ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ: ಟೋಲ್ ಸಂಗ್ರಹ ಆರಂಭ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ ಏಳು) ನವಯುಗ ದೇವನಹಳ್ಳಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (ಎನ್‌ಡಿಟಿಪಿ‌ಎಲ್) ಸಂಸ್ಥೆಯು ಶನಿವಾರ ಬೆಳಿಗ್ಗೆಯಿಂದ ಟೋಲ್ ಸಂಗ್ರಹ ಪ್ರಕ್ರಿಯೆ ಆರಂಭಿಸಿದೆ.

`ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಮಾಡಲಾಗುತ್ತಿದ್ದ ಟೋಲ್ ಸಂಗ್ರಹ ಪ್ರಕ್ರಿಯೆಗೆ ದೇವನಹಳ್ಳಿ ಸ್ಥಳೀಯ ನ್ಯಾಯಾಲಯ ತಡೆ ನೀಡಿತ್ತು. ಹೈಕೋರ್ಟ್ ಆ ತಡೆಯಾಜ್ಞೆಯನ್ನು ಆಗಸ್ಟ್ 29ರಂದು ತೆರವುಗೊಳಿಸಿದ್ದರಿಂದ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ಪುನಃ ಆರಂಭಿಸಲಾಗಿದೆ. ಇದರಿಂದ ವಾಹನ ಸವಾರರು ಆಕ್ರೋಶಗೊಂಡು ಅಹಿತಕರ ಘಟನೆಗಳು ನಡೆಯಬಹುದು ಎಂದು ಪೊಲೀಸ್ ಭದ್ರತೆಗಾಗಿ ಕಾಯುತ್ತಿದ್ದೆವು` ಎಂದು ಎನ್‌ಡಿಟಿಪಿ‌ಎಲ್ ಅಧಿಕಾರಿಗಳು ಹೇಳಿದ್ದಾರೆ.

`ಶನಿವಾರ ಬೆಳಿಗ್ಗೆ ಎಂಟು ಗಂಟೆಯಿಂದಲೇ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಟೋಲ್ ಗೇಟ್‌ನ ಎರಡೂ ಬದಿಯಲ್ಲೂ ಸುಮಾರು ಐವತ್ತಕ್ಕೂ ಹೆಚ್ಚು ಪೊಲೀಸರು ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದಾರೆ` ಎಂದು ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ್ ಹೇಳಿದರು.  ಬೈಕ್, ಆಟೊ, ಟ್ರ್ಯಾಕ್ಟರ್, ಆಂಬುಲೆನ್ಸ್ ಮತ್ತು ಸರ್ಕಾರಿ ಸೇವೆಗೆ ನಿಯೋಜನೆಗೊಂಡ ಕೇಂದ್ರ ಸರ್ಕಾರದ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗಿದೆ.

ಉಳಿದಂತೆ ಎಲ್ಲಾ ರೀತಿಯ ಸರ್ಕಾರಿ ಮತ್ತು ಖಾಸಗಿ ವಾಹನಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂದರು.

`ಟೋಲ್ ಕೇಂದ್ರದ ಮೂಲಕ ಒಮ್ಮೆ ಹಾದು ಹೋಗುವ ವಾಹನಗಳಿಂದ 20ರಿಂದ 125 ರೂಪಾಯಿವರೆಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ವಾಹನದ ನಮೂನೆಗೆ ಅನುಗುಣವಾಗಿ ಶುಲ್ಕ ನಿಗದಿಯಾಗಿರುತ್ತದೆ.

ಅಂತೆಯೇ ಮಾಸಿಕ ಪಾಸ್‌ಗೆ 640ರಿಂದ 4,150 ರೂಪಾಯಿ ನಿಗದಿಪಡಿಸಲಾಗಿದೆ` ಎಂದು ಅಧಿಕಾರಿಗಳು ತಿಳಿಸಿದರು.

ಪ್ರಯಾಣಿಕರಿಗೆ ಹೊರೆ: ಟೋಲ್ ಸಂಗ್ರಹ ಸ್ಥಳಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದಾಗ ವಾಹನಗಳ ಮಾಲೀಕರು ಟೋಲ್ ಸಂಗ್ರಹಿಸುವ ಸಿಬ್ಬಂದಿ ಜತೆ ವಾಗ್ವಾದ ನಡೆಸುತ್ತಿದ್ದ ದೃಶ್ಯ ಕಂಡುಬಂತು.

`ಪ್ರತಿನಿತ್ಯ ಹಲವು ಬಾರಿ ವಿಮಾನ ನಿಲ್ದಾಣಕ್ಕೆ ಬಂದು ಹೋಗುತ್ತೇನೆ. ಪ್ರತಿ ಬಾರಿಯು 30 ರೂಪಾಯಿ ಟೋಲ್ ಪಡೆಯುವುದು ಸರಿಯಲ್ಲ. ಎತ್ತರಿಸಿದ ಮಾರ್ಗದ (ಎಲೆವೇಟೆಡ್ ರಸ್ತೆ) ಕಾಮಗಾರಿ ಪೂರ್ಣಗೊಂಡ ಬಳಿಕ ಟೋಲ್ ಸಂಗ್ರಹಿಸಬೇಕು. ಆಗ ಸಮಯವು ಉಳಿತಾಯವಾಗಲಿದೆ` ಎಂದು ಪ್ರತಿನಿತ್ಯ ಬಿ‌ಐ‌ಎ‌ಎಲ್‌ಗೆ ಬಂದು ಹೋಗುವ ಸರಕು ಸಾಗಣೆ ವಾಹನದ ಮಾಲೀಕ ಎನ್.ಎ.ಬಾಬು ಹೇಳಿದರು.

`ಬಾಡಿಗೆ ಟ್ಯಾಕ್ಸಿಗಳಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರ ಮೇಲೆ ಟೋಲ್‌ನ ಹೊರೆ ಬೀಳಲಿದೆ. ನಗರದಿಂದ ಬಿ‌ಐ‌ಎ‌ಎಲ್‌ಗೆ ಪ್ರಯಾಣಿಸಲು ಐಷಾರಾಮಿ ಟ್ಯಾಕ್ಸಿಗಳಲ್ಲಿ ಸುಮಾರು ರೂ 1,200 ಪಡೆಯಲಾಗುತ್ತಿದೆ.

ಟ್ಯಾಕ್ಸಿ ಬಳಕೆದಾರರು ಪ್ರತಿ ಪ್ರಯಾಣಕ್ಕೆ ರೂ 30 ಟೋಲ್ ಪಾವತಿಸಬೇಕಾಗುತ್ತದೆ` ಎಂದು ಬೆಂಗಳೂರು ಪ್ರವಾಸಿ ಟ್ಯಾಕ್ಸಿಗಳ ಮಾಲೀಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಹೊಳ್ಳ ತಿಳಿಸಿದರು. `ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿರುವ ವಾಯುವಜ್ರ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಸ್‌ಗಳ ಪ್ರತಿ ಟ್ರಿಪ್‌ನಿಂದ ಇಲಾಖೆಗೆ ನೂರು ರೂಪಾಯಿ ನಷ್ಟವಾಗುತ್ತಿದೆ` ಎಂದು ಬಿ‌ಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪಾಸ್ ಸೌಲಭ್ಯ: `ಟೋಲ್ ಸಂಗ್ರಹ ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯಲ್ಲಿರುವ ಸಾರ್ವಜನಿಕರ ವಾಣಿಜ್ಯೇತರ ಉದ್ದೇಶದ ವಾಹನಗಳ ಓಡಾಟಕ್ಕೆ ಮಾಸಿಕ ಪಾಸ್ ನೀಡಲಾಗುತ್ತದೆ. ಪಾಸ್‌ಗೆ ಮಾಸಿಕ 200 ರೂಪಾಯಿ ದರ ನಿಗದಿಪಡಿಸಿದ್ದು, ಸ್ಥಳೀಯರು ಆ ಪಾಸ್‌ಗಳ ನೆರವಿನಿಂದ ಎಷ್ಟು ಬಾರಿಯಾದರೂ ಸಂಚರಿಸಬಹುದು` ಎಂದು ಎನ್‌ಡಿಟಿಪಿ‌ಎಲ್ ಅಧಿಕಾರಿಗಳು ಹೇಳಿದ್ದಾರೆ.

ವಾಹನಗಳ ಮಾಲೀಕರು ಅವರ ಗುರುತಿನ ಚೀಟಿ ಮತ್ತು ವಾಹನ ನೋಂದಣಿ ದಾಖಲೆಪತ್ರಗಳನ್ನು (ಆರ್.ಸಿ) ನೀಡಿ ಪಾಸ್ ಪಡೆಯಬಹುದು ಎಂದು ತಿಳಿಸಿದ್ದಾರೆ.

——————–

`ಪ್ರಜಾವಾಣಿ`

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ