ಜಿನೈಕ್ಯ ಸ್ವಾದಿ ಜೈನ ಶ್ರೀ ಪಂಚಭೂತದಲ್ಲಿ ಲೀನ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಶಿರಸಿ: ಜಿನೈಕ್ಯರಾದ ಉತ್ತರ ಕನ್ನಡದ ಸೋಂದಾ ಸ್ವಾದಿ ಜೈನ ಮಠದ ಶ್ರೀಭಟ್ಟಾ ಅಕಲಂಕ ಗುರು ಭಟ್ಟಾ ಅಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರ ಶರೀರ ಶನಿವಾರ ಪಂಚಭೂತದಲ್ಲಿ ಲೀನಗೊಂಡಿತು.

ಸ್ವಾದಿ ಸಮೀಪದ ಅಕಲಂಕರ ನಿಷಧಿಯಲ್ಲಿ ಧಾರ್ಮಿಕ ವಿಧಿ-ವಿಧಾನ, ಶಿಷ್ಯರ, ಅಭಿಮಾನಿಗಳ ದುಃಖ ಸಾಗರದಲ್ಲಿ ಚಿತೆಗೆ ಬೆಳಗ್ಗೆ 11:03ಗಂಟೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ನಮನ ಸಮರ್ಪಿಸಲಾಯಿತು. ಭಕ್ತರು ಜಯಘೋಷದ ಮೂಲಕ ಭಾವಪೂರ್ಣ ವಿದಾಯ ಸಲ್ಲಿಸಿ ಕೃತಾರ್ಥರಾದರು.

ಕನಕಗಿರಿಯ ಭುವನಕೀರ್ತಿ ಸ್ವಾಮೀಜಿ, ಶಿವಮೊಗ್ಗ ಹೊಂಬುಜದ ದೇವೇಂದ್ರಕೀರ್ತಿ ಸ್ವಾಮೀಜಿಗಳ ಮಾರ್ಗದರ್ಶನಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದವು.

ಹುಬ್ಬಳ್ಳಿ, ಶಿವಮೊಗ್ಗ, ದೆಹಲಿ, ಬೆಂಗಳೂರು, ಕಾರ್ಕಳ, ಶ್ರವಣಬೆಳಗೊಳ, ಮೂಡಬಿದ್ರೆ ಸೇರಿದಂತೆ ಇತರ ಭಾಗದಿಂದ ಆಗಮಿಸಿದ ಜೈನ ಸಮಾಜದವರು ಅಗಲಿದ ಸ್ವಾಮೀಜಿಯ ಅಂತಿಮ ದರ್ಶನ ಪಡೆದರು. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದತ್ತಾ ಡೋರ್ಲೆ, ಜಿಪಂ ಸದಸ್ಯೆ ಶೋಭಾ ನಾಯಕ, ಸೋಂದಾ ಉತ್ಸವ ಸಮಿತಿ ಕಾರ್ಯದರ್ಶಿ ಸದಾನಂದ ಭಟ್ಟ, ಜಾಗೃತ ವೇದಿಕೆ ಕಾರ್ಯಕರ್ತರು ಹಾಗೂ ಇತರರು ಇದ್ದರು.

ಭಕ್ತಿ ಭಾವದ ಸೇವೆ: ಜಿನೈಕ್ಯ ಸ್ವಾಮೀಜಿಗಳ ಎದುರು ಭಕ್ತರು ವಿವಿಧ ಸೇವೆಗಳನ್ನು ಸಲ್ಲಿಸುವ ವಾಗ್ಧಾನ ಮಾಡಿದರು. ಅಗರವಾಲ್‌ ಜೈನ, ಸುರೇಶ ಲೋಂಗಡೆ, ಅಜಯ್‌ ಜೈನ್‌, ನಾಗಕುಮಾರ ಗೌಡ ಹುಬ್ಬಳ್ಳಿ, ಸನತ್‌ ಕುಮಾರ, ಬಬಿತಾ ಪ್ರೇಮಕುಮಾರ, ಅಮಿತ್‌ ಜೈನ್‌ ಸೇರಿದಂತೆ ಕೆಲವು ಭಕ್ತರು ಉತ್ತರ ಕ್ರಿಯೆ ನಡೆದ ಸ್ಥಳದಲ್ಲಿ ಮಂಟಪ ಕಟ್ಟಿ ಕೊಡುವ, ಮಠದ ಅಭಿವೃದ್ಧಿಗೆ ಆರ್ಥಿಕ ದಾನ ನೀಡುವ ಮೂಲಕ ವಾಗ್ಧಾನ ಮಾಡಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ