ನಂದಿನಿಯ ಮೇವು ತಿಂದವರು ಯಾರು?; ತನಿಖೆಗೆ ಆದೇಶ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

 

ಬೆಂಗಳೂರು, ಸೆ.6: ಕರ್ನಾಟಕ ಹಾಲು ಮಾರಾಟ ಮಹಾಮಂಡಳದಲ್ಲಿ ನಡೆದಿದೆ ಎನ್ನಲಾದ ಕಚ್ಚಾ ಸಾಮಗ್ರಿ ಹಾಗೂ ಮೇವು ಖರೀದಿ ಹಗರಣದ ತನಿಖೆಗೆ ಸರಕಾರ ಆದೇಶಿಸಿದೆ ಎಂದು ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.

ಇಂದಿಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಎಂಎಫ್ ಮೂಲಕ ಕಚ್ಚಾ ಸಾಮಗ್ರಿ ಮತ್ತು ಮೇವು ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಮೇಲ್ನೋಟಕ್ಕೆ ಸಾಕಷ್ಟು ಪುರಾವೆಗಳು ಕಂಡುಬಂದಿವೆ. ಇದಕ್ಕೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಮು ಅವರೇ ಕಾರಣ ಎಂಬ ಆರೋಪಗಳಿವೆ.

ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ನಿಯಮ 64ರಡಿ ತನಿಖೆಗೆ ಆದೇಶಿಸಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಕೆಎಂಎಫ್ ಮೂಲಕ ರೈತರಿಗೆ ನೀಡಬೇಕಿರುವ ಬಾಕಿ ಹಣವನ್ನು ಸಂಪೂರ್ಣ ಬಿಡುಗಡೆ ಮಾಡಲಾಗಿದೆ. ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ರೈತರಿಗೆ ಸುಮಾರು 250 ಕೋಟಿ ರೂ ಬಿಡುಗಡೆ ಮಾಡಬೇಕಿದೆ ಎಂದು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಸಂಪೂರ್ಣ ಬಾಕಿ ನೀಡಲಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ರೇವಣ್ಣ ಹುರುಳಿಲ್ಲದ ಆರೋಪಗಳನ್ನು ಮಾಡುವ ಮೂಲಕ ಅನಗತ್ಯ ಗೊಂದಲಗಳನ್ನು ಸಷ್ಟಿಸಲು ಹೊರಟಿದ್ದಾರೆ. ರೈತರಲ್ಲಿ ಸರ್ಕಾರದ ಬಗ್ಗೆ ಅಪನಂಬಿಕೆ ಮೂಡಿಸುವ ಪ್ರಯತ್ನ ನಡೆದಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು.ನಮ್ಮದು ರೈತಪರ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ. ಹೀಗಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಅಥವಾ ಅನಗತ್ಯ ಗೊಂದಲ ಸಷ್ಟಿಸುವ ಇಂತಹವರ ಹೇಳಿಕೆಗೆ ರೈತ ಸಮುದಾಯ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ರೈತರಿಗೆ ಯಾವ ಸೌಲಭ್ಯಗಳು ನೀಡಬೇಕು ಅದು ಅವರ ಮನೆ ಬಾಗಿಲಿಗೇ ತಲುಪುತಿತಿವೆ ಎಂದು ಹೇಳಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೆಎಂಎಫ್ ಭಾರೀ ಲಾಭದಲ್ಲಿತ್ತು. ಇದೀಗ ನಷ್ಟ ಅನುಭವಿಸುತ್ತಿದೆ ಎಂದು ರೇವಣ್ಣ ಆರೋಪ ಮಾಡಿದ್ದಾರೆ. ನಮ್ಮ ಸರ್ಕಾರ ಸಹ ಕೆಎಂಎಫ್‌ನ್ನು ಸದೃಢಗೊಳಿಸಲು ಅಗತ್ಯ ಕ್ರಮ ಕೈಗೊಂಡಿದೆ. ಆದರೂ ವಿರೋಧಕ್ಕಾಗಿ ವಿರೋಧ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಅಭಿವದ್ಧಿ ವಿಚಾರದಲ್ಲಿ ಪ್ರತಿಪಕ್ಷಗಳು ಅನಗತ್ಯ ಆರೋಪ ಮಾಡುವುದು ಬಿಟ್ಟು ಸರ್ಕಾರದ ಜತೆ ಕೈಜೋಡಿಸುವಂತಹ ಮನವಿ ಮಾಡಿದರು.

ಕೆಎಂಎಫ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹಾಲಿನ ಉತ್ಪನ್ನಗಳು ಮಾರಾಟವಾಗದೆ ಉಳಿದಿರುವುದಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ಕೇಂದ್ರ ಹಾಲಿನ ಉತ್ಪನ್ನಗಳ ರಫ್ತು ನಿರ್ಬಂಧಿಸಿ ಆಮದಿಗೆ ಹೆಚ್ಚಿನ ಉತ್ತೇಜನ ನೀಡಿದೆ. ಇದರಿಂದ ಕರ್ನಾಟಕ ಮಾತ್ರವಲ್ಲ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳಿಗೂ ತೊಂದರೆಯಾಗಿ ಹಾಲು ಒಕ್ಕೂಟಗಳು ಸಂಕಷ್ಟದಲ್ಲಿವೆ.

ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕೆಎಂಎಫ್ ಎಲ್ಲಿಯೂ ರಾಜಿಯಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು