ಅಗರಿ ರಘುರಾಮ ಭಾಗವತರಿಗೆ ಶ್ರೀ ತ್ರಿಕಣ್ಣೇಶ್ವರಿ ಪ್ರಶಸ್ತಿ ಪ್ರದಾನ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಉಡುಪಿ: ತೆಂಕುತಿಟ್ಟಿನ ನಿವೃತ್ತ ಹಿರಿಯ ಭಾಗವತ ಅಗರಿ ರಘುರಾಮ ಭಾಗವತರಿಗೆ ಶ್ರೀ ಗಣೇಶ ದುರ್ಗಾ ಚಾರಿಟೇಬಲ್ ಟ್ರಸ್ಟ್ ಹಾಗೂ ಉಡುಪಿಯ ಶ್ರೀ ತ್ರಿಕಣ್ಣೇಶ್ವರಿ ವಾಣಿ ಕನ್ನಡ ಮಾಸ ಪತ್ರಿಕೆ ಜಂಟಿಯಾಗಿ ನೀಡುವ ಶ್ರೀ ತ್ರಿಕಣ್ಣೇಶ್ವರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಾನುವಾರ ಉಡುಪಿಯ ಪಿಪಿಸಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಪ್ರಶಸ್ತಿ ಪ್ರದಾನ ಮಾಡಿದರು.

ಆಶೀರ್ವಚನ ನೀಡಿದ ಶ್ರೀಗಳು, ಯಕ್ಷಗಾನದಲ್ಲಿ ಹಿಮ್ಮೇಳನದಲ್ಲಿ ಭಾಗವತರ ಪಾತ್ರದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಯಕ್ಷಗಾನದಲ್ಲಿ ಭಾಗವತರದ್ದು ಪ್ರಧಾನ ಪಾತ್ರ. ಭಾಗವತಿಕೆ ಸಪ್ಪೆಯಾದರೆ ಆಟ ರುಚಿಸದು ಎಂದ ಅವರು ಪುತ್ತಿಗೆ (ಪೆರ್ಡೂರು ) ಯಲ್ಲಿ ಸಾಹಿತಿಗಳು, ಯಕ್ಷಗಾನ ಕಲಾವಿದರು, ಕವಿಗಳು ಪ್ರಸಿದ್ಧಿ ಪಡೆಯುತ್ತಿರುವುದು ಸಂತೋಷ ತಂದಿದೆ ಎಂದರು.

ಅಭಿನಂದನೆ ಭಾಷಣ ಮಾಡಿದ ಪ್ರಸಿದ್ಧ ಯಕ್ಷಗಾನ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಅವರು ಆಧುನಿಕತೆಯ ನಡುವೆಯೂ ಯಕ್ಷಗಾನಕ್ಕೆ ಸಿಗುತ್ತಿರುವ ಪ್ರೋತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಯಕ್ಷಗಾನ ಪ್ರಸಂಗ ಕರ್ತ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ, ಯಕ್ಷಗಾನದಲ್ಲಿ ಪ್ರಸಂಗಗಳು ಜನ ಮೆಚ್ಚುಗೆ ಪಡೆದರೂ ಅದನ್ನು ರಚಿಸಿದ ಪ್ರಸಂಗ ಕರ್ತಗಳ ಬಗ್ಗೆ ಯಾವುದೇ ಅಭಿಮಾನ ಮಾತುಗಳು ಬರುತ್ತಿಲ್ಲ. ಇಂದು ಯಕ್ಷಗಾನ ಸಾಹಿತಿಗಳ ಅವಗಣನೆ ನಡೆಯುತ್ತಿದೆ. ಆದ್ದರಿಂದ ಯಕ್ಷಲೋಕದ ಸಾಹಿತಿಗಳು ಒಂದಾಗಿ ಈ ಬಗ್ಗೆ ಧ್ವನಿ ಎತ್ತಬೇಕಾಗಿದೆ ಎಂದರು. ಪೆರ್ಡೂರು ಮೇಳದವರಿಂದ ಅಗರಿ ಭಾಸ್ಕರ ರಾವ್ ವಿರಚಿತ ಶ್ರೀದೇವಿ ತ್ರಿಕಣ್ಣೇಶ್ವರಿ ವೈಭವ ಯಕ್ಷಗಾನ ಪ್ರದರ್ಶನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ದೈವಜ್ಞ ಬ್ರಾಹ್ಮಣರ ಸಂಘದ ಅಧ್ಯಕ್ಷ ಕೋಣಿ ವಾಸುದೇವ ಶೇಟ್ ವಹಿಸಿದ್ದರು. ಸಂಘದ ಕಾರ್ಯದರ್ಶಿ ನಾಗೇಶ್ ಶೇಟ್, ಟ್ರಸ್ಟ್‌ನ ಆಡಳಿತ ಮಂಡಳಿಯ ಸದಸ್ಯ ಪಿ.ತೇಜೇಶ್ವರ ರಾವ್, ಯಕ್ಷಗಾನ ವಿಮರ್ಶಕ ಎಸ್.ವಿ.ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು