ದೇವಸ್ಥಾನಗಳ ತಸ್ತೀಕ್ 24 ಸಾವಿರ ರೂ.ಗೆ ಹೆಚ್ಚಳ: ಸಚಿವ ಕೋಟ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಕೋಟ: ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ನೀಡುತ್ತಿದ್ದ ವಾರ್ಷಿಕ 12 ಸಾವಿರ ರೂ. ತಸ್ತೀಕನ್ನು 24 ಸಾವಿರ ರೂ. ಗಳಿಗೆ ಹೆಚ್ಚಿಸಿದ್ದು , ಇದರಿಂದ ಸರಕಾರಕ್ಕೆ 41 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ರಾಜ್ಯ ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಭಾನುವಾರ ಸಾಲಿಗ್ರಾಮದ ವಿಶ್ವಕರ್ಮ ಸಾಂಸ್ಕೃತಿಕ ಸಭಾ ಭವನದಲ್ಲಿ ಕೋಟ ಶ್ರೀವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಸಾಲಿಗ್ರಾಮ ವಿಶ್ವಕರ್ಮ ಕಲಾವೃಂದ, ವಿಶ್ವಜ್ಯೋತಿ ಮಹಿಳಾ ಬಳಗದ ಆಶ್ರಯದಲ್ಲಿ ಜರುಗಿದ ವಿಶ್ವಕರ್ಮ ಯಜ್ಞ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪ್ರತಿಯೊಂದು ಸಮಾಜಕ್ಕೆ ಸಂಘಟನೆ ಅತಿ ಅಗತ್ಯ. ಸಂಘಟನೆ ಮೂಲಕ ಮಾಡುವ ಕೆಲಸದಲ್ಲಿ ಶಕ್ತಿಯಿದೆ. ಸಂಘಟನೆಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದಾಗ ಸುಶಿಕ್ಷಿತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಕೋಟ ಶ್ರೀವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಚೇಂಪಿ ಜನಾರ್ದನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೋಟ ಅಮೃತೇಶ್ವರಿ ದೇವಸ್ಥಾನದ ಅಡಳಿತ ಧರ್ಮದರ್ಶಿ ಆನಂದ ಸಿ. ಕುಂದರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಾಜು ಎನ್. ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು. ಉಡುಪಿ ಕುಂಜಿಬೆಟ್ಟು ಗಾಯತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ರಮಾ ಅಚ್ಯುತ ಆಚಾರ್ಯ ಶುಭಾಶಂಸನೆ ನೀಡಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಜತ ಶಿಲ್ಪಿ ಕೋಟ ಗಣೇಶ ಆಚಾರ್ಯ, ಕಾಷ್ಠ ಶಿಲ್ಪಿ ಪಾಂಡೇಶ್ವರ ಬಾಬುರಾಯ ಆಚಾರ್ಯ, ಲೋಹ ಶಿಲ್ಪಿ ಯಡಬೆಟ್ಟು ರುದ್ರ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಕಾರ್ಕಡ ಗೋಪಾಲಕೃಷ್ಣ ಆಚಾರ್ಯ ಅವರಿಗೆ ವಿದ್ಯಾ ನಿಧಿ ವಿತರಿಸಲಾಯಿತು. ಕೋಟ ಗಾಯತ್ರಿ ಆರ್ಟ್ಸ್‌ನ ಅನಂತಯ್ಯ ಆಚಾರ್ಯರಿಗೆ ಗೌರವ ಸಲ್ಲಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ಕೇಶವ ಆಚಾರ್ಯ ಸಾಸ್ತಾನ, ಕೋಟ ಅಜಿತ್ ಆಚಾರ್ಯ, ಸಾಲಿಗ್ರಾಮ ವೆಂಕಟೇಶ ಆಚಾರ್ಯ, ಶಶಿಕಲಾ ಲಕ್ಷ್ಮಿಕಾಂತ್ ಶರ್ಮಾ, ಪ್ರೇಮಾ ರಮೇಶ ಆಚಾರ್ಯ, ಸರಸ್ವತಿ ಜೆ.ಆಚಾರ್ಯ ಉಪಸ್ಥಿತರಿದ್ದರು.

ಕೋಟ ಚಂದ್ರಶೇಖರ ಆಚಾರ್ಯ ಪ್ರಸ್ತಾವನೆ ನೀಡಿದರು. ವಿಶ್ವಕರ್ಮ ಕಲಾವೃಂದದ ಅಧ್ಯಕ್ಷ ಸುಬ್ರಾಯ ಆಚಾರ್ಯ ಸ್ವಾಗತಿಸಿದರು.ಬಳಿಕ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು