ಡೀಸೆಲ್ ಬೆಲೆಏರಿಕೆಗೆ ಹೆಬ್ಬೆರಳೆತ್ತಿದ ಪ್ರಧಾನಿ ಸಿಂಗ್

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ನವದೆಹಲಿ, ಸೆ. 15 : ಏರಿಸಿದ ಡೀಸೆಲ್ ಬೆಲೆ ಇಳಿಸಲು ಯುಪಿ‌ಎ ಅಂಗಪಕ್ಷವಾದ ತೃಣಮೂಲ ಕಾಂಗ್ರೆಸ್ ಡೆಡ್‌ಲೈನ್ ನೀಡಿದ್ದರೂ ತಲೆಕೆಡಿಸಿಕೊಳ್ಳದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು, ಡೀಸೆಲ್ ಬೆಲೆ ಏರಿಕೆಯನ್ನು ಶನಿವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರ ಸರಕಾರ ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದು, ಸಂಕಷ್ಟದಲ್ಲಿರುವ ದೇಶದ ಆರ್ಥಿಕ ಪರಿಸ್ಥಿತಿ, ಪ್ರಸ್ತುತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಚೇತರಿಕೆ ಕಾಣುವ ವಿಶ್ವಾಸವಿದೆ, ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ ಎಂದು ಅವರು ಹೇಳಿರುವುದು ವಿರೋಧ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ಸನ್ನು ಮತ್ತಷ್ಟು ಕೆರಳಿಸುವ ಸಾಧ್ಯತೆಯಿದೆ.

12ನೇ ಪಂಚವಾರ್ಷಿಕ ಯೋಜನೆಯ ದಾಖಲಾತಿಯನ್ನು ಅನುಮತಿ ನೀಡಲು ಶನಿವಾರ ಕರೆಯಲಾಗಿದ್ದ ಯೋಜನಾ ಆಯೋಗದ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ, “ಡೀಸೆಲ್ ಬೆಲೆಯನ್ನು ಏರಿಸಿ ಕೇಂದ್ರ ಸರಕಾರ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ” ಎಂದರು.

ಭಾರತ ಇಂಧನ ಕೊರತೆ ಎದುರಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ ಮನಮೋಹನ ಸಿಂಗ್ ಅವರು, ದೇಶದ ಇಂಧನ ನೀತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ. ನಾವು ಇಂಧನ ಕೊರತೆ ಎದುರಿಸುತ್ತಿದ್ದೇವೆ, ಆಮದು ಅವಲಂಬನೆ ಹೆಚ್ಚಾಗುತ್ತಿದೆ. ಇಂಧನ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಮಿತವ್ಯಯವಾಗಿ ಬಳಸುವ ನಿಟ್ಟಿನಲ್ಲಿ ನಾವು ಚಿಂತಿಸಬೇಕಿದೆ ಎಂದು ನುಡಿದರು.

ಸೆಪ್ಟೆಂಬರ್ 13ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಡೀಸೆಲ್ ಬೆಲೆಯನ್ನು ಲೀಟರಿಗೆ 5 ರು.ನಷ್ಟು ಸರಕಾರ ಏರಿಸಿದೆ. ಗೃಹ ಅಡುಗೆ ಅನಿಲ ಸಿಲಿಂಡರ್ ಬಳಕೆಯನ್ನು ಕೂಡ ವರ್ಷಕ್ಕೆ 6ಕ್ಕೆ ಮಿತಿಗೊಳಿಸಿದೆ. ಪೆಟ್ರೋಲ್ ಬೆಲೆ ಏರಿಕೆಗೆ ಕೂಡ ಸಮ್ಮತಿ ನೀಡುವ ಲಕ್ಷಣಗಳಿವೆ. ಈ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ ಅನಿರ್ದಿಷ್ಟ ಕಾಲ ಮುಷ್ಕರ ಹೂಡುವುದಾಗಿ ಕರ್ನಾಟಕದ ಲಾರಿ ಮಾಲಿಕರ ಸಂಘ ಬೆದರಿಕೆಯೊಡ್ಡಿದೆ.

ಪ್ರವೇಶ ತೆರಿಗೆ ಕರ್ನಾಟಕದಲ್ಲಿ ಅಧಿಕವಿರುವುದರಿಂದ ಬೆಲೆ ಏರಿಕೆಯ ಪ್ರಮಾಣವೂ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಅಧಿಕವಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ ಡೀಸೆಲ್ ಬೆಲೆ 6.13 ರು.ನಷ್ಟು ಏರಿಕೆಯಾಗಿದ್ದು, ಲೀಟರಿಗೆ 51.24 ರು. ಬೆಲೆಗೆ ಮಾರಾಟವಾಗುತ್ತಿದೆ.

ಒನಿಂಡಿಯಾ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ