27ರಂದು ಪಣಂಬೂರು ಬೀಚ್‌ನಲ್ಲಿ ಸ್ಕೈಡೈವಿಂಗ್: ಒಂದು ಜಿಗಿತಕ್ಕೆ 25 ಸಾವಿರ ರೂ.!

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಗಳೂರು, ಸೆ.17: ಕರ್ನಾಟಕ ಕರಾವಳಿಯಲ್ಲಿ ಪ್ರಥಮ ಬಾರಿಗೆ ಎಂಬಂತೆ ಸ್ಕೈ ಡೈವಿಂಗ್ ಅವಕಾಶವನ್ನು ಮಂಗಳೂರಿಗರಿಗೆ ಜಿಲ್ಲಾಡಳಿತ ಹಮ್ಮಿಕೊಂಡಿದೆ. ಸೆ.27ರಂದು ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಪಣಂಬೂರು ಸಮುದ್ರ ತೀರದಲ್ಲಿ ಸ್ಕೈಡೈವಿಂಗ್ ನಡೆಯಲಿದೆ. ಅಂದಹಾಗೆ ಭೂಮಿಯಿಂದ ಬರೋಬ್ಬರಿ 4,000 ಅಡಿ ಎತ್ತರದ ಆಕಾಶದಿಂದ ಜಿಗಿಯುವ ಈ ಸ್ಕೈ ಡೈವಿಂಗ್ ಶುಲ್ಕ 25,000 ರೂ.!

ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುವ ಈ ಕಾರ್ಯಕ್ರಮವನ್ನು ದಿಲ್ಲಿಯ ಕಾಕಿಣಿ ಎಂಟರ್‌ಪ್ರೈಸಸ್ ಕಂಪೆನಿ ಹಾಗೂ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಸೆ.27ರಂದು ಪಣಂಬೂರು ಬೀಚ್‌ನಲ್ಲಿ ಸ್ಕೈಡೈವಿಂಗ್ ನಡೆದರೆ, 28 ಮತ್ತು 29ರಂದು ‘ಎರೋಪ್ಲೇನ್ ಜಾಲಿ ರೈಡ್’ ಕೂಡಾ ನಡೆಯಲಿದೆ.

ಸ್ಕೈ ಡೈವಿಂಗ್‌ಗಾಗಿ ಈಗಾಗಲೇ 25 ಮಂದಿ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಒಂದು ಜಂಪ್‌ಗೆ ಪ್ರಸ್ತುತ 25,000 ರೂ. ನಿಗದಿ ಪಡಿಸಲಾಗಿದೆ. ಪ್ರಾಯೋ ಜಕರು ಲಭ್ಯವಾದರೆ ರಿಯಾಯಿತಿ ದೊರೆಯಲಿದೆ. ಸೆ.27ರಂದು ಸುಮಾರು 10 ಮಂದಿಗೆ ಪಣಂಬೂರು ಬೀಚ್‌ನಲ್ಲಿ ಸ್ಕೈಡೈವಿಂಗ್‌ಗೆ ಅವಕಾಶ ದೊರೆಯಲಿದೆ. ಉಳಿದವರಿಗೆ ಮುಂದೆ ಮೈಸೂರಿನಲ್ಲಿ ಅ.1ರಿಂದ 7ರವರೆಗೆ ಆಯೋಜಿಸಲಾಗಿರುವ ಸ್ಕೈ ಡೈವಿಂಗ್‌ನಲ್ಲಿ ಅವಕಾಶ ದೊರೆಯಲಿದೆ.

ಸೆ.28 ಮತ್ತು 29ರಂದು ವಿಮಾನ ಚಲಾಯಿಸುವ ಮೂಲಕ ಮಂಗಳೂರು ನಗರವನ್ನು ಆನಂದಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಜಾಲಿ ರೈಡ್‌ಗೆ 4ರಿಂದ 12 ಸಾವಿರ ರೂ. ಶುಲ್ಕ ನಿಗದಿಪಡಿಸ ಲಾಗಿದೆ’’ ಎಂದು ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ ‘ವಾರ್ತಾಭಾರತಿ’ಗೆ ತಿಳಿಸಿದರು.

ಸ್ಕೈಡೈವಿಂಗ್‌ಗಾಗಿ ಪಣಂಬೂರು ಬೀಚ್‌ನಲ್ಲಿ ಆಕಾಶದಲ್ಲಿ 4,000 ಅಡಿ ಎತ್ತರಿಂದ ಹಾರಾಟಕ್ಕೆ ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಶನ್ (ಡಿಜಿಸಿಎ)ನಿಂದ ಹಾಗೂ ವಿಮಾನ ಹಾರಾಟಕ್ಕೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ಅನುಮತಿ ಪಡೆಯಲಾಗಿದೆ ಎಂದು ಯತೀಶ್ ಬೈಕಂಪಾಡಿ ತಿಳಿಸಿದರು.

ಮಧ್ಯಪ್ರದೇಶದಿಂದ ‘ಜಿಮ್ಸ್ ಏರ್‌ವೇಸ್’ ಎಂಬ ನಾಲ್ಕು ಸೀಟಿನ ವಿಮಾನ ಈ ಕಾರ್ಯಕ್ರಮ ನೆರವೇರಿಸಲಿದೆ. ಈ ವಿಮಾನದಲ್ಲಿ ಪೈಲೆಟ್, ಎಂಜಿನಿಯರ್ಸ್‌, ಸ್ಕೈ ಡೈವಿಂಗ್ ತರಬೇತುದಾರರು ಸೇರಿ ಒಟ್ಟು ಏಳು ಜನರಿರುತ್ತಾರೆ. ಸ್ಕೈ ಡೈವಿಂಗ್‌ಗೆ ಆಯ್ಕೆಯಾದವರಿಗೆ ಸೆ.26ರಂದು ತರಬೇತಿ ನೀಡಲಾಗುತ್ತದೆ. ಬಜ್ಪೆಯಲ್ಲಿ ನಿತ್ಯ ಓಡಾಡುವ ವಿಮಾನಗಳಿಗೆ ತಡೆಯಾಗದಂತೆ ಚಿಮ್ಸ್ ವಿಮಾನ ಓಡಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಆಕಾಶದೆತ್ತರದಿಂದ ವಿಮಾನದ ಮೂಲಕ ವ್ಯಕ್ತಿ ಯನ್ನು ಹಾರಿಬಿಟ್ಟು ಬಳಿಕ ಪ್ಯಾರಚೂಟ್ ಮೂಲಕ ನೀಲ ಆಗಸದಲ್ಲಿ ತೇಲಿಸುವುದೇ ಸ್ಕೈ ಡೈವಿಂಗ್. ಈ ಸಂದರ್ಭ ತರಬೇತಿದಾರರೂ ಜೊತೆಗಿರುತ್ತಾರೆ. ಅಂತೂ, ಮಂಗಳೂರು ಕಡಲ ಕಿನಾರೆಯಲ್ಲಿ ಉಕ್ಕಿನ ಹಕ್ಕಿಗಳ ಮೂಲಕ ಮಾನವನಿಂದ ಸಾಹಸ ವನ್ನು ಅನುಭವಿಸುವ ಮತ್ತು ಮಂಗಳೂರಿಗೆ ಅದನ್ನು ವೀಕ್ಷಿಸುವ ಅವಕಾಶ ದೊರಕಿದೆಯಾದರೂ ಸ್ಕೈ ಡೈವಿಂಗ್ ಮಾಡುವವರ ಗುಂಡಿಗೆ ಗಟ್ಟಿಯಾಗಿರುವ ಜೊತೆಯಲ್ಲೇ ಜೇಬು ಕೂಡಾ ಗಟ್ಟಿಯಾಗಿರಬೇಕು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ