ರೈಲ್ವೇ: ಇನ್ನಷ್ಟು ದರ ಏರಿಕೆ ಸೂಚನೆ: ಮತ್ತಷ್ಟು ಕಠಿಣ ನಿರ್ಧಾರ: ಡಿ.ವಿ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (2) ಸಮ್ಮತ (0) ಅಸಮ್ಮತ (0) ಖಂಡನೆ (10) ಅಭಿಪ್ರಾಯವಿಲ್ಲ (0)

CM at ohiti session with MLCs_June 30_2014_011

ಬೆಂಗಳೂರು, ಜೂ.30: ರೈಲ್ವೆ ಇಲಾಖೆಯ ಆರೋಗ್ಯದ ಹಿತದೃಷ್ಟಿಯಿಂದ ಮತ್ತಷ್ಟು ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಇಂದಿಲ್ಲಿ ಹೇಳುವ ಮೂಲಕ ಮತ್ತಷ್ಟು ದರ ಏರಿಕೆ ಮಾಡುವ ಸುಳಿವು ನೀಡಿದ್ದಾರೆ. ಮೇಲ್ಮನೆ ಸದಸ್ಯರಾಗಿ ನಿವೃತ್ತಿಗೊಂಡಿರುವ ಸದಾನಂದಗೌಡ ಗೌಡ, ವಿಧಾನ ಪರಿಷತ್ ಸದಸ್ಯರ ಜತೆ ಛಾಯಾ ಚಿತ್ರ ತೆಗೆಸಿ ಕೊಂಡ ಆನಂತರ ಸುದ್ದಿಗಾರರ ಜತೆ ಮಾತನಾಡಿ, ರೈಲ್ವೆಯಲ್ಲಿ ಬರುವ ಆದಾಯದಲ್ಲಿ ಶೇ. 92ರಷ್ಟು ಆಡಳಿತ ವ್ಯವಸ್ಥೆಗೆ ಬಳಕೆಯಾ ಗುತ್ತಿದೆ. ಉಳಿದ ಹಣದಲ್ಲಿ ರೈಲ್ವೆ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಕಠಿಣ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.

ಯುಪಿಎ ಸರಕಾರದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿ ಸಲು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾ ರ್ಯವಾಗಿದೆ. ದೇಶದ ಜನತೆಗೆ ಮುಂದೆ ಒಳ್ಳೆಯ ದಿನಗಳು ಖಂಡಿತ ಬರಲಿವೆ. ಹಿಂದಿನ ಸರಕಾರ ಹಲವಾರು ವಿಚಾರಗಳಲ್ಲಿ ಎಸಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಆಡಳಿತ ನಡೆಸ ಬೇಕಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.

ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಜನರ ಬೇಡಿಕೆ ಹಾಗೂ ನಿರೀಕ್ಷೆಗೆ ಅನುಗುಣವಾಗಿ ಬಜೆಟ್ ಮಂಡಿಸಲು ಸಾಕಷ್ಟು ಕಸರತ್ತು ಮಾಡಿದ್ದೇನೆ. ಇಲಾಖೆಯ ಸುಧಾರಣೆ ಹಾಗೂ ಜನರ ನಿರೀಕ್ಷೆ ಹುಸಿಯಾಗದಂತೆ ಉತ್ತಮ ರೈಲ್ವೆ ಬಜೆಟ್ ಮಂಡಿಸಲು ಅಗತ್ಯ ಸಿದ್ಧತೆ ನಡೆಸಿರುವೆನೆಂದು ಡಿ.ವಿ. ತಿಳಿಸಿದರು.

CM at ohiti session with MLCs_June 30_2014_014

CM at ohiti session with MLCs_June 30_2014_013

CM at ohiti session with MLCs_June 30_2014_012

ಈಗಾಗಲೇ ಪ್ರಯಾಣ ದರದಲ್ಲಿ ಸಾಕಷ್ಟು ಕಡಿತಗೊಳಿಸಲಾಗಿದೆ. ಮಾಸಿಕ ಪಾಸ್ ಹಾಗೂ ಎರಡನೆ ದರ್ಜೆ ಪ್ರಯಾಣದರದಲ್ಲಿ ಸಾಕಷ್ಟು ವಿನಾಯಿತಿ ನೀಡಲಾಗಿದೆ. ಇಲಾಖೆಯ ಹಿತದೃಷ್ಟಿಯಿಂದ ದರ ಏರಿಕೆ ಅನಿವಾರ್ಯ. ಇದಕ್ಕೆ ಪ್ರಯಾಣಿಕರು ಸಹಕರಿಸುವಂತೆ ಅವರು ಮನವಿ ಮಾಡಿದರು.

ಪ್ರಯಾಣಿಕರಿಗೆ ರೈಲ್ವೆಯಲ್ಲಿ ಸುರಕ್ಷತೆ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸುರಕ್ಷಿತ ಪ್ರಯಾಣ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ದರ ಹೆಚ್ಚಳ ಅನಿವಾರ್ಯವಾಗಿತ್ತು ಎಂದು ಸದಾನಂದಗೌಡ ಹೇಳಿದರು.

ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾಗಿದ್ದಾಗಲೇ ದರ ಏರಿಕೆ ಆದೇಶ ಹೊರಡಿಸಿದ್ದರು. ಚುನಾವಣೆ ಘೋಷಣೆಯಾಗಿದ್ದ ಕಾರಣ ಅದನ್ನು ತಡೆ ಹಿಡಿಯಲಾಗಿತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ ಅದನ್ನು ಜಾರಿಗೊಳಿಸಿದ್ದೇವೆ. ಆದರೆ ಪ್ರತಿಪಕ್ಷಗಳು ರಾಜಕೀಯಕ್ಕಾಗಿ ಸರಕಾರದ ವಿರುದ್ಧ ಆರೋಪ ಮಾಡುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ಹಲವು ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆಯ ನೇಮಕಾತಿ ಪರೀಕ್ಷೆಗಳನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದೆ ಅರ್ಹರಿಗೆ ಮಾತ್ರ ಅವಕಾಶ ಕಲ್ಪಿಸಲು ಎಲ್ಲ ಕಠಿಣ ನಿರ್ಧಾರಗಳನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (2) ಸಮ್ಮತ (0) ಅಸಮ್ಮತ (0) ಖಂಡನೆ (10) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ