ರೌಡಿ ಬೆತ್ತನಗೆರೆ ಸೀನ ಎನ್‌ಕೌಂಟರ್ಗೆ ಬಲಿ; ಸೀನನಿಗೆ ನೆರವು ನೀಡಿದ್ದ ರೌಡಿ ಹನೀಫ್ ( ಹೆಚ್ಚುವರಿ ವರದಿ)

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ರಾಮನಗರ: ಇತ್ತೀಚೆಗೆ ನಡೆದಿದ್ದ `ಬಿಎಂಎಲ್ (ಬಿನ್ನಮಂಗಲ) ಕೃಷ್ಣಪ್ಪ`ನ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಕುಖ್ಯಾತ ರೌಡಿ ಬೆತ್ತನಗೆರೆ ಸೀನ ಅಲಿಯಾಸ್ ಶ್ರೀನಿವಾಸ್ ಶುಕ್ರವಾರ ಮುಂಜಾನೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

ಬೆಂಗಳೂರು ಹೊರ ವಲಯದ ಹೇರೋಹಳ್ಳಿ ಬಳಿಯ ಸಿಂಡಿಕೇಟ್ ಕಾಲೋನಿಯಲ್ಲಿ ಈ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಸಿಡಿಸಿದ ಆರು ಗುಂಡುಗಳ ಪೈಕಿ ನಾಲ್ಕು ಸೀನನ ದೇಹ ಹೊಕ್ಕಿದವು. ಒಂದು ಗುಂಡು ಮೂಗಿನ ಬಲಭಾಗ, ಮತ್ತೊಂದು ಎದೆಯ ಬಳಿ ಹಾಗೂ ಇನ್ನೆರಡು ಗುಂಡು ಹೊಟ್ಟೆ ಭಾಗಕ್ಕೆ ತಾಗಿವೆ. ಅದರಲ್ಲಿ ಎರಡು ಗುಂಡುಗಳು ದೇಹ ಸೀಳಿ ಹೊರಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ತಿಂಗಳಿಂದ ನಿರಂತರ ಶೋಧ ನಡೆಸಿದ್ದ ಪೊಲೀಸರು ಕಡೆಗೂ ಸೀನ ಇರುವ ಪ್ರದೇಶವನ್ನು ಖಚಿತವಾಗಿ ಪತ್ತೆ ಹಚ್ಚಿದರು.

ಘಟನೆ ವಿವರ: ಜುಲೈ 25ರಂದು ಕೃಷ್ಣಪ್ಪ ಕೊಲೆಯಾದ ನಂತರ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಸೀನನ 18 ಸಹಚರರನ್ನು ಆಗಲೇ ಪೊಲೀಸರು ಬಂಧಿಸಿದ್ದರು. ಆದರೆ ಸೀನ, ಹ್ಯಾಡಾಳ್ ಹರ್ಷ, ಬಂಡೆ ಮಂಜ, ಶಶಿ, ಮಂಜುನಾಥ, ಶಿವ ತಲೆಮರೆಸಿಕೊಂಡಿದ್ದರು.

`ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಮಾರ್ಗದರ್ಶನದಲ್ಲಿ ನಂದಗುಡಿ ಸಿಪಿಐ ಸುಬ್ರಹ್ಮಣ್ಯ ನೇತೃತ್ವದ ತಂಡ ಸೀನ ಮತ್ತು ಆತನ ಸಹಚರರ ಚಲನವಲನದ ಮೇಲೆ ತೀವ್ರ ನಿಗಾ ಇಟ್ಟಿತ್ತು. ಮಾಹಿತಿದಾರರ ಖಚಿತ ಮಾಹಿತಿ ಆಧರಿಸಿ ಶುಕ್ರವಾರ ಬೆಳಗಿನ ಜಾವ 5.30ರ ಸುಮಾರಿಗೆ ಸಿಂಡಿಕೇಟ್ ಕಾಲೋನಿಯಲ್ಲಿ ಸೀನ ಇದ್ದ ಮನೆಗೆ ಪೊಲೀಸರ ತಂಡ ದಾಳಿ ನಡೆಸಿತು.

ಶರಣಾಗುವಂತೆ ಪೊಲೀಸರು ಸೀನನಿಗೆ ಹೇಳಿದರೂ ಆತ ಪ್ರತಿ ದಾಳಿ ನಡೆಸಲು ಮುಂದಾದ. ತಪ್ಪಿಸಿಕೊಂಡು ಓಡುವಾಗ ಪೊಲೀಸರತ್ತ ಎರಡು ಬಾರಿ ಗುಂಡು ಹಾರಿಸಿದ. ಆಗ ಆತ್ಮರಕ್ಷಣೆಗೆ ಪೊಲೀಸರು ಪ್ರತಿಗುಂಡು ಹಾರಿಸಬೇಕಾಯಿತು` ಎಂದು ಕೇಂದ್ರ ವಲಯ ಐಜಿಪಿ ಅಮರ್‌ಕುಮಾರ್ ಪಾಂಡೆ ಸುದ್ದಿಗಾರರಿಗೆ ತಿಳಿಸಿದರು.

`ಆತನ ಜೀವ ಇದ್ದಾಗಲೇ ಹೇರೋಹಳ್ಳಿ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಆದರೆ, ಅಲ್ಲಿ ವೈದ್ಯರು ಇರಲಿಲ್ಲ. ನಂತರ ತಾವರೆಕೆರೆ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರಲಾಯಿತು. ಅಲ್ಲಿಯೂ ವೈದ್ಯರು ಇರಲಿಲ್ಲ. ಬಳಿಕ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಅಷ್ಟರಲ್ಲಿ ಬೆತ್ತನಗೆರೆ ಸೀನ ಕೊನೆಯುಸಿರೆಳೆದಿದ್ದ` ಎಂದು ವಿವರಿಸಿದರು.

ನಾಲ್ಕೈದು ದಿನಗಳಿಂದ ವಾಸ: ಸಾಮಾನ್ಯವಾಗಿ ಒಂದು ಕಡೆ ನೆಲೆನಿಲ್ಲದ ಸೀನ ಹಲವು ದಿನದಿಂದ ಹುಲಿಯೂರು ದುರ್ಗ, ಕುಣಿಗಲ್, ಮಾಗಡಿ, ತಾವರೆಕೆರೆ ಸುತ್ತಮುತ್ತ ಸಂಚರಿಸುತ್ತಿದ್ದ. ಇದರಿಂದ ಆತನ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ನಾಲ್ಕೈದು ದಿನಗಳ ಹಿಂದಷ್ಟೆ ಸೀನ, ಸಿಂಡಿಕೇಟ್ ಕಾಲೋನಿಯ ಮನೆಯೊಂದರಲ್ಲಿ ಅಡಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೀನನ ಹತ್ಯೆಯ ನಂತರ ಸ್ಥಳದಲ್ಲಿ ಲೋಡೆಡ್ ರಿವಾಲ್ವರ್, ನಾಲ್ಕು ಲಾಂಗ್‌ಗಳು, ಕಬ್ಬಿಣದ ಸಲಾಕೆ ಸಿಕ್ಕಿವೆ. ಮನೆಯ ಒಂದು ಬ್ಯಾಗ್‌ನಲ್ಲಿ ಬಟ್ಟೆಗಳು ತುಂಬಿವೆ. ಎಲ್‌ಸಿಡಿ ಟಿ.ವಿ ಮತ್ತು ಡಿವಿಡಿ ಕೂಡ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

`ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಸೀನನ ಜತೆ ಆತನ ಮೂವರು ಸಹಚರರೂ ಇದ್ದರು. ಈ ದಾಳಿಯಲ್ಲಿ ಅವರು ತಪ್ಪಿಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಪ್ರಯತ್ನ ನಡೆದಿದೆ. ಸೀನ ಎಷ್ಟು ದಿನದಿಂದ ಈ ಮನೆಯಲ್ಲಿ ವಾಸವಿದ್ದ, ಬಾಡಿಗೆ ಕೊಟ್ಟವರು ಯಾರು. ಇಬ್ಬರ ನಡುವಿನ ಸಂಬಂಧ ಎಂತಹದು ಎಂಬುದರ ಬಗ್ಗೆ ತನಿಖೆ ನಡೆಯಲಿದೆ` ಎಂದು ಅಮರ್‌ಕುಮಾರ್ ಪಾಂಡೆ ತಿಳಿಸಿದರು.

`ಕಾಮಾಕ್ಷಿಪಾಳ್ಯ ನಿವಾಸಿ ಹನುಮಂತರಾಯ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಅವರು ತಮ್ಮ ಅಳಿಯ ಮಂಜುನಾಥ್ ಎಂಬುವರಿಗೆ ಈ ಮನೆಯನ್ನು ಉಡುಗೊರೆಯಾಗಿ ನೀಡಿದ್ದರು. 15 ದಿನದಿಂದ ಈ ಮನೆಗೆ `ಸ್ವಿಫ್ಟ್` ಕಾರೊಂದು ಬಂದು ಹೋಗುತ್ತಿತ್ತು. ನಾಲ್ಕು- ಐದು ದಿನದಿಂದ ಮಾರುತಿ ಓಮ್ನಿ ಕಾರು ಬಂದು ಹೋಗುತ್ತಿತ್ತು. ಮನೆಯಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗುತ್ತಿರಲಿಲ್ಲ. ಪೊಲೀಸರ ಕಾರ್ಯಾಚರಣೆ ನಂತರವೇ ಇಲ್ಲಿ ರೌಡಿ ಬೆತ್ತನಗೆರೆ ಸೀನ ಇದ್ದನೆಂಬುದು ಗೊತ್ತಾಯಿತು` ಎಂದು ಸ್ಥಳೀಯರು ಪ್ರತಿಕ್ರಿಯಿಸಿದರು.

ಮಾಗಡಿ ಆಸ್ಪತ್ರೆಗೆ ಶವ: ಮಾಗಡಿ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಬೆಳಿಗ್ಗೆ 6.30ಕ್ಕೆ ಶವವನ್ನು ಇಡಲಾಯಿತು. ವೈದ್ಯರು ಶವಪರೀಕ್ಷೆ ನಡೆಸಲು ಸೂಕ್ತ ವ್ಯವಸ್ಥೆ ಹಾಗೂ ವಿಡಿಯೋ ಚಿತ್ರೀಕರಣ ಸೌಕರ್ಯ ಇಲ್ಲವೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲು ಸಲಹೆ ಮಾಡಿದರು. ಸಂಜೆ 4 ಗಂಟೆ ತನಕ ಶವ ಮಾಗಡಿ ಆಸ್ಪತ್ರೆಯಲ್ಲಿಯೇ ಇತ್ತು.

ಅನಾಥವಾದ ಶವ: ಬೆತ್ತನಗೆರೆ ಸೀನ ಗುಂಡಿನ ದಾಳಿಯಲ್ಲಿ ಮೃತಪಟ್ಟ ವಿಚಾರ ಗೊತ್ತಾಗಿದ್ದರೂ ಆತನ ಶವ ನೋಡಲು ಸಹಚರರು, ಸಂಬಂಧಿಕರಲ್ಲಿ ಯಾರೊಬ್ಬರೂ ಮಾಗಡಿ ಆಸ್ಪತ್ರೆಯ ಬಳಿ ಸುಳಿಯಲಿಲ್ಲ. ಶವದ ಕಾವಲಿಗೆ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಸಂಜೆ 4 ಗಂಟೆಯಾದರೂ ಸಂಬಂಧಿಕರು ಆಗಮಿಸದ ಹಿನ್ನೆಲೆಯಲ್ಲಿ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಯಿತು.

ಮಾಗಡಿ ಆಸ್ಪತ್ರೆಯಲ್ಲಿದ್ದ ಶವವನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ರವೀಂದ್ರ ನೇತೃತ್ವದ ತಂಡ ಪರಿಶೀಲಿಸಿತು. ದಾಳಿ ನಡೆಸಿದ ತಂಡದಲ್ಲಿ ನೆಲಮಂಗಲ ಠಾಣೆ ಇನ್‌ಸ್ಪೆಕ್ಟರ್ ಪ್ರಕಾಶ್, ಸರ್ಜಾಪುರ ಠಾಣೆ ಎಸ್‌ಐ ಪ್ರಕಾಶ್, ವೈ.ಎನ್.ಹೊಸಕೋಟೆ ಠಾಣೆ ಹರೀಶ್ ಹಾಗೂ ಮಂಚೇನಹಳ್ಳಿ ಠಾಣೆ ಎಸ್‌ಐ ಸುಂದರ್ ಇದ್ದರು.

ಸೀನನಿಗೆ ನೆರವು ನೀಡಿದ್ದ ರೌಡಿ ಹನೀಫ್

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ ವಿರೋಧ ಪಕ್ಷದ ನಾಯಕ, ಜೆಡಿಎಸ್ ಸದಸ್ಯ ಬಿನ್ನಮಂಗಲ ಕೃಷ್ಣಪ್ಪ ಅವರ ಹತ್ಯೆಗೆ ಬೆತ್ತನಗೆರೆ ಸೀನನಿಗೆ ಕುಖ್ಯಾತ ರೌಡಿ ಹನೀಫ್ ಕಮ್ಮರಡಿ ಕೈಜೋಡಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

`ಕೃಷ್ಣಪ್ಪನ ಹತ್ಯೆಗಾಗಿ ಸೀನ, ಶೃಂಗೇರಿಯ ಹನೀಫ್‌ನ ನೆರವು ಕೋರಿದ್ದ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ ಹನೀಫ್, ತನ್ನ ಸಹೋದರ ಹಮ್ಜಾನ ಮೂಲಕ ಕೃಷ್ಣಪ್ಪನ ಹತ್ಯೆಗೆ ಏಳೆಂಟು ಹುಡುಗರನ್ನು ಪೂರೈಸಿದ್ದ. ಜುಲೈ 25ರಂದು ಕೃಷ್ಣಪ್ಪ ಅವರ ಮೇಲೆ ನಡೆದ ದಾಳಿ ವೇಳೆ ಸೀನನ ತಂಡದಲ್ಲಿದ್ದ ಸುನಿಲ್, ಅಝುಗರ್, ಪ್ರಶಾಂತ್‌ಗೌಡ ತೀರ್ಥಹಳ್ಳಿಯವರಾಗಿದ್ದು, ಅವರು ಹನೀಫ್‌ನ ಆಪ್ತ ಸಹಚರರು` ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

`2003ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷರಾಗಿದ್ದ ವೆಂಕಟೇಶ್ ಹೊಸವಳ್ಳಿ ಅವರನ್ನು ಹತ್ಯೆ ಮಾಡಿದ್ದ ಹನೀಫ್‌ಗೆ ನವುಲೆ ಆನಂದ, ಹೆಬ್ಬಟ್ಟು ಮಂಜ, ಸಾದಿಕ್ ಸೇರಿದಂತೆ ಹಲವು ಕುಖ್ಯಾತ ರೌಡಿಗಳು ಸಹಚರರಾದರು. ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಹನೀಫ್ ವಿರುದ್ಧ ಸುಮಾರು ಏಳು ಪ್ರಕರಣಗಳು ದಾಖಲಾಗಿವೆ.

ಈತನ ಸಹೋದರರಾದ ಅಬುಬ್ಕರ್ ಕೂಡ ವೆಂಕಟೇಶ್ ಹೊಸವಳ್ಳಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಗಂಧದ ಮರ ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಹಮ್ಜಾ, ಶಿವಮೊಗ್ಗ ಜೈಲಿನಲ್ಲಿದ್ದುಕೊಂಡೆ ಕೃಷ್ಣಪ್ಪನ ಹತ್ಯೆಗೆ ಸೀನನಿಗೆ ಹುಡುಗರನ್ನು ಪೂರೈಸಿದ್ದ` ಎಂದು ಪೊಲೀಸರು ತಿಳಿಸಿದ್ದಾರೆ.

`ಕೃಷ್ಣಪ್ಪನ ಹತ್ಯೆಗೆ ನೆರವು ನೀಡಿರುವ ಆರೋಪವನ್ನು ಹನೀಫ್ ಅಲ್ಲೆಗೆಳೆದಿದ್ದಾನೆ. ಆದರೆ, ಸೀನ ಹನೀಫ್‌ಗೆ ಮೂರು ಬಾರಿ ಕರೆ ಮಾಡಿ ನೆರವು ಕೋರಿರುವ ದಾಖಲೆಗಳಿವೆ. ಸೀನನಿಗೆ ಹನೀಫ್‌ನೇ ಪಿಸ್ತೂಲ್ ಪೂರೈಕೆ ಮಾಡಿದ್ದನು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಹಮ್ಜಾನನ್ನು ವಿಚಾರಣೆಗೆ ಒಳಪಡಿಸಲಾಗುವುದು` ಎಂದು ಪೊಲೀಸರು ಮಾಹಿತಿ ನೀಡಿದರು.

ಹನೀಫ್-ಸೀನ ಆಪ್ತರಾಗಿದ್ದು ಹೇಗೆ?
ಕೊಲೆ ಪ್ರಕರಣ ಸಂಬಂಧ ಧಾರವಾಡ ಜೈಲಿನಲ್ಲಿರುವ ಬೆತ್ತನಗೆರೆ ಶಂಕರನಿಗೂ ಹಾಗೂ ಹನೀಫ್‌ಗೂ ವರ್ಷದ ಹಿಂದೆ ಜೈಲಿನಲ್ಲೇ ಜಗಳವಾಗಿತ್ತು. ಇದರಿಂದ ಪರಸ್ಪರರಲ್ಲಿ ವೈರತ್ವ ಹುಟ್ಟಿಕೊಂಡಿತ್ತು. ಈ ವಿಷಯ ತಿಳಿದ ಸೀನ, ತನ್ನ ಚಿಕ್ಕಮ್ಮನ ಮಗನಾದ ಶಂಕರನನ್ನು ಜೈಲಿನಲ್ಲೇ ಕೊಲೆ ಮಾಡಲು ಹನೀಫ್‌ಗೆ ತಿಳಿಸಿದ್ದ. ಹೀಗೆ ಸೀನ ಮತ್ತು ಹನೀಫ್ ಆಪ್ತರಾಗಿದ್ದರು. ಕೃಷ್ಣಪ್ಪ ಅವರ ಹತ್ಯೆಯ ನಂತರ ಸೀನ ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರು ಭಾಗಗಳಲ್ಲಿ ತಲೆಮರೆಸಿಕೊಂಡಿದ್ದನು. ಆ ಪ್ರದೇಶಗಳಲ್ಲಿರುವ ಹನೀಫ್‌ನ ಸಹಚರರು ಸೀನನಿಗೆ ಆಶ್ರಯ ನೀಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಹನೀಫ್ ತನ್ನ ಸಹಚರ ಸುನಿಲ್‌ನ ಸಹಾಯದಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾಗಿದ್ದ. ಸೀನನ ಮಾರ್ಗದರ್ಶನದಂತೆ ಗೋವಾಕ್ಕೆ ಹೊರಟಿದ್ದ ಹನೀಫ್‌ನನ್ನು ಆಗಸ್ಟ್ 17 ರಂದು ಬಂಟ್ವಾಳ ಪೊಲೀಸರು ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಭೂವಿವಾದ ಸೇರಿದಂತೆ ಬಿಎಂಎಲ್ ಕೃಷ್ಣಪ್ಪನ ವಿರುದ್ಧವೂ ಎಂಟು ಪ್ರಕರಣಗಳು ದಾಖಲಾಗಿದ್ದವು. ಆದರೆ, ಶಂಕರನಿಗೆ ಹಣಕಾಸಿನ ನೆರವು ನೀಡುತ್ತಿದ್ದರಿಂದ ಕೃಷ್ಣಪ್ಪನ ಮೇಲೆ ಸೀನನಿಗೆ ದ್ವೇಷ ಹುಟ್ಟಿತ್ತು. `ಶಂಕರನಿಗೆ ನೆರವು ನೀಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಅವರು ಕೇಳಲಿಲ್ಲ. ಆದ್ದರಿಂದ ಕೊಲೆ ಮಾಡಿದ್ದೇನೆ` ಎಂದು ಸೀನ ತನ್ನ ಸಹಚರನ ಮೂಲಕ ಕೃಷ್ಣಪ್ಪನ ಕುಟುಂಬಕ್ಕೆ ವಿಷಯ ತಿಳಿಸಿದ್ದನು.

ಲುಕ್‌ಔಟ್ ನೋಟಿಸ್: ಕೃಷ್ಣಪ್ಪನ ಹತ್ಯೆ ನಂತರ ತಲೆಮರೆಸಿಕೊಂಡಿದ್ದ ಸೀನನಿಗಾಗಿ ಶೋಧ ನಡೆಸಿ ವಿಫಲರಾಗಿದ್ದ ಪೊಲೀಸರು, ಸೀನನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು. ನೆಲಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಆತನ ಭಾವಚಿತ್ರ ಮತ್ತು ಭಿತ್ತಿಪತ್ರಗಳನ್ನು ಅಂಟಿಸಿ, ಆತನ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಹೇಳಿದ್ದರು.

ಸೀನನ ಅಪರಾಧ ಹಿನ್ನೆಲೆ…

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬದುಕು ನಡೆಸುತ್ತಿದ್ದ ಶ್ರೀನಿವಾಸ್ ಅಲಿಯಾಸ್ ಬೆತ್ತನಗೆರೆ ಸೀನ 2001ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವ ಮೂಲಕ ಅಪರಾಧ ಜಗತ್ತಿಗೆ ಕಾಲಿಟ್ಟನು ಎಂದು ಪೊಲೀಸರು ತಿಳಿಸಿದ್ದಾರೆ.

2004ರಲ್ಲಿ ಸೀನನ ತಂದೆ ಹನುಮಂತಯ್ಯ ಬೆತ್ತನಗೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದರು. ಬಾಳೆಕಾಯಿ ಮಂಡಿ ಬಸವರಾಜು ಎಂಬುವರು ಅವರಿಗೆ ಪ್ರತಿಸ್ಪರ್ಧಿಯಾಗಿದ್ದರು. ಚುನಾವಣೆಯಿಂದ ಹಿಂದೆ ಸರಿಯುವಂತೆ ಸೀನ, ಬಸವರಾಜು ಅವರಿಗೆ ಬೆದರಿಕೆ ಹಾಕಿದ್ದ. ಇದಕ್ಕೆ ಒಪ್ಪದ ಕಾರಣ ಸೀನ ಮತ್ತು ಆತನ ಚಿಕ್ಕಮ್ಮನ ಮಗ ಶಂಕರ ಬಸವರಾಜು ಅವರನ್ನು ಕೊಲೆ ಮಾಡಿದ್ದರು.
ನಂತರ ಕೊಲೆ ಪ್ರಕರಣದ ಸಾಕ್ಷಿಗಳಾದ ಕೃಷ್ಣಮೂರ್ತಿ, ವಕೀಲ ದೇವರಾಜ್, ಅವರ ತಂದೆ ಬೈಲಪ್ಪ ಅವರನ್ನು 2005ರಲ್ಲಿ ಕೊಲೆ ಮಾಡಿದ ಸೀನ, ಕುಖ್ಯಾತ ರೌಡಿಯಾಗಿ ಗುರುತಿಸಿಕೊಂಡಿದ್ದ. ಈ ವೇಳೆ ಸೀನ ಮತ್ತು ಶಂಕರನ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪ ಉಂಟಾಗಿ ಪರಸ್ಪರರು ವೈರಿಗಳಾದರು.

ನಂತರ ಶಂಕರನಿಗೆ ಕೃಷ್ಣಪ್ಪ ಬೆಂಬಲಿಗನಾಗಿ ನಿಂತಿದ್ದು ಸೀನನನ್ನು ಕೆರಳಿಸಿತ್ತು.ಈ ಮಧ್ಯೆ ಸೀನ ಜೈಲಿನಲ್ಲಿದ್ದುಕೊಂಡೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಅವಿರೋಧ ಆಯ್ಕೆಯಾಗಿದ. ಈ ಬೆಳವಣಿಗೆ ಕೃಷ್ಣಪ್ಪ ಮತ್ತು ಶಂಕರನ ಆಕ್ರೋಶಕ್ಕೆ ಕಾರಣವಾಗಿತ್ತು. ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಸೀನ ಪ್ರಗತಿ ಸಾಧಿಸಿದ್ದರಿಂದ ಆತನ ಹತ್ಯೆಗೆ ಶಂಕರ ಸಂಚು ರೂಪಿಸಿದ್ದ. ಮೊದಲು ಸೀನನ ಸ್ನೇಹಿತನಾದ ರವಿ ಎಂಬಾತನನ್ನು ಕೊಲೆ ಮಾಡಿದ ಶಂಕರ, ನಂತರ ಸೀನನ ಭಾವ ದೇವೆಂದ್ರಪ್ಪ ಅಲಿಯಾಸ್ ಯಾಡಾಳ್ ದೇವಿ ಅವರನ್ನು ಹತ್ಯೆ ಮಾಡಿದನು.

ಶಂಕರನ ಈ ವರ್ತನೆಯಿಂದ ಕೋಪಗೊಂಡ ಸೀನ, ಆತನ ಸಹಚರನಾದ ಲೋಹಿತ್‌ಗೌಡ ಎಂಬುವರನ್ನು 2009ರಲ್ಲಿ ನಗರದ ಪರಪ್ಪನ ಅಗ್ರಹಾರದ ಬಳಿ ಕೊಲೆ ಮಾಡಿದ್ದ. ಅಲ್ಲದೇ, ಧಾರಾವಾಡ ಜೈಲಿನಲ್ಲಿರುವ ಶಂಕರನ ಹತ್ಯೆಗೂ ಹಲವು ಬಾರಿ ಯತ್ನಿಸಿ ವಿಫಲನಾಗಿದ್ದ.

ಬಿಎಂಎಲ್ ಕೃಷ್ಣಪ್ಪ ಅವರನ್ನು ಕೊಲೆಗೆ ಎರಡು ಬಾರಿ ಯತ್ನಿಸಿ ವಿಫಲನಾಗಿದ್ದ ಸೀನ, ವ್ಯವಸ್ಥಿತ ಯೋಜನೆ ರೂಪಿಸಿ 2012ರ ಜು.25ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೃಷ್ಣಪ್ಪ ಅವರನ್ನು ಕೊಲೆ ಮಾಡಿದ್ದ. ಹೀಗೆ ಸೀನನ ವಿರುದ್ಧ ಪರಪ್ಪನ ಅಗ್ರಹಾರ, ನೆಲಮಂಗಲ ಸೇರಿದಂತೆ ವಿವಿಧ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ, ಕೊಲೆ ಯತ್ನ, ದರೋಡೆ, ದೌರ್ಜನ್ಯ, ಡಕಾಯತಿ ಮತ್ತು  ಶಸ್ತ್ರಾಸ್ತ್ರ ಕಾಯ್ದೆಯಡಿ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದರು

ಹಿಂದಿನ ವರದಿ:

ಬೆಂಗಳೂರಲ್ಲಿ ಎನ್‌ಕೌಂಟರ್: ಬೆಮೆಲ್ ಕೃಷ್ಣಪ್ಪ ಹತ್ಯೆಯ ರೂವಾರಿ ಬೆತ್ತನಗೆರೆ ಸೀನ ಬಲಿ(clk)

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ