ನ್ಯಾಯಮೂರ್ತಿ ನೇಮಕ ವಿವಾದ ಮೋದಿ ಸರ್ಕಾರಕ್ಕೆ ಸಿಜೆ ಲೋಧಾ ಚಾಟಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

LODHA

ನವದೆಹಲಿ: ಸುಪ್ರೀಂಕೋರ್ಟ್‌ ನ್ಯಾಯ­ಮೂರ್ತಿ­ಗಳ ಸ್ಥಾನಕ್ಕೆ ಶಿಫಾರಸು ಮಾಡಿದ್ದ ನಾಲ್ವರ ಪೈಕಿ  ಹಿರಿಯ ವಕೀಲ ಗೋಪಾಲ ಸುಬ್ರಮಣಿಯಮ್‌ ಹೆಸ­ರನ್ನು ಕೈಬಿಟ್ಟಿರುವುದಕ್ಕೆ ಮುಖ್ಯನ್ಯಾಯ­ಮೂರ್ತಿ ಆರ್‌.ಎಂ.ಲೋಧಾ ಅವರು ನರೇಂದ್ರ ಮೋದಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿ ಮೌನ ಮುರಿ­­ದಿರುವ ನ್ಯಾ. ಲೋಧಾ, ‘ನನ್ನ ಅರಿವಿಗೆ ಬಾರದಂತೆ ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತ­ಪಡಿಸಿದ್ದಾರೆ.

ನ್ಯಾಯಮೂರ್ತಿ ಬಿ.ಎಸ್‌.­ಚೌಹಾಣ್‌ ಅವರಿಗೆ ಮಂಗಳ­ವಾರ ಹಮ್ಮಿ­ಕೊಂಡಿದ್ದ ಬೀಳ್ಕೊಡುಗೆಯಲ್ಲಿ  ಮಾತನಾಡಿ, ‘ನಾನು ಹಾಗೂ ನ್ಯಾಯ­ಮೂರ್ತಿಗಳ ನೇಮ­ಕಾತಿ ಸಮಿತಿಯ ನಾಲ್ವರು ಸದ­ಸ್ಯರು ಪ್ರತಿಭಾವಂತರನ್ನು ಗುರುತಿಸಿ  ನಾಲ್ವರ ಹೆಸರನ್ನು ಮೇ 6ರಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು’ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಧಾ ಹೇಳಿದ್ದು:  ‘ಜೂನ್‌ 28ರಂದು ನಾನು ವಿದೇಶ­ದಿಂದ ಬಂದೆ.  ಆಗ ನನ್ನ ಮುಂದೆ ಕಾನೂನು  ಸಚಿವಾ­ಲಯದ ಕಡತ­ ಇತ್ತು. ಸುಪ್ರೀಂ­ಕೋರ್ಟ್‌ ನ್ಯಾಯ­ಮೂರ್ತಿ­­ಗಳ ಸ್ಥಾನಕ್ಕೆ  ಶಿಫಾರಸು ಮಾಡಿದ್ದ ನಾಲ್ವರ ಪೈಕಿ ಗೋಪಾಲ ಸುಬ್ರಮಣಿಯಮ್‌್ ಅವರ ಹೆಸರು ಕೈಬಿಟ್ಟಿರು­ವುದಾಗಿ ಅದರಲ್ಲಿ  ಸೂಚಿಸಲಾಗಿತ್ತು.

‘ತಮ್ಮ ಹೆಸರು ಕೈಬಿಟ್ಟಿರುವುದಕ್ಕೆ ಅಸಮಾಧಾನಗೊಂಡು ಸುಬ್ರಮಣಿ­ಯಮ್‌ ಅವರು ಬಹಿರಂಗ ಪತ್ರ ಬರೆದಿರುವುದು ಸರಿಯಲ್ಲ. ಜೂನ್‌ 25ರಂದು ನಾನು ಜೋಹಾನ್ಸ್‌­ಬರ್ಗ್‌­ನಲ್ಲಿದ್ದಾಗ ಸುಬ್ರಮಣಿ­ಯಮ್‌ ಜತೆ ಮಾತ­ನಾಡಿದ್ದೆ. ಮಾಧ್ಯಮ ವರದಿ­ಗಳಿಂದ ಅವರು ವಿಚಲಿತ­ರಾದಂತಿದ್ದರು. ವಿದೇಶ­ದಿಂದ ವಾಪಸ್‌ ಬಂದ ಬಳಿಕ ಈ ಬಗ್ಗೆ ಮಾತನಾಡೋಣ ಎಂದು ಹೇಳಿದ್ದೆ. ಆದರೆ ಅವರು ಅಷ್ಟರೊಳಗೆ ಬಹಿ­ರಂಗ ಪತ್ರ ಬರೆದಿ­ರುವುದು ಆಘಾತ, ಅಸಮಾ­ಧಾನ ತಂದಿದೆ.

‘20 ವರ್ಷಗಳಲ್ಲಿ ನ್ಯಾಯಾಂಗದ ಸ್ವಾತಂತ್ರ್ಯಕ್ಕಾಗಿ ಹೋರಾ­­­­­ಡಿದ್ದೇನೆ. ಯಾವುದೇ ಕಾರ­ಣಕ್ಕೂ ಈ ಒಂದು ವಿಚಾರದಲ್ಲಿ ರಾಜಿ ಮಾಡಿ­ಕೊಳ್ಳಲು  ಸಾಧ್ಯವಿಲ್ಲ. ಒಂದು ವೇಳೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಆದಲ್ಲಿ ನಾನೇ ಮೊದಲು ರಾಜೀನಾಮೆ ನೀಡುತ್ತೇನೆ’ ಎಂದೂ ಲೋಧಾ ನುಡಿದರು.

ನ್ಯಾಯಮೂರ್ತಿಗಳ ಸ್ಥಾನಕ್ಕೆ ತಮ್ಮ ಹೆಸರು ಕೈಬಿಟ್ಟಿರುವುದಕ್ಕೆ ಅಸ­ಮಾಧಾನ­ಗೊಂಡಿದ್ದ ಸುಬ್ರಮಣಿ­ಯಮ್‌, ಲೋಧಾ ಅವರಿಗೆ ಕಳೆದ ವಾರ ಪತ್ರ ಬರೆದಿದ್ದರು. ತಮ್ಮ ಹೆಸರನ್ನು ವಾಪಸ್‌್ ಪಡೆಯುವಂತೆ ಅವರಿಗೆ ಮನವಿ ಮಾಡಿಕೊಂಡಿದ್ದರು.

ಸಿಬಿಐ ಮತ್ತು ಐಬಿ (ಗುಪ್ತಚರದಳ) ‘ವ್ಯತಿರಿಕ್ತ’ ವರದಿ ಸಲ್ಲಿಸಿದ ಮೇಲೆ ಕೇಂದ್ರ ಸರ್ಕಾರ ತಮ್ಮ ಹೆಸರು ಕೈಬಿ­ಟ್ಟಿದ್ದಕ್ಕೆ ಸುಬ್ರಮಣಿಯಮ್‌ ಸಿಟ್ಟಿಗೆ­ದ್ದಿದ್ದರು. ತಾವು ಸುಪ್ರೀಂಕೋರ್ಟ್‌ ನ್ಯಾಯ­ಮೂರ್ತಿಯಾಗುವುದನ್ನು ತಡೆ­ಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಸಿಬಿಐನಿಂದ ವ್ಯತಿರಿಕ್ತ ವರದಿ ತರಿಸಿಕೊಂಡಿತ್ತು ಎಂದು ಆರೋಪಿಸಿದ್ದರು.

ಪ್ರಾಮಾಣಿಕತೆ ಹಾಗೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ನಿಲುವಿ­ನಿಂ­ದಾ­ಗಿಯೇ ತಮ್ಮನ್ನು ಬದಿಗೆ ಸರಿಸ­ಲಾಯಿತು ಎಂದೂ ಸುಬ್ರಮಣಿಯಮ್‌ ಆರೋಪಿದ್ದರು.

ಆದರೆ, ಈ ಹಿಂದೆಯೂ  ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು­ಗೊಂಡವರ ಹೆಸರು ಕೈಬಿಟ್ಟಿದ್ದನ್ನು ಉದಾಹರಿಸಿ ಮೋದಿ ಸರ್ಕಾರ ತನ್ನನ್ನು ಸಮರ್ಥಿಸಿಕೊಂಡಿತು.

(ಪ್ರಜಾವಾಣಿ)

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು