ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ರಾಜ್ಯದಲ್ಲಿ ಯಶಸ್ವಿ. ಮುಂಬೈಯಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ನವದೆಹಲಿ/ಬೆಂಗಳೂರು: ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಮತ್ತು ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲ ಮಿತಿ ವಿರೋಧಿಸಿ ಎನ್‌ಡಿಎ, ಎಪಕ್ಷಗಳು ಮತ್ತು ಎಸ್‌ಪಿಗಳು ಜಂಟಿಯಾಗಿ ನೀಡಿದ್ದ ಬಂದ್‌ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಮತ್ತು ಬಹುತೇಕ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಇಂದು ಕಾರ್ಯ ನಿರ್ವಹಿಸಿಲ್ಲ.

ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ಪ್ರತಿಭಟನೆಕಾರರು ವಾಹನ ಸಂಚಾರ ಮತ್ತು ರೈಲು ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಮುಂಬೈಯಲ್ಲಿ ಬಂದ್‌ ಹೆಚ್ಚಿನ ಪರಿಣಾಮ ಬೀರಿಲ್ಲ. ದೆಹಲಿಯ ಹೆಚ್ಚಿನ ಮಾರುಕಟ್ಟೆ ಪ್ರದೇಶಗಳು ಕಾರ್ಯ ನಿರ್ವಹಿಸಿಲ್ಲ. ಕೆಲವೆಡೆ ಪ್ರತಿಭಟನಕಾರರು ಸಂಚಾರಕ್ಕೆ ತಡೆಯೊಡ್ಡಿದರಾದರೂ ಒಟ್ಟಾರೆಯಾಗಿ  ವಾಹನ ಸಂಚಾರ ಸಾಮಾನ್ಯ ಸ್ಥಿತಿಯಲ್ಲಿದೆ. ದೆಹಲಿಯ ಹೆಚ್ಚಿನ ಎಲ್ಲಾ ಖಾಸಗಿ ವಿದ್ಯಾ ಸಂಸ್ಥೆಗಳು ಇಂದು ಕಾರ್ಯ ನಿರ್ವಹಿಸಲಿಲ್ಲ.

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಬಹಳ ಕಡಿಮೆ ಇತ್ತು. ಬ್ಯಾಂಕುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬಂದ್‌ಗೆ ಕರೆ ನೀಡಿರುವ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದರಿಂದ ಬಂದ್‌ನ ಬೇಗೆಯನ್ನು ತಗ್ಗಿಸಲು ಅಗತ್ಯವಿರುವ ಕ್ರಮಗಳನ್ನೇನು ಕೈಗೊಂಡಿಲ್ಲ. ರೈಲು ನಿಲ್ದಾಣಗಳಲ್ಲಿ ದೇಶದ ವಿವಿಧೆಡೆಗಳಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರು ನಗರ ಮೂರು ರೈಲು ನಿಲ್ದಾಣಗಳಲ್ಲಿ ವಾಹನಗಳಿಗೆ ಕಾಯುವ ಸ್ಥಿತಿ ಏರ್ಪಟ್ಟಿದೆ. ಆಟೋ ರಿಕ್ಷಾ ಮತ್ತು ಬಸ್ಸುಗಳು ಕಾರ್ಯ ನಿರ್ವಹಿಸದೇ ಇರುವುದರಿಂದ ಈ ಪ್ರಯಾಣಿಕರು ಟ್ಯಾಕ್ಸಿಗಳನ್ನು ಅವಲಂಬಿಸಬೇಕಾಯಿತು. ಖಾಸಗಿ ವಾಹನಗಳನ್ನು ಹೊಂದಿದ್ದವರು ಕಷ್ಟಪಟ್ಟು ಮನೆ ತಲುಪಲು ಸಾಧ್ಯವಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಓಡಾಡದೇ ಇರುವುದಕ್ಕೆ ಮುಖ್ಯ ಕಾರಣ ಪ್ರಯಾಣಿಕರಿಲ್ಲದೇ ಇರುವುದು ಎಂಬ ಕಾರಣವನ್ನು ನಿಗಮದ ವಕ್ತಾರರು ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತರು ರಾಜ್ಯದ ವಿವಿಧೆಡೆ ದ್ವಿಚಕ್ರ ವಾಹನ ರ್‍ಯಾಲಿಗಳನ್ನು ನಡೆಸಿ ಪ್ರತಿಭಟನೆಯನ್ನು ದಾಖಲಿಸಿದರು.

ಸ್ಥಗಿತಗೊಡ ಸಂಚಾರ, ವ್ಯಾಪಾರ.. ಜನಜೀವನ

ಬೆಂಗಳೂರು: ಕೇಂದ್ರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಬಿಜೆಪಿ ನೇತೃತ್ವದ ಎನ್‌ಡಿಎ ನಡೆಸುತ್ತಿರುವ ದೇಶಾದ್ಯಂತ ಮುಷ್ಕರಕ್ಕೆ ರಾಜ್ಯದಲ್ಲೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿಲ್ಲರೆ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆಗೆ ಮಾತುಕತೆ ನಡೆಸದೆಯೇ ದಿಢೀರ್ ಅನುಮತಿ ನೀಡಿರುವುದು, ಡೀಸೆಲ್ ಬೆಲೆ ಏರಿಕೆ ಹಾಗೂ ಸಬ್ಸಿಡಿಯುಳ್ಳ ಅಡುಗೆ ಅನಿಲ ಸಿಲಿಂಡರ್‌ಗಳ ಸಂಖ್ಯೆಯನ್ನು ವರ್ಷಕ್ಕೆ ಆರಕ್ಕೆ ಸೀಮಿತಗೊಳಿಸಿರುವುದನ್ನು ವಿರೋಧಿಸಿ ಎನ್‌ಡಿಎ ಮೈತ್ರಿಕೂಟ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ.

ಬೆಂಗಳೂರಲ್ಲಿ ಸಿಟಿ ಬಸ್ ಇಲ್ಲ
ರಾಜ್ಯದಲ್ಲಿ ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಸರಕಾರಿ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಬೆಂಗಳೂರಿನಲ್ಲಿ ಮುಂಜಾನೆ ಹಾಲಿನ ಸೇವೆ ದೊರೆತಿದ್ದು, ಸಂಜೆ 6 ಗಂಟೆಯವರೆಗೆ ಬಸ್ ಸಂಚಾರ ಇರುವುದಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಘೋಷಿಸಿದ್ದಾರೆ.

ಬೆಂಗಳೂರು, ದಕ್ಷಿಣ ಕನ್ನಡ, ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು ಮುಂತಾದೆಡೆಗಳಲ್ಲಿ ಬಸ್ಸುಗಳೆಲ್ಲವೂ ಡಿಪೋದಲ್ಲೇ ಬೀಡುಬಿಟ್ಟಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಸರಕಾರಿ ಬಸ್‌ಗಳಲ್ಲದೆ ಖಾಸಗಿ ಬಸ್‌ಗಳು ಕೂಡ ಸಂಚಾರ ಸ್ಥಗಿತಗೊಳಿಸಿವೆ.

ಬೆಂಗಳೂರು ಸಹಿತ ಕೆಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸುವ ತೀರ್ಮಾನ ಆಯಾ ಶಾಲೆಗಳ ಆಡಳಿತ ಮಂಡಳಿಗೆ ಬಿಟ್ಟ ವಿಷಯ ಎಂದು ಸರಕಾರ ಬುಧವಾರವೇ ತಿಳಿಸಿತ್ತು.

ಯುಪಿಎ ಮಿತ್ರ ಪಕ್ಷಗಳೂ ಸಾಥ್
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ಕೂಡ ಈ ಬಂದ್ ಬೆಂಬಲಿಸುತ್ತಿರುವುದರಿಂದ ಉತ್ತರ ಪ್ರದೇಶ ಹಾಗೂ ತಮಿಳುನಾಡುಗಳಲ್ಲಿಯೂ ಬಂದ್ ಬಿಸಿ ತಟ್ಟಿದೆ. ಇದಲ್ಲದೆ, ಎಡಪಕ್ಷಗಳು ಪ್ರತ್ಯೇಕವಾಗಿಯೇ ಬಂದ್ ಆಚರಣೆಯಲ್ಲಿ ತೊಡಗಿದ್ದರೆ, ತೆಲುಗು ದೇಶಂ, ಬಿಜು ಜನತಾ ದಳ ಹಾಗೂ ಜೆಡಿಎಸ್ ಕೂಡ ಬಂದ್‌ನಲ್ಲಿ ಪಾಲ್ಗೊಳ್ಳುತ್ತಿವೆ.
ಪ್ರಮುಖ ಕೇಂದ್ರಗಳಲ್ಲಿ ಪ್ರತಿಭಟನಾ ಸಭೆ ನಡೆಸಲಾಗುತ್ತಿದೆ. ಇದರೊಂದಿಗೆ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಲಾರಿ ಮಾಲೀಕರ ಸಂಘವೂ ಬುಧವಾರ ರಾತ್ರಿಯಿಂದ ಮುಷ್ಕರ ನಡೆಸುತ್ತಿರುವುದರಿಂದ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿ ಗೋಚರಿಸುತ್ತಿವೆ.

ಸೆ. 20: ಭಾರತ ಬಂದ್ ಸಂಪೂರ್ಣ ಸಂಭವ; ರಾಜ್ಯದಲ್ಲೂ ಜನಜೀವನ ಅಸ್ತವ್ಯಸ್ತ ಸಾಧ್ಯತೆ

ನವದೆಹಲಿ (ಪಿಟಿಐ):  ಡೀಸೆಲ್ ಬೆಲೆ ಏರಿಕೆ, ಅಡುಗೆ ಸಿಲಿಂಡರ್ ಪೂರೈಕೆಗೆ ಮಿತಿ ಹಾಗೂ ಬಹು ಬ್ರಾಂಡ್ ರೀಟೇಲ್ ಉದ್ಯಮದಲ್ಲಿ ಎಫ್‌ಡಿಗೆ ಅವಕಾಶ ನೀಡಿದ  ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಎನ್‌ಡಿಎ, ಎಡ ಪಕ್ಷಗಳು, ಎಸ್‌ಪಿ, ಬಿಎಸ್‌ಪಿ, ಟಿಡಿಪಿ, ಡಿಎಂಕೆ ಮತ್ತು ಜೆಡಿಎಸ್ ಸೆ. 20ರಂದು 12 ಗಂಟೆಗಳ ಅವಧಿಯ (ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ) ಭಾರತ ಬಂದ್‌ಗೆ ಕರೆ ನೀಡಿದ್ದು, ಪ್ರತಿಭಟನೆ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ,.

ಎಲ್ಲಾ ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು, ವ್ಯಾಪಾರಿಗಳ ಸಂಘಟನೆಗಳು ಪ್ರತಿಭಟನೆ ಸ್ವರೂಪಗಳನ್ನು ಅಂತಿಮಗೊಳಿಸಿದ್ದಾರೆ.

ತತ್ವ, ಸಿದ್ಧಾಂತಗಳಲ್ಲಿ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಎಡಪಕ್ಷಗಳು ಮತ್ತು ಬಲಪಂಥೀಯ ಪಕ್ಷಗಳ ಮುಖಂಡರು 20ರಂದು ನಡೆಯಲಿರುವ `ಭಾರತ್ ಬಂದ್ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ಒಂದೇ ವೇದಿಕೆಯ ಮೇಲೆ ಚಿಲ್ಲರೆ ವ್ಯಾಪಾರಸ್ಥರ ರ‌್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಸಿಪಿಐ ಮುಖಂಡ ಎ. ಬಿ. ಬರ್ಧನ್, ಜೆಡಿಯು ಮುಖ್ಯಸ್ಥ ಶರದ್ ಯಾದವ್, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಮತ್ತು ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರು ಚಿಲ್ಲರೆ ವ್ಯಾಪಾರಸ್ಥರ ರ‌್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

75 ಲಕ್ಷ ಟ್ರಕ್ ಸ್ಥಗಿತ (ಮುಂಬೈ ವರದಿ ): ಡೀಸೆಲ್ ಬೆಲೆಯಲ್ಲಿ ಆಗಿರುವ ಭಾರಿ ಹೆಚ್ಚಳದ ವಿರುದ್ಧ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಬುಧವಾರ ಮಧ್ಯರಾತ್ರಿಯಿಂದ 24 ಗಂಟೆಗಳ ಸಾಂಕೇತಿಕ ಪ್ರತಿಭಟನೆಗೆ ಕರೆ ನೀಡಿದೆ.

ಮಂಗಳವಾರ ನಡೆದ ಸಂಘಟನೆಯ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಡೀಸೆಲ್ ಬೆಲೆ ಏರಿಕೆ ರದ್ದುಗೊಳಿಸಲು ಆಗ್ರಹಿಸಿ ಬುಧವಾರ 75 ಲಕ್ಷ ಟ್ರಕ್‌ಗಳು ರಸ್ತೆಗೆ ಇಳಿಯದೇ ಪ್ರತಿಭಟನೆ ನಡೆಸಲಿವೆ. ಬೆಲೆ ಹೆಚ್ಚಳದ ನಿರ್ಧಾರ ವಾಪಸು ಪಡೆಯಲು 30 ದಿನಗಳ ಸಮಾಯಾವಕಾಶ ನೀಡುತ್ತೇವೆ.

ಇಲ್ಲದಿದ್ದರೆ `ಚಕ್ಕಾ ಜಾಮ್` ಹೆಸರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ಮಲ್ಕಿತ್ ಸಿಂಗ್ ಬಲ್ ತಿಳಿಸಿದ್ದಾರೆ.

ಕಾರಟ್ ಸ್ಪಷ್ಟನೆ: ಕೇಂದ್ರದ ಈ ನಿರ್ಧಾರಗಳ ವಿರುದ್ಧ ಬೇರೆ ಬೇರೆ ಸ್ವರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸಹ ಸ್ಪಷ್ಟಪಡಿಸಿದ್ದಾರೆ.

ಬಹುರಾಷ್ಟ್ರೀಯ ಸರ್ವ ಸರಕು ದೈತ್ಯ ಸಂಸ್ಥೆಗಳು ರಾಷ್ಟ್ರದಲ್ಲಿ ನೆಲವೂರಲು ತಮ್ಮ ಪಕ್ಷ ಅವಕಾಶ ನೀಡುವುದಿಲ್ಲ. ಬಹು ಬ್ರಾಂಡ್‌ಗಳ ರೀಟೇಲ್ ಉದ್ಯಮದಲ್ಲಿ ಎಫ್‌ಡಿಐಗೆ ಅನುಮತಿ ನೀಡುವುದನ್ನು ಮನಮೋಹನ್ ಸಿಂಗ್ ಬಿಟ್ಟು ಬೇರೆಲ್ಲರೂ ವಿರೋಧಿಸುತ್ತಿದ್ದಾರೆ. ಆದರೆ ಸಿಂಗ್  ಮಾತ್ರ, ರಾಷ್ಟ್ರದ ಜನರ ಹಿತರಕ್ಷಣೆಗಿಂತ ಅಮೆರಿಕ, ಲಂಡನ್‌ಗಳಲ್ಲಿ ಕೇಳಿಬರುವ ವಿಶ್ಲೇಷಣೆಗೇ ಹೆಚ್ಚು ಸ್ಪಂದಿಸುತ್ತಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

ರಾಷ್ಟ್ರಪತಿಗೆ ಮನವಿ: ಈ ಮಧ್ಯೆ ಶರದ್ ಯಾದವ್ ಅವರ ನೇತೃತ್ವದಲ್ಲಿ ವ್ಯಾಪಾರಿಗಳ ಸಂಘಗಳ ನಿಯೋಗವು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಬಹುರಾಷ್ಟ್ರೀಯ ಕಂಪೆನಿಗಳ ಕಪಿಮುಷ್ಟಿಯಿಂದ ಚಿಲ್ಲರೆ ವ್ಯಾಪಾರಿಗಳನ್ನು ಪಾರು ಮಾಡಬೇಕು ಎಂದು ಮನವಿ ಮಾಡಿದೆ.

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದರೆ ಚಿಲ್ಲರೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಸುಮಾರು 22 ಕೋಟಿ  ಜನರಿಗೆ ತೊಂದರೆಯಾಗುತ್ತದೆ ಮತ್ತು ಪ್ರತಿ ದಿನ 20 ರೂಪಾಯಿಗಳಿಗೂ ಕಡಿಮೆ ಸಂಪಾದನೆ ಮಾಡುವ ಸುಮಾರು 70 ಕೋಟಿ ಬಡವರು ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ಕೋಟ್ಯಂತರ ಜನರಿಗೆ ಉದ್ಯೋಗ ನಷ್ಟವಾಗುತ್ತದೆ ಎಂದು ರಾಷ್ಟ್ರಪತಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಸಲಾಗಿದೆ. ರಾಷ್ಟ್ರಪತಿ ಅವರು ತಾಳ್ಮೆಯಿಂದ ತಮ್ಮ ಅಹವಾಲುಗಳನ್ನು ಆಲಿಸಿದರು ಎಂದು ಯಾದವ್ ತಿಳಿಸಿದ್ದಾರೆ.

ರಾಜ್ಯದಲ್ಲೂ ಜನಜೀವನ ಅಸ್ತವ್ಯಸ್ತ ಸಾಧ್ಯತೆ
ಬೆಂಗಳೂರು: ಡೀಸೆಲ್ ದರ ಏರಿಕೆ, ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಗೆ ಮಿತಿ ಮೊದಲಾದ ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ಗುರುವಾರ ನಡೆಯಲಿರುವ ದೇಶವ್ಯಾಪಿ ಮುಷ್ಕರದ ಪರಿಣಾಮ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.

ನಗರ ಸಾರಿಗೆ ಬಸ್‌ಗಳು ಸೇರಿದಂತೆ ರಾಜ್ಯವ್ಯಾಪಿ ಬಸ್‌ಗಳ ಸಂಚಾರ ಬಹುತೇಕ ಸ್ಥಗಿತಗೊಳ್ಳುವ ಸಂಭವ ಇದ್ದು, ಅದರಿಂದಾಗಿ ಮತ್ತೊಮ್ಮೆ ತೊಂದರೆ ಅನುಭವಿಸಲು ಸಾರ್ವಜನಿಕರು ಸಿ್ಧೂವಾಗಬೇಕಿದೆ.

ಡಿಎಂಕೆ ಬೆಂಬಲ
ಭಾರತ ಬಂದ್‌ಗೆ ಡಿಎಂಕೆ ಬೆಂಬಲ ವ್ಯಕ್ತಪಡಿಸುವ ಮೂಲಕ ಯುಪಿಎ ಸಂಬಂಧ ಕಳಚಿಕೊಳ್ಳುವ ಸೂಚನೆ ನೀಡಿದೆ. ಡಿಎಂಕೆ ಮತ್ತು ಅದರ ಕಾರ್ಮಿಕ ವಿಭಾಗವಾದ ಎಲ್‌ಪಿಎಫ್ ಭಾರತ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲಿವೆ ಎಂದು ಎಂ. ಕರುಣಾನಿಧಿ ಅವರು ಮಂಗಳವಾರ ಸಂಜೆ ಪ್ರಕಟಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು