ಕಾವೇರಿ ಹೋರಾಟಕ್ಕೆ ಧುಮುಕಿದ ಅಂಬರೀಷ್

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಡ್ಯ, ಸೆ.17: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿರುದ್ಧ ನದಿ ಪಾತ್ರದ ಜನರು ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯದ ಗಂಡು ನಟ, ರಾಜಕಾರಣಿ ಅಂಬರೀಷ್ ಅವರು ಸೋಮವಾರ (ಸೆ.17) ಪ್ರತಿಭಟನಾಕಾರರ ಜೊತೆ ಮಂಡ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಂಬರೀಷ್ ಮಾತನಾಡಿ, ’ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಇದು ಹಲವು ವರ್ಷದ ಸಮಸ್ಯೆ. ಈಗ ಇದಕ್ಕೆ ಅಂತ್ಯ ಕಾಣಿಸಲೇಬೇಕು. ಕೇಂದ್ರ ಸರ್ಕಾರ ತಮಿಳುನಾಡಿನ ಬ್ಲಾಕ್‌ಮೇಲ್ ತಂತ್ರಕ್ಕೆ ಮಣಿಯದೆ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಆಶಯವಿದೆ’ ಎಂದು ಹೇಳಿದರು.

ಮಂಡ್ಯ ಜಿಲ್ಲಾ ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಹಿರಿಯ ಹೋರಾಟಗಾರ ಜಿ ಮಾದೇಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಐದು ಅಂಶದ ಪರಿಹಾರ ಸೂತ್ರವನ್ನು ಕಂಡುಕೊಳ್ಳಲಾಗಿದೆ. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ತಡೆಯಲು ಒತ್ತಾಯಿಸಿ ಧರಣಿ ಹಮ್ಮಿಕೊಳ್ಳಲಾಗಿದೆ

ಸೆ. 19ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ತೀರ್ಮಾನ ಕೈಗೊಳ್ಳಲು ಒತ್ತಡ ತಂತ್ರವಾಗಿ ಕರೆ ನೀಡಿದ್ದ ಮಂಡ್ಯ ಬಂದ್ ಹಾಗೂ ಸೆ.17 ರ ಶಾಲಾ ಕಾಲೇಜು ಬಂದ್ ಶಾಂತಿಯುತವಾಗಿ ಯಶಸ್ವಿಯಾಗಿದೆ ಎಂದು ಮಾದೇಗೌಡ ಅವರು ತಿಳಿಸಿದರು.

ಮೆಟ್ಟೂರು ಡ್ಯಾಂನಲ್ಲಿ ಸುಮಾರು 40 ಟಿ‌ಎಂಸಿ ಅಡಿ ನೀರು ಇರುವ ಬಗ್ಗೆ ಮಾಹಿತಿ ದೊರೆತಿದೆ. ಇದು ಅಲ್ಲಿನ ಸಾಂಬಾ ಬೆಳೆಗೆ ಸಾಕಾಗುತ್ತದೆ. ಕೆ‌ಆರ್ ಎಸ್ ನಲ್ಲಿ ಕೇವಲ 26 ಟಿ‌ಎಂಸಿ ಅಡಿ ನೀರು ಇದ್ದು, ಕುಡಿಯುವ ನೀರಿಗೆ ತತ್ವಾರವಾಗಿರುವ ಸಂದರ್ಭ ಎದುರಾಗಿದೆ ಎಂದು ಮಾದೇಗೌಡ ಹೇಳಿದರು.

ಬಂದ್ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬಂದು ಸೇರಿದ್ದಾರೆ.

ಕಾವೇರಿ ನದಿಪಾತ್ರದಲ್ಲಿ ದಿನೇದಿನೇ ಪ್ರತಿಭಟನೆಯ ಕಾವು ಏರುತ್ತಿದ್ದು, ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಳಗ, ಮಂಡ್ಯ ಜಿಲ್ಲಾ ಹಿತ ರಕ್ಷಣಾ ವೇದಿಕೆ ಸೇರಿದಂತೆ ಹತ್ತು ಹಲವು ಸಂಘಟನೆಗಳು ಮಾದೇಗೌಡರ ನೇತೃತ್ವದ ಪ್ರತಿಭಟನೆಗೆ ಕೈ ಜೋಡಿಸಿವೆ.

ಬುಧವಾರ ಸೆ.19 ರಂದು ನಡೆಯಲಿರುವ ಪ್ರಧಾನಿ ನೇತೃತ್ವದ ಕಾವೇರಿ ಸಭೆಯಲ್ಲಿ ಕರ್ನಾಟಕದ ವಿರುದ್ಧ ನಿರ್ಣಯ ಹೊರಬಿದ್ದರೆ ಮುಂದೆ ನಡೆಯುವ ಅನಾಹುತಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

——————-

ಒನಿಂಡಿಯಾ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ