ನಿತ್ಯಾನಂದನ ಮಾಜಿ ಭಕ್ತೆ ಆರತಿರಾವ್‌ಗೆ ಜಾಮೀನು

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ರಾಮನಗರ: ಅಶ್ಲೀಲ ವಿಡಿಯೊ ಸಿದ್ಧಪಡಿಸುವ ಮೂಲಕ ತನ್ನ ತೇಜೋವಧೆಗೆ ಯತ್ನಿಸಿದ್ದರು ಎಂದು ಆರೋಪಿಸಿ ನಟಿ ರಂಜಿತಾ, ರಾಮನಗರದ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆಗೆ ನಿತ್ಯಾನಂದ ಸ್ವಾಮೀಜಿಯ ಮಾಜಿ ಭಕ್ತೆ ಆರತಿರಾವ್ ಇಲ್ಲಿನ ಜೆ‌ಎಂಎಫ್‌ಸಿ ನ್ಯಾಯಾಲಯಕ್ಕೆ ಶುಕ್ರವಾರ ಖುದ್ದು ಹಾಜರಾದರು.

ಅವರಿಗೆ ನ್ಯಾಯಾಧೀಶರಾದ ಕೆ.ಎನ್.ರೂಪಾ ಅವರು ಜಾಮೀನು ಮಂಜೂರು ಮಾಡಿದರು.
ತಂದೆ ಹಾಗೂ ವಕೀಲರೊಂದಿಗೆ ಆರತಿ ರಾವ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಮನೆಯ ಪತ್ರಗಳನ್ನು ಶ್ಯೂರಿಟಿ ಇಟ್ಟು ಅವರು ಜಾಮೀನು ಪಡೆದರು.

`ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯ ರಾಸಲೀಲೆಗೆ ಸಂಬಂಧಿಸಿದಂತೆ ನಕಲಿ ಸಿ.ಡಿ ಸಿದ್ಧಪಡಿಸಿ, ಅದರಲ್ಲಿ ನನ್ನ ಚಿತ್ರಗಳು ಬರುವಂತೆ ಸ್ವಾಮೀಜಿಯ ಹಿಂದಿನ ಕಾರು ಚಾಲಕ ಲೆನಿನ್ ಕುರುಪ್ಪನ್ ಕೃತ್ಯ ಎಸಗಿದ್ದಾನೆ. ಈ ಕಾರ್ಯದಲ್ಲಿ ಲೆನಿನ್‌ಗೆ ಆರತಿರಾವ್ ಸಹಕಾರ ನೀಡಿ ನನ್ನ ತೇಜೋವಧೆಗೆ ಸಹಕರಿಸಿದ್ದಾರೆ` ಎಂದು ಆರೋಪಿಸಿ ರಂಜಿತ ದೂರು ದಾಖಲಿಸಿದ್ದರು.

`ಅಲ್ಲದೆ ಲೆನಿನ್ ನನ್ನ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ ಆರತಿರಾವ್ ಆತನಿಗೆ ಸಹಕಾರ ನೀಡಿದ್ದರು` ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಆರತಿರಾವ್ ಎರಡನೇ ಆರೋಪಿಯಾಗಿದ್ದಾರೆ.

ಈ ದಾವೆಯ ವಿಚಾರಣೆ ಸಂಬಂಧ ನ್ಯಾಯಾಲಯದಲ್ಲಿ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಸಹ ಆರತಿರಾವ್ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಲಯ ಅವರ ಬಂಧನಕ್ಕೆ `ವಾರೆಂಟ್` ಹೊರಡಿಸಿತ್ತು. ಆಗಸ್ಟ್ 28ರಂದು ಆರತಿರಾವ್  ಮನವಿ ಪುರಸ್ಕರಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ರುದ್ರಮುನಿ ಅವರು ನಿರೀಕ್ಷಣಾ ಜಾಮೀನು ನೀಡಿದ್ದರು.  ವಿಚಾರಣೆಯನ್ನು ಸೆಪ್ಟಂಬರ್ 29ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಜಾಮೀನು ದೊರೆತ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರತಿರಾವ್, `ಸತ್ಯ ಯಾವತ್ತಿದ್ದರೂ ಹೊರಗೆ ಬರುತ್ತದೆ. ನನಗೆ ನ್ಯಾಯಾಲಯದಲ್ಲಿ ನಂಬಿಕೆಯಿದೆ. ಈ ಪ್ರಕರಣವೆಲ್ಲಾ ಮುಗಿದ ಮೇಲೆ ಅದರ ಬಗ್ಗೆ ಮಾತನಾಡುತ್ತೇನೆ. ರಂಜಿತಾ ಅವರು ನೀಡಿರುವ ದೂರಿನಲ್ಲಿ ಯಾವುದೇ ಸತ್ಯವಿಲ್ಲ` ಎಂದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ