ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

 

ಮುಂಬಯಿ: ಮುಂಬಯಿ ಮಹಾನಗರದ ಪೊವಾಯಿ (ಲೇಕ್) ಕೆರೆಯಲ್ಲಿರುವ ಪ್ರತಿಷ್ಠಿತ ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಸಂಘಟನೆಯ ಅಧ್ಯಕ್ಷರಾಗಿ ಮೂಡಬಿದ್ರಿ ಶಿರ್ತಾಡಿ ಮೂಲದ ವಿಲಿಯಂ ಮಸ್ಕರೇನ್ಹಸ್ ಆಯ್ಕೆ ಆಗಿದ್ದಾರೆ.

೧೯೩೬ರಲ್ಲಿ ಸ್ಥ್ಥಾಪನೆಯಾಗಿದ್ದ ಈ ಸಂಘಟನೆ ಮುಂಬಯಿ ಮಹಾನಗರ ಪಾಲಿಕೆ, ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕೇಂದ್ರ ವಿನುಗಾರಿಕಾ ಪ್ರಾಧಿಕಾರದ ನೆರವಿನಿಂದ ಈ ಸಂಘಟನೆಯು ಪೊವಾಯಿ ಕೆರೆಯಲ್ಲಿರುವ ಜಲಚರಗಳು ಮತ್ತು ಅಪಾಯದ ಅಂಚಿನಲ್ಲಿರುವ ಪ್ರಭೇದಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ವಿಶೇಷವಾದ ಸಂಘಟನೆ ಆಗಿ ಕಾರ್ಯನಿರ್ವಾಹಿಸುತ್ತಿದೆ.

ಈ ಆಂಗ್ಲಿಂಗ್ ಸಂಘಟನೆಯನ್ನು ರಾಷ್ಟ್ರದ ಸುಪ್ರಸಿದ್ಧ ಸಂಗೀತಕಾರ ಶ್ರೀ ನೌಷದ್ ಆಲಿ ಅವರ ಹೆಸರಿನಲ್ಲಿ ‘ನೌಷದ್ ಆಲಿ ಸರೋವರ್ ಸಂವರ್ಧಿನಿ’ ಎಂಬ ಸರಕಾರೇತರ ಸಂಸ್ಥೆಯನ್ನು ಸಹ ನಡೆಸುತ್ತಿದೆ. ಈ ಆಂಗ್ಲಿಂಗ್ ಸಂಘಟನೆಯ ಮಾಜಿ ಅಧ್ಯಕ್ಷರಾಗಿದ್ದು ಪೊವಾಯಿ ಕೆರೆಯಲ್ಲಿ ಯಾವಾಗಲೂ ಗಾಳ ಹಾಕಿ ವಿನು ಹಿಡಿಯುತ್ತಿದ್ದ ನೌಷದ್ ಆಲಿ ಇಲ್ಲಿಯೇ ಅನೇಕ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅಲ್ಲದೆ ಈ ಕೆರೆ ಅವರ ಬದುಕಿಗೆ ಪ್ರಮುಖ ಪ್ರೇರಣೆಯಾಗಿತ್ತು ಎನ್ನಲಾಗಿದೆ.

ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಸಂಘಟನೆ ಈಗ ಬೃಹತ್ ಸಂಘಟನೆಯಾಗಿ ಬೆಳೆದಿದ್ದು ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ‘ವಾಟರ್ ಹೈಸಿಂತ್’ನಂತಹ ಕಳೆಗಳನ್ನು ಕೀಳುವುದು, ಪ್ರತಿ ತಿಂಗಳು ನೀರು ಮತ್ತು ಪರಿಸರದ ವಿಶ್ಲೇಷಣೆ, ೨೪ ಗಂಟೆ ಭದ್ರತೆ ಒದಗಿಸುವುದು ಹಾಗೂ ಯಾರೂ ಮೀನು ಕದಿಯದಂತೆ ನೋಡಿಕೊಳ್ಳಲು ಕೆರೆಯ ಸುತ್ತಲೂ ಗಸ್ತು ಕಾಯುವುದು ಮುಂತಾದ ಕಾರ್ಯಕ್ರಮದ ಮೂಲಕ ಈ ಸಂಘಟನೆಯು ಕೆರೆಯನ್ನು ರಕ್ಷಿಸುತ್ತಾ ಬಂದಿದೆ. ಈ ಸಂಘಟನೆಯು ತಮ್ಮ ಜೊತೆ ಸದಸ್ಯತ್ವ ಹೊಂದಿರುವ ದೇಶದ ಇತರ ಆಂಗ್ಲಿಂಗ್ ಮತ್ತು ಪರಿಸರ ಸಂಸ್ಥೆಗಳ ಜೊತೆ ನಿರಂತರ ವಿಚಾರ ವಿನಿಮಯ ನಡೆಸುತ್ತದೆ ಹಾಗೂ ಮೀನು ಹಿಡಿಯುವುದನ್ನು ಒಂದು ಕ್ರೀಡೆಯಾಗಿ ಪ್ರವರ್ತಿಸಲು ಶ್ರಮಿಸುತ್ತಿದೆ. ರಾಷ್ಟ್ರದಲ್ಲೇ ಅಪರೂಪ ಎನ್ನುವ ‘ಮಹಾಶೇರ್’ ತಳಿಯ ವಿನು ಕರ್ನಾಟಕದ ಕಾವೇರಿ, ಗಂಗಾ ಹಾಗೂ ಗಾಗ್ರಾ ನದಿಗಳಲ್ಲಿವೆ ಎನ್ನುತ್ತಾರೆ.

ನೂರಾರು ಸದಸ್ಯರನ್ನೊಳಗೊಂಡ ಈ ಸಂಘಟನೆಯು ಸರೋವರದ ರಕ್ಷಣೆ, ಕೆರೆಯ ಪುನರ್ ಜೀವನಗೈದು ಕೆರೆಯಲ್ಲಿನ ಬಹುತೇಕ ವರ್ಗದ ಬೃಹದಾಕಾರದ ವಿನುಗಳನ್ನು ಗಾಳ ಹಾಕಿ (ಒಂದು ಕ್ರೀಡೆಯಾಗಿರಿಸಿ, ಯಾವುದೇ ವಿನುಗಳಿಗೆ ಗಾಯಗೊಳಿಸದೆ, ನೋಯಿಸದೆ) ಹಿಡಿದು ಅವುಗಳ ತಳಿ, ಭಾರ, ಉದ್ದಗಳ ಸೇರಿದಂತೆ ಸಂಶೋಧನೆ ಗೈದು ಹಿಡಿದ ವಿನುಗಳಿಗೆ ಯಾವುದೇ ರೀತಿಯಲ್ಲಿ ಹಾನಿಗೊಳಿಸದೆ ಅವುಗಳ ಸಂತನೋತ್ಪತ್ತಿಗೆ ಮಹತ್ವ ನೀಡಿ ಮತ್ತೆ ನೀರಿಗೆ ಬಿಡಲಾಗುವುದು. ಮಾತ್ರವಲ್ಲದೆ ಜಲ ಸಂರಕ್ಷಣೆಯ ತಜ್ಞರು, ಮತ್ಸ  ರಕ್ಷಕರು, ಪರಿಸರ ಸಂಶೋಧಕರು ಹಾಗೂ ಕ್ರೀಡಾಸಕ್ತ ಮೀಂಗುಲಿಗರನ್ನೊಳಗೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಏರ್ಪಾಡಿಸಿ ಕೆರೆ ಮತ್ತು ಜಲ ಸಂರಕ್ಷಣೆ ಹಾಗೂ ಪರಿಸರಸಯ್ಯ ಚರ್ಚೆಗಳನ್ನು ಆಯೋಜಿಸಿಸುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಇಲ್ಲಿನ ನೆಲ್ಲಿಕಾರು-ಶಿರ್ತಾಡಿ ಮೂಲದ ಲೂಯಿಸ್ ಮಸ್ಕರೇನ್ಹಸ್ ಮತ್ತು ಶ್ರೀಮತಿ ಅನ್ನಾ ಮೇರಿ (ಪಿಂಟೋ) ದಂಪತಿಯ  ಏಳು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳ ಒಟ್ಟು ೧೧ ಮಂದಿ ಮಕ್ಕಳ ತುಂಬು ಸಂಸಾರದಲ್ಲಿ ೫ನೇ ಮಗುವಾಗಿ ಜನಿಸಿದ ವಿಲಿಯಂ ಮಸ್ಕರೇನ್ಹಸ್ ವಿದ್ಯಾಥಿ ಜೀವನದಲ್ಲೇ ಪರಿಸರ ಪ್ರೇಮವನ್ನು ರೂಢಿಸಿಕೊಂಡ ಪ್ರತಿಭಾ ಸಂಪನ್ನರು. ಹಲವಾರು ವರ್ಷಗಳಿಂದ  ಮುಂಬಯಿಯನ್ನು ನೆಲೆಯಾಗಿರಿಸಿ ಉದ್ಯಮಿಯಾಗಿ ಕಾರ್ಯನಿರತ ವಿಲಿಯಂ ಅವರು ಸದಾ ಗಿಜಿಗುಟ್ಟುವ ಮುಂಬಯಿಯಲ್ಲಿ ಬದುಕಿನ ಒತ್ತಡದ ನಡುವೆಯೂ ಲಾಭೋದ್ದೇಶವಿಲ್ಲದ ಈ ಸಂಘಟನೆಯ ಅಧ್ಯಕ್ಷರಾಗಿ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರ ಸಹಯೋಗದೊಂದಿಗೆ ಪರಿಸರ-ಜಲ ಮತ್ತು ಜಲಚರಗಳ ಸಂರಕ್ಷಣೆಯ ಸೇವೆಗೈಯುತ್ತಿರುವುದು ಶ್ಲಾಘನೀಯ. ಇಂತಹ ಸಂಘಟನೆಗೆ ತುಳುನಾಡಿನ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿರುವುದು ತುಳುನಾಡಿನ ಜನರಿಗೆ ಹೆಮ್ಮೆಯ ವಿಷಯವಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ