ಸೇನೆಯ ನಿಯಂತ್ರಣ ಕೊಟ್ಟರೆ ತಿಂಗಳಲ್ಲಿ ದೇಶವನ್ನು ಸರಿಪಡಿಸುವೆ: ಬಾಳ್ ಠಾಕ್ರೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮುಂಬೈ, ಸೆ. 8: ಭಾರತೀಯ ಸೇನೆಯ ನಿಯಂತ್ರಣವನ್ನು ತನ್ನ ಕೈಗೆ ನೀಡಿದರೆ ಕೇವಲ ಒಂದು ತಿಂಗಳಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ದೇಶವನ್ನು ಸರಿಪಡಿಸುವುದಾಗಿ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಹೇಳಿಕೊಂಡಿದ್ದಾರೆ.

ಶಿವಸೇನೆಯ ಮುಖವಾಣಿ ‘ದೋಪಹರ್ ಕಾ ಸಾಮ್ನಾ’ದಲ್ಲಿ ಪ್ರಕಟವಾಗುತ್ತಿರುವ ಠಾಕ್ರೆಯ ನಾಲ್ಕು ಕಂತುಗಳ ಸಂದರ್ಶನದ ಪೈಕಿ ಇಂದು ಪ್ರಕಟವಾದ ಎರಡನೆ ಭಾಗದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದೇ ವೇಳೆ, ದೇಶದಲ್ಲಿ ತೊಂದರೆ ಹುಟ್ಟುಹಾಕಿದ ಮುಸ್ಲಿಂ ಮೂಲಭೂತವಾದಿಗಳನ್ನು ತಾನು ಸುಮ್ಮನೆ ಬಿಡುವುದಿಲ್ಲ ಎಂದೂ ಠಾಕ್ರೆ ಎಚ್ಚರಿಸಿದ್ದಾರೆ.

‘‘ಸೇನೆಯನ್ನು ನನ್ನ ಕೈಗೆ ಕೊಡಿ. ನಾನು ನಿಮಗೆ ಒಂದು ತಿಂಗಳಲ್ಲಿ ಪವಾಡಗಳನ್ನು ಸೃಷ್ಟಿಸಿ ತೋರಿಸುತ್ತೇನೆ ಹಾಗೂ ಎಲ್ಲವನ್ನೂ ಸರಿ ಮಾಡುತ್ತೇನೆ. ನನ್ನ ಕೈಗೆ ಸೇನೆಯನ್ನು ಕೊಟ್ಟು ನೋಡಿ, ಅಷ್ಟೆ’’ ಎಂದು ‘ಸೇನಾ-ಪತಿ’ ಎಂದು ಕರೆಯಲ್ಪಡುವ ಠಾಕ್ರೆ ಹೇಳಿಕೊಂಡಿದ್ದಾರೆ.

ಸ್ವತಃ ತನ್ನ ಪಕ್ಷ ಶಿವಸೇನೆಯ ಒಂದು ‘ಸೇನೆ’ಯಾಗಿದೆ ಎಂಬುದನ್ನು ಅವರ ಗಮನಕ್ಕೆ ತಂದಾಗ, ಆದರೆ, ಅದರ ಬಳಿ ಶಸ್ತ್ರಗಳಿಲ್ಲ ಎಂದು ವಿಷಾದಿಸಿದರು. ತನ್ನ ಸೇನೆಯ ಬಳಿ ಕೇವಲ ಕೇಸರಿ ಧ್ವಜಗಳಿವೆ ಎಂದರು. ‘‘ಆದಾಗ್ಯೂ, ನಾವು ಸಾಕಷ್ಟು ಪ್ರಭಾವ ಹೊಂದಿದ್ದೇವೆ. ಆದರೆ, ನನಗೆ ಭಿತ್ತಿಪತ್ರಗಳು, ಬ್ಯಾನರ್‌ಗಳು ಮತ್ತು ತಮಟೆಗಳಷ್ಟೇ ಸಾಕಾಗುವುದಿಲ್ಲ’’ ಎಂದು 86 ವರ್ಷ ಪ್ರಾಯದ ಹಿಂದುತ್ವವಾದಿ ನಾಯಕ ಹೇಳಿದ್ದಾರೆ.

ಶಾಂತಿ ಕದಡುವವರನ್ನು ಹಾಗೂ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಪಾಕಿಸ್ತಾನಿ ಅಥವಾ ಬಾಂಗ್ಲಾದೇಶೀ ಧರ್ಮಾಂಧ ಮುಸ್ಲಿಮರನ್ನು ಕನಿಷ್ಠ ಮಹಾರಾಷ್ಟ್ರದಲ್ಲಿಯಾದರೂ ತಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮ್ಯಾನ್‌ಮಾರ್‌ನ ಮುಸ್ಲಿಮರ ಮೇಲೆ ನಡೆದ ಆಕ್ರಮಣಗಳು ಮತ್ತು ಅಸ್ಸಾಂ ಗಲಭೆಯನ್ನು ವಿರೋಧಿಸಿ ವಿವಿಧ ಮುಸ್ಲಿಂ ಗುಂಪುಗಳು ಮುಂಬೈನ ಆಝಾದ್ ಮೈದಾನದಲ್ಲಿ ಆಗಸ್ಟ್ 11ರಂದು ಪ್ರತಿಭಟಿಸುತ್ತಿದ್ದಾಗ ನಡೆದ ಹಿಂಸೆ ಹಿಂದಿನ ಹಲವು ಘಟನೆಗಳಂತೆ ಪೂರ್ವಯೋಜಿತವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ಬಾಬರಿ ಮಸೀದಿ ಧ್ವಂಸದ ಬಳಿಕ (1992 ಡಿಸೆಂಬರ್ 6) ಅವರು (ಮುಸ್ಲಿಮರು) ಮುಂಬೈಯಲ್ಲಿ ಹಿಂಸಾಚಾರ ಆರಂಭಿಸಿದರು. ಗೋಧ್ರಾದಲ್ಲೂ ಅವರು ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳಿಗೆ ಬೀಗ ಜಡಿದು ಬೆಂಕಿ ಕೊಟ್ಟು ಜನರು, ಮಹಿಳೆಯರು ಮತ್ತು ಮಕ್ಕಳನ್ನು ಜೀವಂತ ಸುಟ್ಟರು. ಹಾಗೆಯೇ, ಮುಂಬೈ ಹಿಂಸಾಚಾರವೂ (2012 ಆಗಸ್ಟ್, ಆಝಾದ್ ಮೈದಾನ) ಪೂರ್ವಯೋಜಿತವಾಗಿದೆ’’ ಎಂದು ಠಾಕ್ರೆ ಹೇಳಿದ್ದಾರೆ.

ಈ ಘಟನೆಯನ್ನು ಶಿವ ಸೇನೆ ಮತ್ತು ತನ್ನ ಅಳಿಯ ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನೆ ತೀವ್ರವಾಗಿ ಖಂಡಿಸಿದೆ ಎಂದು ಹೇಳಿದ ಅವರು, ‘‘ಆದರೆ, ಸಂಸತ್ತನ್ನು ನಿಶ್ಚೇಷ್ಟಿತಗೊಳಿಸಿದ ಮಂದಿ (ಸೇನೆಯ ಮಿತ್ರ ಪಕ್ಷ ಬಿಜೆಪಿ) ಎಲ್ಲಿದ್ದರು’’ ಎಂದು ಪ್ರಶ್ನಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ