ಬಿಎಸ್‌ವೈಯಿಂದ ಮತ್ತೆ ಪಕ್ಷ ತೊರೆವ ಬೆದರಿಕೆ; ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಬಿಜೆಪಿಯಲ್ಲಿ ಮುಂದುವರಿಯುವುದಿಲ್ಲ: ಯಡಿಯೂರಪ್ಪ(updated news)

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ದಾವಣಗೆರೆ, ಸೆ.17: ಬಿಜೆಪಿ ಯಲ್ಲಿ ತನ್ನ ಗೌರವಕ್ಕೆ ಕುಂದು ತರುವಂತಹ ಕಹಿ ಘಟನೆ ಗಳ ಅನುಭವ ಆಗುತ್ತಿದೆ. ಆದುದರಿಂದ, ಇನ್ನು ಮುಂದೆ ತನ್ನ ಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವುದೇ ಕಾರಣ ಕ್ಕೂ ಬಿಜೆಪಿಯಲ್ಲಿ ಮುಂದು ವರಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ದಾವಣಗೆರೆಯ ಹೊನ್ನಾಳಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತೆಯರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತನ್ನ ಗೌರವಕ್ಕೆ ಕುಂದುಂಟು ಮಾಡುವ ಪ್ರಯತ್ನ ತಮ್ಮ ಪಕ್ಷದಲ್ಲೇ ನಡೆಯುತ್ತಿದೆ. ಇದು ತನ್ನ ಗಮನಕ್ಕೆ ಬಂದಿದೆ. ಒಂದು ವೇಳೆ ಇದೇ ಪ್ರವೃತ್ತಿ ಮುಂದುವರಿದರೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಮುಂದುವರಿಯುವುದಿಲ್ಲ ಎಂದು ಗುಡುಗಿದರು.

ಬಿಜೆಪಿ ತಾನು ಕಟ್ಟಿ ಬೆಳೆಸಿದ ಮನೆ. ಅಲ್ಲಿ ತನಗೆ ಅನ್ಯಾಯವಾದರೆ, ಕಿರುಕುಳವಾದರೆ, ನೋವಾದರೆ ಮನಸ್ಸು ಕೆರಳುವುದು ಸಹಜ. ನಾಲ್ಕು ಜನ ಶಾಸಕರಿದ್ದ ಬಿಜೆಪಿಯನ್ನು 110 ಶಾಸಕರ ಮಟ್ಟಕ್ಕೆ ತಂದಿದ್ದೇನೆ. ತಾನು ಕಟ್ಟಿದ ಮನೆಯಲ್ಲಿ ಬೇರೆಯವರು ಬಂದು ದರ್ಬಾರು ಮಾಡಿ ತನಗೆ ಅನ್ಯಾಯ ಮಾಡಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಕಿಡಿಗಾರಿದರು.

ಪಕ್ಷದಲ್ಲಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾದರೆ ತಾನು ಪಕ್ಷದಲ್ಲಿ ಇರುವುದಿಲ್ಲ ಎಂದು ಹಿಂದೆಯೂ ಹೇಳಿದ್ದೆ. ಈಗಲೂ ಅದನ್ನೇ ಒತ್ತಿ ಹೇಳುತ್ತಿದ್ದೇನೆ. ಅಂದರೆ ತಾನು ನಾಳೆಯೇ ಬಿಜೆಪಿ ಬಿಟ್ಟು ಹೋಗುತ್ತೇನೆ ಎಂದು ತಪ್ಪು ಅರ್ಥ ಕಲ್ಪಿಸಿಕೊಳ್ಳಬೇಡಿ ಎಂದು ಯಡಿ ಯೂರಪ್ಪ ಸ್ಪಷ್ಟನೆ ನೀಡಿದರು.

ಅಧಿಕಾರ ಕಳೆದುಕೊಂಡು ಒಂದು ವರ್ಷವಾದರೂ ಸಾರ್ವಜನಿಕ ಜೀವನದಲ್ಲಿನ ತನ್ನ ವರ್ಚಸ್ಸು ಕಮ್ಮಿಯಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇನೆ. ಜನರು ಪ್ರೀತಿ, ಅಭಿಮಾನ, ಗೌರವದಿಂದ ಕಾಣು ತ್ತಿದ್ದಾರೆ. ತನಗೆ ಪಕ್ಷಕ್ಕಿಂತ ನಾಡಿನ ಆರು ಕೋಟಿ ಜನರ ಹಿತವೇ ಮುಖ್ಯ. ಅವರ ಆಶೀರ್ವಾದ ವಿದ್ದರೆ ಒಂದಲ್ಲ ಹಲವು ಬಾರಿ ಮುಖ್ಯಮಂತ್ರಿ ಯಾಗುತ್ತೇನೆ ಎಂದು ಅವರು ಹೇಳಿದರು.

ಬಿಎಸ್‌ವೈ ಪಕ್ಷ ತೊರೆಯುವುದಿಲ್ಲ: ರೇಣುಕಾಚಾರ್ಯ
ಬೆಂಗಳೂರು, ಸೆ.17: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು, ಶೋಷಿತರು ಸೇರಿದಂತೆ ಎಲ್ಲ ವರ್ಗಗಳ ಪರವಾಗಿ ನಲ್ವತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಯಡಿಯೂರಪ್ಪ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಆದರೆ, ಅವರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.

ಯಡಿಯೂರಪ್ಪ ಬಿಜೆಪಿಯಲ್ಲೆ ಇರುತ್ತಾರೆ. ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ ಎಂದು ಅವರು ರೇಣುಕಾಚಾರ್ಯ ತಿಳಿಸಿದರು.

ಅಪಾರ್ಥ ಬೇಡ: ಶೆಟ್ಟರ್
ಗುಲ್ಬರ್ಗ, ಸೆ. 17: ಕೂಲಿ ಕಾರ್ಮಿಕರು ಹಾಗೂ ದೀನದಲಿತರ ಪರವಾದ ಪಕ್ಷ ಆಡಳಿತಕ್ಕೆ ಬರಬೇಕು ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆಗೆ ಯಾವುದೇ ರೀತಿಯ ಅಪಾರ್ಥ ಕಲ್ಪಿಸುವುದು ಬೇಡ ಎಂದು ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಹೇಳಿದ್ದಾರೆ.

ಹೈ-ಕ ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಯಡಿಯೂರಪ್ಪ ರೈತ ಪರ ಹೋರಾಟಗಾರರಾಗಿದ್ದು, ರೈತರ, ದೀನದಲಿತರ ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಅವರಿಗಿರುವ ಕಾಳಜಿಯಿಂದಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ತಾವೆಲ್ಲರು ಒಟ್ಟಾಗಿದ್ದು, ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಶೆಟ್ಟರ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ -ನುಡಿದರು.

ಸಚಿವರ ಖಾತೆ ನಿರ್ವಹಣೆಯಲ್ಲಿ ತಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಸಚಿವರಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ ಎಂದ ಅವರು, ಮುಖ್ಯಮಂತ್ರಿಗೆ ಸಚಿವರ ಮೇಲೆ ಹಿಡಿತವಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಹೇಳಿಕೆಗೆ ಆಕ್ರೋಶವ್ಯಕ್ತಪಡಿಸಿ ಅವರು ರಾಜಕೀಯ ದುರುದ್ದೇಶದಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಡೀಸೆಲ್ ಬೆಲೆ ಏರಿಸಿರುವುದರಿಂದ ರಾಜ್ಯದಲ್ಲಿ ತೆರಿಗೆ ಕಡಿಮೆ ಮಾಡವ ಸಂಬಂಧ ಸಚಿವ ಸಂಪುಟ ಸಭೆ ಕರೆದು ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ಶೆಟ್ಟರ್ ಹೇಳಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ