ವಿಶಾಖಪಟ್ಟಣದಲ್ಲಿ ಇಂದು ಯುವಿ ಕೇಂದ್ರಬಿಂದು: ಭಾರತ ನ್ಯೂಜಿಲೆಂಡ್ ಟಿ-20 ಪಂದ್ಯ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಶಾಖಪಟ್ಟಣಂ: ಕ್ಯಾನ್ಸರ್ ರೋಗದಿಂದ ಚೇತರಿಸಿಕೊಂಡು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕಾಲಿಟ್ಟ, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಶನಿವಾರ ವಿಶಾಖಪಟ್ಟಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯದ ಕೇಂದ್ರಬಿಂದು ಎನಿಸಿದ್ದಾರೆ.

2011ರ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದ ಒಂದು ತಿಂಗಳಲ್ಲೇ ಯುವರಾಜ್ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆಂಬ ಅಂಶ ಬಯಲಾಯಿತು. ಅವರ ಕ್ರಿಕೆಟ್ ಬದುಕೇ ಅತಂತ್ರಕ್ಕೆ ತಲುಪಿತು. ಆದರೆ ಕ್ಯಾನ್ಸರ್ ಗೆದ್ದು ಬಂದ ಯುವಿ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

30 ವರ್ಷದ ಯುವರಾಜ್, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಿರಂತರ ಅಭ್ಯಾಸ ನಡೆಸಿ ಮತ್ತೆ ಅಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಪಂದ್ಯಕ್ಕೆ ಮುನ್ನ ಅವರು ಕೆಲವ ವಿಚಾರಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ.

ಒಂಬತ್ತು ತಿಂಗಳ ವಿರಾಮದ ಬಳಿಕ ಬದುಕನ್ನು ಗೆದ್ದು ಬಂದಿರುವ ಯುವರಾಜ್ ಸಿಂಗ್ ಪೀಳಿಗೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದಾರೆ. ಭಾರತ ತಂಡದ ಬಣ್ಣದ ಉಡುಪು ತೊಟ್ಟು ಯುವಿ ಅಂಗಣದಲ್ಲಿ ಕಾಣಿಸಿಕೊಂಡರೆ ಅದಕ್ಕಿಂತ ಸಂಭ್ರಮ ಬೇರೇನೂ ಇಲ್ಲ ಎಂದನಿಸುತ್ತದೆ.

ಯುವರಾಜ್ ಸಿಂಗ್ ಶನಿವಾರದ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೊ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಯುವಿ ಮಾತ್ರ ಆಡುವ ಆತ್ಮವಿಶ್ವಾಸ ಹೊಂದಿದ್ದಾರೆ.

ಎನ್‌ಸಿಎನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದೇನೆ, ವಿಶ್ವಕಪ್‌ಗೆ ಮುನ್ನ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯ ಆಡುವ ಅವಕಾಶ ಸಿಗಬಹುದು. ನಾನು ಸಾಕಷ್ಟು ಅಭ್ಯಾಸ ಪಂದ್ಯಗಳನ್ನಾಡಿದ್ದೇನೆ” ಎಂದು ಯುವಿ ಹೇಳಿದ್ದಾರೆ.

2011, ಜನವರಿ 9 ರ ನಂತರ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರಲಿಲ್ಲ. ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಪರ್ಧಿಸುತ್ತಿರುವ ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧ ನಡೆಯುವ ಎರಡು ಪಂದ್ಯಗಳು ಅತ್ಯಂತ ಪ್ರಮುಖವಾಗಿದೆ.

ಟೆಸ್ಟ್ ಸರಣಿಯಲ್ಲಿ 2-0 ಯಶಸ್ಸು ಕಂಡಿರುವ ಭಾರತ ಮಿನಿ ಸಮರದಲ್ಲೂ ಜಯ ಸಾಧಿಸುವ ಆತ್ಮವಿಶ್ವಾಸ ಹೊಂದಿದೆ. ತಂಡಕ್ಕೆ ಹರ್ಭಜನ್ ಸಿಂಗ್ ಸೇರ್ಪಡೆಗೊಂಡಿರುವುದು ಬೌಲಿಂಗ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಯುವರಾಜ್ ಹಾಗೂ ಹರ್ಭಜನ್ ಇಬ್ಬರೂ ಟಿ-20 ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಆರಂಭದಲ್ಲಿ ವೀರೇಂದ್ರ ಸೆಹವಾಗ್ ಮತ್ತು ಗೌತಮ್ ಗಂಭೀರ್, ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಉತ್ತಮ ಆಟವಾಡಿದರೆ ಭಾರತವನ್ನು ಸೋಲಿಸಲು ಪ್ರವಾಸಿ ತಂಡ ಹರ ಸಾಹಸ ಪಡಬೇಕಾಗುತ್ತದೆ.

ತಂಡಗಳ ವಿವರ ಭಾರತ ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹವಾಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಹರ್‌ಭಜನ್ ಸಿಂಗ್, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಲಕ್ಷ್ಮೀಪತಿ ಬಾಲಾಜಿ, ಅಶೋಕ್ ದಿಂಡಾ, ಪಿಯೂಷ್ ಚಾವ್ಲಾ ಮತ್ತು ಮನೋಜ್ ತಿವಾರಿ.

ನ್ಯೂಜಿಲೆಂಡ್ ರಾಸ್ ಟೇಲರ್ (ನಾಯಕ), ಬ್ರೆಂಡಾನ್ ಮೆಕಲಮ್, ಮಾರ್ಟಿನ್ ಗುಪ್ಟಿಲ್, ಕೇನ್ ವಿಲಿಯಮ್ಸನ್, ಜೇಮ್ಸ್ ಫ್ರಾಂಕ್ಲಿನ್, ರಾಬ್ ನಿಕೋಲ್, ಜಾಕೊಬ್ ಓರಮ್, ಡೌಗ್ ಬ್ರಾಸ್‌ವೆಲ್, ಡೇನಿಯಲ್ ವೆಟೋರಿ, ಟಿಮ್ ಸೌಥೀ, ಆ್ಯಡಂ ಗಿಲ್‌ಕ್ರಿಸ್ಟ್, ನಥಾನ್ ಮೆಕ್‌ಲಮ್, ರೋನಿ ಹಿರಾ, ಕೇಯಲ್ ಮಿಲ್ಸ್, ಬಿ.ಜೆ. ವಾಟ್ಲಿಂಗ್.

ಪಂದ್ಯ ಆರಂಭ: ಸಂಜೆ 7 ಗಂಟೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು