ಬೆಂಗಳೂರಿನಲ್ಲಿ ಡಿಸೆಂಬರ್‌ 7ರಿಂದ ಸಾಹಿತ್ಯ ಹಬ್ಬ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಡಿಸೆಂಬರ್ ಏಳರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಸಾಹಿತ್ಯ ಹಬ್ಬ ಜರುಗಲಿದೆ. ದೇಶ ವಿದೇಶಗಳ ಲೇಖಕರು ಭಾಗವಹಿಸಲಿದ್ದಾರೆ. ಸಾಹಿತ್ಯಿಕ ವಿಚಾರ ಗೋಷ್ಠಿಗಳು ಹಾಗೂ ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ವಿಕ್ರಂ ಸಂಪತ್, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬರೆಯುತ್ತಿರುವ ಜನಪ್ರಿಯ ಲೇಖಕರು ಸಾಹಿತ್ಯ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ಯುವ ಲೇಖಕರಿಗೆ ಸ್ಫೂರ್ತಿ ಸಿಗಬೇಕು ಎಂಬುದು ಹಬ್ಬದ ಉದ್ದೇಶವಾಗಿದೆ. ಸಾಹಿತ್ಯ ಹಬ್ಬವನ್ನು ಇಲ್ಲಿ ಆಯೋಜಿಸುವ ಮೂಲಕ ನಮ್ಮ ನೆಲದ ಸಾಂಸ್ಕೃತಿಕ ಸಿರಿಯನ್ನು ಸಾಹಿತ್ಯ ಪ್ರಿಯರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳುವವರಿಗೆ ಪ್ರವೇಶ ಉಚಿತ. ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗೋಷ್ಠಿಗಳ ಜತೆಗೆ ಮೂರು ದಿನಗಳೂ ಸಂಜೆ ಹೊತ್ತಿಗೆ ಕರ್ನಾಟಕ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸಾಹಿತ್ಯ ಹಬ್ಬದ ಸಲಹೆಗಾರರಾಗಿರುವ ಹಿರಿಯ ಸಾಹಿತಿ ಶಶಿ ದೇಶಪಾಂಡೆ ”ಜಗತ್ತಿನ ಸಾಹಿತಿಗಳ ಜತೆಗೆ ನಮ್ಮ ಸ್ಥಳೀಯ ಸಾಹಿತಿಗಳ ಮುಖಾಮುಖಿ ಇಲ್ಲಾಗಲಿದೆ. ಇದು ಮುಂದಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಲು ಸಹಕಾರಿಯಾಗಲಿದೆ. ಪರಸ್ಪರ ವಿಚಾರ ವಿನಿಮಯಕ್ಕೆ ಇದು ವೇದಿಕೆಯಾಗಲಿ ಎಂಬುದು ಆಯೋಜಕರ ಅಭಿಲಾಷೆಯಾಗಿದೆ,” ಎಂದರು.

ಸಾಹಿತ್ಯ ಹಬ್ಬದಿಂದ ಮೊದಲುಗೊಂಡು ಡಿಸೆಂಬರ್ ತಿಂಗಳಿಡೀ ಸಾಹಿತ್ಯದ ಕುರಿತು ನಾನಾ ಬಗೆಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಯುವ ಸಾಹಿತಿ ಶೈನಿ ಆಂಥೋನಿ ಹೇಳಿದರು.

ಏನಿದು ‘ಸಾಹಿತ್ಯದ ಹಬ್ಬ’?

ಯಾವಾಗ?: ಡಿಸೆಂಬರ್ 7, 8 ಮತ್ತು 9

ಎಲ್ಲಿ?: ಜಯಮಹಲ್ ಪ್ಯಾಲೇಸ್

ಯಾರ‌್ಯಾರು ಬರಲಿದ್ದಾರೆ?: ರಸ್ಕಿನ್ ಬಾಂಡ್, ನಿಸಾರ್ ಅಹಮದ್, ಮಾರ್ಕ್ ಟ್ಯುಲಿ, ಪವನ್ ವರ್ಮಾ, ಯು. ಆರ್. ಅನಂತಮೂರ್ತಿ, ಶಶಿ ತರೂರು, ಮಹೇಶ್, ದತ್ತಾನಿ, ಅಮಿಶ್ ತ್ರಿಪಾಠಿ, ಮಜೀದ್ ನವಾಝ್, ಜಯಂತ್ ಕಾಯ್ಕಿಣಿ, ಅನಿತಾ ನಯ್ಯರ್, ಎಸ್.ಎಲ್.ಭೈರಪ್ಪ, ಜಾವೇದ್ ಅಕ್ತರ್, ಗುಲ್ಝಾರ್, ಚೇತನ್ ಭಗತ್ ಮತ್ತಿತರರು.

ಏನೇನಿರುತ್ತೆ?: ಸಾಹಿತ್ಯಿಕ ಗೋಷ್ಠಿಗಳ ಜತೆಗೆ ಜಯಂತಿ ಕುಮಾರೇಶ್ ಸಂಗಡಿಗರಿಂದ ಕರ್ನಾಟಕ ಸಂಗೀತ, ಕೆರೆಮನೆ ಶಿವಾನಂದ ಹೆಗಡೆ ತಂಡದಿಂದ ಯಕ್ಷಗಾನ ಹಾಗೂ ರಘು ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ.

ಪ್ರವೇಶ: ಉಚಿತ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಜಯಪ್ರಕಾಶ್ ಕಿಣಿ

About ಜಯಪ್ರಕಾಶ್ ಕಿಣಿ