ಪಠ್ಯಪುಸ್ತಕಗಳ ಕೇಸರೀಕರಣದ ವಿರುದ್ಧ ನಾಳೆ ವಿಚಾರ ಸಂಕಿರಣ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಗಳೂರು, ಸೆ.14: ಪಠ್ಯಪುಸ್ತಕಗಳ ಕೇಸರೀಕರಣ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಪಠ್ಯಪುಸ್ತಕಗಳ ಕೇಸರೀಕರಣದ ವಿರುದ್ಧ ಸೆ.16ರಂದು ನಗರದ ಲೊಯಲೋ ಹಾಲ್‌ನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳ ಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರದ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ 2005ರಲ್ಲಿ ದೇಶಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಠ್ಯಗಳನ್ನು ಪುನರ್ ರಚಿಸಲು ಮಾರ್ಗದರ್ಶಿ ನಿಯಮಾವಳಿ ರೂಪಿಸಿದೆ. ಇದರ ಪ್ರಕಾರ ಎಲ್ಲ ರಾಜ್ಯಗಳು ಪಠ್ಯ ಪುನರ್ ರಚಿಸಬೇಕಿತ್ತು. ಆದರೆ, ರಾಜ್ಯ ಬಿಜೆಪಿ ಸರಕಾರ 5ನೆ ತರಗತಿಯ ಸಮಾಜ ವಿಜ್ಞಾನ, 8ನೆ ತರಗತಿಯ ಸಮಾಜ ವಿಜ್ಞಾನ, ಕನ್ನಡ, ಹಿಂದಿ ಪಠ್ಯಗಳನ್ನು ಕೇಸರೀಕರಣಗೊಳಿಸಿದೆ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ದಲಿತ, ಸ್ತ್ರೀ, ಅಲ್ಪಸಂಖ್ಯಾತರನ್ನು ಕೀಳಾಗಿ ಮತ್ತು ಶತ್ರುಗಳಂತೆ ಕಾಣುವ ಪಾಠಗಳನ್ನು ಜಾಣತನದಿಂದ ಸೇರಿಸಲಾಗಿದೆ. ರಾಜ್ಯದ ಇತಿಹಾಸವನ್ನು ಆಶ್ಚರ್ಯಕರ ರೀತಿಯಲ್ಲಿ ತಿರುಚಲಾಗಿದೆ. ಇದರಿಂದ ಪಠ್ಯಪುಸ್ತಕಗಳನ್ನು ಓದುವ ಮಕ್ಕಳಲ್ಲಿ ಮತಾಂಧತೆಯ ಬೀಜ ಮೊಳಕೆಯೊಡಿಯಲಿದೆ. ಪಠ್ಯಪುಸ್ತಕದ ಕೇಸರೀಕರಣದ ಬಗ್ಗೆ ವಿರೋಧ ವ್ಯಕ್ತಪಡಿಸಿದಾಗ ಸರಕಾರ ಸ್ವಲ್ಪ ತಿದ್ದುಪಡಿ ಮಾಡಿ ಕಣ್ಣಿಗೆ ಮಣ್ಣೆರಚಿವೆ. ಇದೀಗ 6, 7, 9ಮತ್ತು 10ನೆ ತರಗತಿ ಪಠ್ಯಪುಸ್ತಕಗಳ ಪುನರ್ರಚನೆ ಕಾರ್ಯ ನಡೆಯುತ್ತಿದ್ದು, ಇದರ ವಿರುದ್ಧ ಧ್ವನಿ ಎತ್ತುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಪತ್ರಕರ್ತ ಇಂದೂಧರ ಹೊನ್ನಾಪುರ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಮಂಗಳೂರು ಧರ್ಮಪ್ರಾಂತದ ವಿಕಾರ್ ಜನರಲ್ ಡೆನಿಸ್ ಪ್ರಭು, ಪುತ್ತೂರು ಧರ್ಮಪ್ರಾಂತದ ಬಿಷಪ್ ಗೀವರ್ಗೀಸ್ ಮಾರ್ ದಿನಾವಾನಿಯೊಸ್, ಬೆಥೆನಿ ಕಾಂಗ್ರೆಗೇಷನ್ ಸುಪೀರಿಯರ್ ಜನರಲ್ ವಿಲ್ಬರ್ಟಾ ಬಿ.ಎಸ್., ಪಿಎಫ್‌ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಕೆಥೊಲಿಕ್ ಸಭಾದ ಅಧ್ಯಕ್ಷ ನೈಜಿಲ್ ಪಿರೇರ, ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಜತೆ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಕರ್ನಾಟಕ ಮಿಷನ್ಸ್ ನೆಟ್‌ವರ್ಕ್ ಅಧ್ಯಕ್ಷ ವಾಲ್ಟರ್ ಮಾಬೆನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ