹೆಗ್ಡೆ ಅವರು ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಿ, ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡದ ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ, 5 ಈಡಿಯಟ್ಸ್‌, ವಿಘ್ನ, ತುಳುವಿನ ಬಂಗಾದ ಕುರಲ್‌, ಹಿಂದಿಯ ಗಾಂಧಿ ತೆರೆ ದೇಶ್‌ಮೇಯಲ್ಲಿ ನಟಿಸಿದ್ದಾರೆ. ಅಭಿನಯ ನನ್ನ ಪ್ರಥಮ ಆದ್ಯತೆ ಅನ್ನುತ್ತಾರೆ ಅವರು.

ಆಜಾತಶತ್ರು- ನಮೃತಾ ಹೆಗ್ಡೆ

ನಾಯಕನಟ ಆಜಾತಶತ್ರು ಮೂಲತಃ ಗುಜರಾತ್‌ನವರು. ಮುಂಬಯಿಯಲ್ಲಿ ನೆಲೆಸಿದ್ದಾರೆ. ಅನುಪಮ್‌ ಖೇರ್‌ ಅಕಾಡೆಮಿಯಲ್ಲಿ ಪದವಿಯನ್ನು ಅಲ್ಲಿನ ಪ್ರಥಮ ವ್ಯಾಸಂಗ ವೇತನ ಪ್ರತಿಭಾವಂತನಾಗಿ ಪಡೆದವರು. ಹಿಂದಿ, ಮರಾಠಿಯಲ್ಲಿ 9 ಚಿತ್ರಗಳಲ್ಲಿ ನಟಿಸಿದ್ದಾರೆ. ವೀರ್‌ ಶಿವಾಜಿ, ಸುಕನ್ಯ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಮಂಗಳೂರು ಸಹಿತ ಕರಾವಳಿಯ ಪರಿಸರ, ಮುಂಬಯಿಯಲ್ಲಿ ಚಿತ್ರೀಕರಣವಾಗಿದೆ. ಚಿತ್ರವು ಹಾಸ್ಯ ಕಥಾನಕವನ್ನು ಒಳಗೊಂಡಿದ್ದು, ಸಮಾಜಕ್ಕೆ ಸದಾಶಯದ ಸಂದೇಶವನ್ನು ನೀಡುತ್ತಿದೆ ಎನ್ನುತ್ತಾರೆ ನಮೃತಾ ಹೆಗ್ಡೆ. ಜನತೆ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ಅವರು ವಿನಂತಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಕಾಪಿಕಾಡ್ ಸತೀಶ್

About ಕಾಪಿಕಾಡ್ ಸತೀಶ್

ಗ.ಕ. ವಾರ್ತಾ ವಿಭಾಗ ಮಂಗಳೂರು ಉಸ್ತುವಾರಿಯನ್ನು ನಮ್ಮ ಮಂಗಳೂರು ವರದಿಗಾರರಾದ ಸತೀಶ್ ಕಾಪಿಕಾಡ್‌ರವರು ನಿರ್ವಹಿಸುತ್ತಿದ್ದು ನಿಮ್ಮ ಯಾವುದೇ ಕಾರ್ಯಕ್ರಮಗಳ ವರದಿಗಳನ್ನು ಈ ಕೆಳಗಿನ ಈಮೈಲ್‌ಗೆ ಕಳುಹಿಸಬುದು.ಅಥವಾ ಮೊಬೈಲ್ ಸಂಖ್ಯೆ: 9035089084 ನ್ನು ಸಂಪರ್ಕಿಸಬಹುದು. sathishkapikad@gmail.com