ಪ್ರತಿಭಟನೆಗೆ ಹೆದರಲ್ಲ: ಕುಮಾರ್ ವಿಶ್ವಾಸ್

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (1) ಸಮ್ಮತ (0) ಅಸಮ್ಮತ (0) ಖಂಡನೆ (1) ಅಭಿಪ್ರಾಯವಿಲ್ಲ (0)

kumar vishwas

ಲಖನೌ: ತೀವ್ರ ಪ್ರತಿಭಟನೆಯ ನಡುವೆಯು ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿರುವ ಜನವಿಶ್ವಾಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕುಮಾರ್ ವಿಶ್ವಾಸ್ ಯಾವುದೇ ಪ್ರತಿಭಟನೆಗೆ ನಾನು ಹೆದರಲ್ಲ ಎಂದು ಭಾನುವಾರ ಹೇಳಿದ್ದಾರೆ.

ಪ್ರತಿಭಟನಾಕಾರರ ಬೆದರಿಕೆಗೆ ಹೆದರಲ್ಲ ಎಂದಿರುವ ವಿಶ್ವಾಸ್, ನನ್ನ ವಿರುದ್ಧ ಹುನ್ನಾರ ನಡೆಸಲಾಗಿದೆ. ಆದ್ದರಿಂದ ಇಂತಹ ಪ್ರತಿಭಟನೆಗಳು ನನ್ನ ನಿಲುವುಗಳನ್ನು ಬದಲಿಸುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವಾಸ್, ರಾಹುಲ್ ಅವರು ಗಾಂಧಿ ವಂಶವನ್ನು ಅಸಮಾಧಾನಗೊಳಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಂಸತ್‌ನಲ್ಲಿ ಯಾವುದೇ ವಿಷಯಗಳ ಬಗ್ಗೆ ಒಂದು ಪ್ರಶ್ನೆಯನ್ನು ಕೇಳಿಲ್ಲ ಎಂದು ಆರೋಪಿಸಿದ್ದಾರೆ.

ದಲಿತರ ಮನೆಯನ್ನು ತಿನ್ನುವ ಮುನ್ನ, ರಾಹುಲ್ ಅವರು ಒಂದು ಬಾರಿ ದಲಿತರು ತಮ್ಮ ಮನೆಯಲ್ಲಿ ಏನು ಸೇವಿಸುತ್ತಾರೆ ಎಂಬುದರ ಕಡೆಗೆ ಗಮನ ಹರಿಸಬೇಕು ಎಂದು ವಿಶ್ವಾಸ್ ಹೇಳಿದ್ದಾರೆ.

ಇನ್ನೂ ಸೋನಿಯಾ ಗಾಂಧಿಯವರು ತಮ್ಮ ಆರೋಗ್ಯದ ಸ್ಥಿತಿ ಸರಿಯಿಲ್ಲ ಎಂದು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ ಅವರಿಗೆ ಭಾರತದಲ್ಲಿರುವ ವೈದ್ಯರ ಮೇಲೆ ನಂಬಿಕೆ ಇಲ್ಲ ಎಂದರ್ಥ ಎಂದು ವಿಶ್ವಾಸ್ ದೂರಿದ್ದಾರೆ.

ಕಪ್ಪು ಧ್ವಜ ತೋರಿಸುವುದರಿಂದ ಅದಕ್ಕೆ ಹೆದರಿ ನಾವು ಇಟ್ಟ ಹೆಜ್ಜೆ ಹಿಂದಿಡುತ್ತೇವೆ ಎಂದು ತಿಳಿದುಕೊಂಡಿದ್ದರೆ, ಅದು ಅವರ ಭ್ರಮೆ. ಯಾವುದೇ ಕಪ್ಪು ಭಾವುಟ ತೋರಿಸಿ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಜನರು ನನ್ನ ವಿರುದ್ಧ ನೇರವಾಗಿ ದಾಳಿ ಮಾಡಲು ಬಂದಿದ್ದಾರೆ, ಹಿಂದಿನಿಂದ ಬರದೇ ಎದುರಿಗೆ ಬಂದು ಯುದ್ಧ ಮಾಡುವುದು ಇಷ್ಟವಾಗಿದೆ ಎಂದು ವಿಶ್ವಾಸ್ ಹೇಳಿದ್ದಾರೆ.

ವಿಶ್ವಾಸ್ ಜೋಕರ್ ಇದ್ದಂತೆ ಎಂಬ ಸಮಾಜವಾದಿ ಪಕ್ಷದ ನಾಯಕ ಬೇನಿ ಪ್ರಸಾದ್ ವರ್ಮಾ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರ್ ವಿಶ್ವಾಸ್, ಕಳ್ಳನಿಗಿಂತ ಜೋಕರ್ ಉತ್ತಮ ಎಂದಿದ್ದಾರೆ.

ಕುಮಾರ್ ವಿಶ್ವಾಸ್ ಗೆ ಕಪ್ಪು ಧ್ವಜ ಪ್ರದರ್ಶನ

ಲಖನೌ: ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ ಪ್ರತಿಭಟನಾಕಾರರು ಭಾನುವಾರ ಕಪ್ಪು ಬಾವುಟ ಹಾರಿಸಿದ್ದಾರೆ.

ಇಂದು ಕುಮಾರ್ ವಿಶ್ವಾಸ್ ಅವರು ಜನವಿಸ್ವಾಸ್ ರ್ಯಾಲಿ ಕೈಗೊಳ್ಳಲು ಮುಂದಾಗಿದ್ದರು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕಪ್ಪು ಧ್ವಜ ಹಾರಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ, ಲಖನೌದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಆಮ್ ಆದ್ಮಿ ಪಕ್ಷದ ನೇತಾರ ಕುಮಾರ್ ವಿಶ್ವಾಸ್ ಮೇಲೆ ಮೊಟ್ಟೆ ಎಸೆದಿದ್ದರು.

ವಿಶ್ವಾಸ್ ಅವರ ಕವನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪ್ರತಿಭಟಿಸಿದ ಕೆಲವರು ಮೊಟ್ಟೆ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.ಇದರ ಬೆನ್ನಲ್ಲೆ, ಇಂದು ಕುಮಾರ್ ವಿಶ್ವಾಸ್ ನೇತೃತ್ವದಲ್ಲಿ ನಡೆಯಬೇಕಿದ್ದ ಜನವಿಶ್ವಾಸ್ ರ್ಯಾಲಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಕಪ್ಪು ಧ್ವಜ ಹಾರಿಸಿದ್ದಾರೆ.

ತಾನು ರಾಜಕಾರಣಕ್ಕೆ ಬರುವ ಮುನ್ನವೇ ವಿವಿಧ ಕವಿ ಸಮ್ಮೇಳನಗಳಲ್ಲಿ ಆ ಕವನವನ್ನು ವಾಚಿಸಿದ್ದೆ. ನಾನು ಯಾರನ್ನೂ ಉದ್ದೇಶಪೂರ್ವಕವಾಗಿ ನೋಯಿಸಿಲ್ಲ. ಕವಿತೆಗೆ ಸಂಬಂಧಪಟ್ಟಂತೆ ನಾನು ಈ ಮೊದಲೇ ಕ್ಷಮೆಯಾಚಿಸಿದ್ದೇನೆ ಎಂದು ನಿನ್ನೆ ಹೇಳಿದ್ದರು.
(ಕನ್ನಡಪ್ರಭ)

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (1) ಸಮ್ಮತ (0) ಅಸಮ್ಮತ (0) ಖಂಡನೆ (1) ಅಭಿಪ್ರಾಯವಿಲ್ಲ (0)

About ಗ.ಕ ವಾರ್ತಾ ವಿಭಾಗ ದುಬೈ, ಗಲ್ಫ್

ಗಲ್ಫ್ ಕನ್ನಡಿಗ ವಾರ್ತಾ ವಿಭಾಗ ದುಬೈ... ಹೆಚ್ಚಿನ ಮಾಹಿತಿಗೆ - Contact: uae@gulfkannadiga.com