ಮಾಲ್ಡೀವ್ಸ್ ಕನ್ನಡ ಬಳಗದ ಉದಯ..

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಬಾಂಡೋಸ್ ದ್ವೀಪ : ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಮತ್ತು ಮಾಲ್ಡೀವ್ಸ್ ಕನ್ನಡಿಗರ ಸಂಯುಕ್ತ ಆಶ್ರಯದಲ್ಲಿ ೬ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಮಾಲ್ಡೀವ್ಸ್ ಕನ್ನಡಿಗರ ಬಳಗ ಉದ್ಘಾಟನಾ ಸಮಾರಂಭವನ್ನು ಮೇ ೫ರಂದು ಬಾಂಡೋಸ್ ಐಲ್ಯಾಂಡ್ ರೆಸಾರ್ಟ್‌ನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಾಲ್ಡೀವ್ಸ್ ಕನ್ನಡಿಗರ ಬಳಗದ ಉದ್ಘಾಟನೆಯನ್ನು ನೂತನ ಅಧ್ಯಕ್ಷ ಡಾ.ಶ್ರೀನಿವಾಸ್ ಶೆಟ್ಟಿ ಜ್ಯೋತಿ ಬೆಳಗಿಸುವುದರ ಮೂಲಕ ನೆರವೇರಿಸಿದರು. ತಮ್ಮ ಉದ್ಘಾಟನ ಭಾಷಣದಲ್ಲಿ, ಮಾಲ್ಡೀವ್ಸ್ ರಾಷ್ಟ್ರದ ವಿವಿಧ ದ್ವೀಪಗಳಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಒಂದೆಡೆ ಸೇರಲು ಒಂದು ವೇದಿಕೆಯ ಅಗತ್ಯವಿತ್ತು ಅದನ್ನು ವಿಶ್ವಕನ್ನಡ ಸಂಸ್ಕೃತಿ ಸಮ್ಮೀಳನ ಸಮಿತಿಯು ಕಾರ್ಯಗತಗೊಳಿಸುವಲ್ಲಿ ಸಫಲವಾಗಿದೆ ಮುಂಬರುವ ಪ್ರಥಮ ವಾರ್ಷಿಕೋತ್ಸವನ್ನು ಅದ್ಧೂರಿಯಿಂದ ನೆರವೇರಿಸಲು ನಾವೆಲ್ಲರೂ ಶ್ರಮಿಸುತ್ತೇವೆ ಎಂದರು.

ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಸ್ಥಾಪಕಧ್ಯಕ್ಷ ಇಂ.ಕೆ.ಪಿ. ಮಂಜುನಾಥ್ ಸಾಗರ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ನಾವು ಯಾವುದೇ ದೇಶದಲ್ಲಿ ಕನಿಷ್ಠ ೨೫ ಜನ ಕನ್ನಡಿಗರು ವಾಸಿಸುತ್ತಿದ್ದರೆ ಆ ದೇಶದಲ್ಲಿ ಕನ್ನಡ ಬಳಗವನ್ನು ಹುಟ್ಟುಹಾಕುವ ಯೋಜನೆ ಯೊಂದನ್ನು ಹಮ್ಮಿಕೊಂಡಿ ದ್ದೇವೆ. ಅದರ ಅಂಗವಾಗಿ ಮಾಲ್ಡೀವ್ಸ್ ಕನ್ನಡಿಗರ ಸಹಕಾರದೊಂದಿಗೆ ನಮ್ಮ ಪ್ರಥಮ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ. ಇಂದು ಮಾಲ್ಡೀವ್ಸ್ ಕನ್ನಡ ಬಳಗ ಉದಯಿಸಿರುವುದು ನಮ್ಮಗೆಲ್ಲರಿಗೂ ಅತ್ಯಂತ ಸಂತೋಷವನ್ನು ತಂದಿದೆ ಹಾಗೂ ಇದರಿಂದಾಗಿ ಹೊಸದಾಗಿ ಬರುವ ಕನ್ನಡಿಗರಿಗೆ ಕನ್ನಡ ಬಳಗಗಳಿಂದ ಮಾಹಿತಿ ಮತ್ತು ಮಾರ್ಗದರ್ಶನ ದೊರೆಯುವುದರಿಂದ ಯಾವುದೇ ಭಯವಿಲ್ಲದೆ ವಿದೇಶಿ ನೆಲದಲ್ಲಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.

ಕನ್ನಡ ಬಳಗದ ಗೌರವಾಧ್ಯಕ್ಷರಾದ ಡಾ. ಪ್ರವೀಣ್ ಕುಮಾರ್ ಶೆಟ್ಟಿಯವರು ಮಾತನಾಡಿ “ಮಾಲ್ಡೀವ್ಸ್‌ನ ಬೇರೆ ಬೇರೆ ದ್ವೀಪಗಳಲ್ಲಿ ಇನ್ನೂರಕ್ಕೂ ಹೆಚ್ಚು ಕನ್ನಡಿಗರಿದ್ದಾರೆ, ಇವರೆಲ್ಲರ ನಡುವೆ ಸಂಪರ್ಕವನ್ನೇರ್ಪಡಿಸುವ ಕೆಲಸವನ್ನು ಆದಷ್ಟು ಶೀಘ್ರವಾಗಿ ನಾವು ಮಾಡಬೇಕಾಗಿದೆ” ಎಂದರು.

ಪ್ರಧಾನ ಕಾರ್ಯದರ್ಶಿ ಶ್ರೀ ಬಸವರಾಜ್ ಅವರು ಮಾತನಾಡಿ ಮಾಲ್ಡೀವ್ಸ್‌ನಲ್ಲಿ ೧೪೦೦ಕ್ಕೂ ಹೆಚ್ಚು ದ್ವೀಪಗಳಿದ್ದು, ನಾನ್ನೂರಕ್ಕೂ ಹೆಚ್ಚು ದ್ವೀಪಗಳಲ್ಲಿ ಜನ ವಾಸಿಸುತ್ತಿದ್ದಾರೆ. ನಮ್ಮ ಕನ್ನಡಿಗರೂ ಸಹ ವಿವಿಧ ದ್ವೀಪಗಳಲ್ಲಿ ನೆಲೆಸಿದ್ದಾರೆ. ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ  ಪ್ರಯಾಣಿಸಲು ದುಬಾರಿ ವೆಚ್ಚ ತಗಲುತ್ತದೆ ಆದರೆ ಕನ್ನಡ ಬಳಗವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಖರ್ಚನ್ನು ಲೆಕ್ಕಿಸದೆ ಶ್ರಮಿಸೋಣ ಎಂದರು.

ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ನಾಗೂರ್ ಬಿಜಾಪುರ ಅವರು “ವಿದೇಶದಲ್ಲಿರುವ ಕನ್ನಡ ಸಂಘಟನೆಗಳೊಂದಿಗೆ ಸೌಹಾರ್ಧ ಬಾಂಧವ್ಯ ಹೊಂದುವುದರಿಂದ ಅಲ್ಲಿಯ ಕನ್ನಡಿಗರ ಮಕ್ಕಳಿಗೆ ಕರ್ನಾಟಕ ಮತ್ತು ಕನ್ನಡದ ಮೇಲೆ ಅಭಿಮಾನ ಮೂಡುವಂತೆ ಮಾಡಬಹುವುದು ಮತ್ತು ಅದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಕೂಡ ಆಗಿದೆ” ಎಂದರು.

ಇದೇ ಸಂದರ್ಭದಲ್ಲಿ ಶ್ರೀ ರೋಹಿದಾಸ್ ನಾಯಕ ಕುಮಟ, ಶ್ರೀಮತಿ ಪ್ರಮೀಳ ಪ್ರಕಾಶ್ ಬೆಂಗಳೂರು ಮತ್ತು ಶ್ರೀ ಪ್ರಹ್ಲಾದ ಬೋವಿ ಬಾಗಲಕೋಟೆ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ, ಬೆಂಗಳೂರಿನ ಸ್ನೇಹಾ ಮಹಿಳಾ ವೀರಗಾಸೆ ತಂಡದಿಂದ ಜಾನಪದ ವೀರಗಾಸೆ, ಸಾಗರದ ಶ್ರೀಮತಿ ಚೂಡಾಮಣಿ ಅವರಿಂದ ದೊಳ್ಳು ಕುಣಿತ, ಕಿರುತೆರೆಯ ನಟ ಎಂ.ಡಿ. ಕೌಶಿಕ್ ಅವರಿಂದ ಜಾದೂ ಪ್ರದರ್ಶನ ಮತ್ತು ಗಣೇಶ್ ಪಾಟೀಲ್ ಮಣಿಪಾಲ, ಮೀನಾಕ್ಷಿ ಉಡುಪಿ ಹಾಗೂ ಮನು ಮಂಗಳೂರು ಇವರಿಂದ ರಸಮಂಜರಿ ಜರಗಿದವು.ಶ್ರೀ ಜಯಪ್ರಕಾಶ್‌ರಾವ್ ಪುತ್ತೂರು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಮಾಧ್ಯಮ ಗೋಷ್ಠಿ ಜರುಗಿತು. ಗೋಷ್ಠಿಯಲ್ಲಿ ರಾಜು ಅಡಕಳ್ಳಿ ಬೆಂಗಳೂರು, ಶಿವಾನಂದ್ ಸೋಮಪ್ಪ ಬೆಂಗಳೂರು, ಜಗನ್ನಾಥ್ ಸಣ್ಣೂರು ಸೇಡಂ, ಯಾಕೂಬ್ ಖಾದರ್ ಗುಲ್ವಾಡಿ ಕುಂದಾಪುರ ಮತ್ತು ನಾಗೇಶ್ ಬಳ್ಳಾರಿ ಪಾಲ್ಗೊಂಡಿದ್ದರು.

ಶ್ರೀಮತಿ ಜಯಶ್ರೀ ನಾಗೂರು ಪ್ರಾರ್ಥಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ತಾಂತ್ರಿಕ ನಿರ್ವಾಹಕರು