ಘರ್ಷಣೆಗೆ ಕಾಂಗ್ರೆಸ್ ನಾಯಕ ಟೈಟ್ಲರ್ ಪ್ರಚೋದನೆ?; ಜಗದೀಶ್ ಟೈಟ್ಲರ್ ಮೇಲೆ ಕೇಸು

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (1) ಅಭಿಪ್ರಾಯವಿಲ್ಲ (0)

ಭುವನೇಶ್ವರ: ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಸೇರಿದಂತೆ ಒಡಿಶಾ ವಿಧಾನಸಭೆಯ ಹೊರಗೆ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ ಹಿರಿಯ ಕಾಂಗ್ರೆಸ್ ನಾಯಕರಾದ ಜಗದೀಶ್ ಟೈಟ್ಲರ್ ಮತ್ತು ನಿರಂಜನ್ ಪಟ್ನಾಯಕ್ ಮತ್ತಿತರ ವಿರುದ್ಧ ಪೊಲೀಸರು ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ಒಡಿಶಾ ವಿಧಾನಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ ಪೊಲೀಸರ ಮೇಲೆ ಹಲ್ಲೆ ನಡೆದಿತ್ತು. ಇದರ ಸೂತ್ರಧಾರಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಜಗದೀಶ್ ಟೈಟ್ಲರ್ ಎಂದು ಹೇಳಲಾಗಿದ್ದು, ಅವರೂ ಸೇರಿದಂತೆ ಒಟ್ಟು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಬಿಜೆಡಿ ಸರಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ನೇತೃತ್ವವನ್ನು ಟೈಟ್ಲರ್ ಮತ್ತು ಪಟ್ನಾಯಕ್ ವಹಿಸಿಕೊಂಡಿದ್ದರು. ಅವರಿಂದ ಪ್ರಚೋದಿತರಾಗಿದ್ದ ಕಾರ್ಯಕರ್ತರು ಪೊಲೀಸರ ಬ್ಯಾರಿಕೇಡ್ ಲೆಕ್ಕಿಸದೆ ಹಿಂಸಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ.

ಹಿಂಸಾಚಾರಕ್ಕೆ ಟೈಟ್ಲರ್ ಪ್ರಚೋದನೆ
ಪ್ರಮೀಳಾ ಪದಿ ಎಂಬ ಭುವನೇಶ್ವರ ನಗರ ಪೊಲೀಸ್ ಠಾಣೆಯ 39ರ ಹರೆಯದ ಮಹಿಳಾ ಪೇದೆ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಬ್ಯಾರಿಕೇಡ್ ಮುರಿಯಿರಿ ಎಂದು ಜಗದೀಶ್ ಟೈಟ್ಲರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿದ ನಂತರವೇ ಈ ದಾಳಿ ನಡೆಯಿತು ಎಂದು ಪ್ರಮೀಳಾ ಆರೋಪಿಸಿದ್ದಾರೆ.

30-40 ಮಂದಿ ನನ್ನ ಮೇಲೆ ಹಲ್ಲೆ ನಡೆಸಿದಾಗ, ಹೀಗೆ ಮಾಡಬೇಡಿ ಎಂದು ಬೇಡಿಕೊಂಡೆ. ಅವರು ನನ್ನನ್ನು ಎಳೆದಾಡಿದರು, ನನಗೆ ಕಿರುಕುಳವನ್ನೂ ನೀಡಲಾಯಿತು. ನನ್ನ ಜತೆ ಅಸಭ್ಯವಾಗಿ ವರ್ತಿಸಿದರು. ಕಾಲಿನಿಂದ ಒದ್ದರು, ಹಲ್ಲೆ ನಡೆಸಿದರು. ಟೈಟ್ಲರ್ ಬ್ಯಾರಿಕೇಡ್ ಮುರಿಯಿರಿ ಎಂದು ಹೇಳಿದ ನಂತರ ನನ್ನ ಮೇಲೆ ದಾಳಿ ನಡೆಯಿತು ಎಂದು ಹಲ್ಲೆಯಿಂದ ಆಘಾತಕ್ಕೊಳಗಾಗಿರುವ ಮಹಿಳಾ ಪೇದೆ ವಿವರಣೆ ನೀಡಿದ್ದಾರೆ.

ಪೊಲೀಸರದ್ದೇ ತಪ್ಪು…
ಮಹಿಳಾ ಪೇದೆಯ ಮೇಲೆ ನಡೆದಿರುವ ಹಲ್ಲೆಗೆ ಕ್ಷಮೆ ಯಾಚಿಸಿರುವ ಜಗದೀಶ್ ಟೈಟ್ಲರ್, ತಮ್ಮದೇನೂ ತಪ್ಪಿಲ್ಲ ಎಂದು ವಾದಿಸಿದ್ದಾರೆ. ಆ ಘಟನೆಗೆ ಎರಡು ಮುಖಗಳಿವೆ. ನಮ್ಮ ಕಾರ್ಯಕರ್ತರು ಕೂಡ ಗಾಯಗೊಂಡಿದ್ದಾರೆ. ಮೊದಲು ನಮ್ಮ ಮೇಲೆ ಹಲ್ಲೆ ಮಾಡಿದ್ದು ಪೊಲೀಸರು ಎಂದು ಸಮರ್ಥಿಸಿಕೊಂಡಿದ್ದಾರೆ.

ಮಹಿಳಾ ಪೇದೆ ಮೇಲೆ ನಡೆದಿರುವ ಹಲ್ಲೆಗೆ ಕಾಂಗ್ರೆಸ್ ಪಕ್ಷವೂ ಕ್ಷಮೆ ಯಾಚಿಸಿದೆ. ಅಲ್ಲದೆ, ಟೈಟ್ಲರ್ ವಿರುದ್ಧವೂ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ.

ಮಹಿಳಾ ಪೇದೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ಕಾಂಗ್ರೆಸ್ ಕಾರ್ಯಕರ್ತರ ವರ್ತನೆಯನ್ನು ನಾನು ಖಂಡಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಪಕ್ಷವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಆದರೆ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಸಾದ್ ಹರಿಚಂದನ್ ಅವರು ಟೈಟ್ಲರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಕಾರ್ಯಕರ್ತರು ಜೈಲ್ ಭರೋಗೆ ಮುಂದಾಗಬೇಕು ಎಂದು ಟೈಟ್ಲರ್ ಹೇಳಿದ್ದರೇ ಹೊರತು, ಹಿಂಸಾಚಾರದಲ್ಲಿ ತೊಡಗುವಂತೆ ಪ್ರಚೋದನೆ ನೀಡಿರಲಿಲ್ಲ. ಹಾಗಾಗಿ ನಾಯಕರನ್ನು ಬಂಧಿಸುವ ಅಗತ್ಯ ಕಾಣುತ್ತಿಲ್ಲ ಎಂದಿದ್ದಾರೆ.

ಅಲ್ಲದೆ, ಘಟನೆಯ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಬೇಕು ಎಂದು ಹರಿಚಂದನ್ ಆಗ್ರಹಿಸಿದ್ದಾರೆ. ಮಹಿಳಾ ಪೊಲೀಸರನ್ನು ಆ ಸ್ಥಳದಲ್ಲಿ ನಿಯೋಜಿಸಬಾರದಿತ್ತು, ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೇ ಕಾರಣ ಎಂದು ಅವರು ದೂರಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (1) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು