ಐಪಿಎಲ್ 2014 : 24 ಆಟಗಾರರನ್ನು ಉಳಿಸಿಕೊಂಡ 7 ಫ್ರಾಂಚೈಸಿಗಳು

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

Dhoni-pollardಹೊಸದಿಲ್ಲಿ, ಜ.10: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಬಲಿಷ್ಠ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಂಬರುವ 7ನೆ ಆವೃತ್ತಿಯ ಐಪಿಎಲ್‌ಗೆ ಎಲ್ಲಾ ಐವರು ಆಟಗಾರರನ್ನು ತನ್ನಲ್ಲೆ ಉಳಿಸಿಕೊಂಡಿವೆ.

7 ಫ್ರಾಂಚೈಸಿಗಳು ಭಾರತದ ಖ್ಯಾತ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿವೆ. ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕ ಎಂಎಸ್ ಧೋನಿ,ರವೀಂದ್ರ ಜಡೇಜ , ಸುರೇಶ್‌ರೈನಾ, ಆರ್. ಅಶ್ವಿನ್ ಹಾಗೂ ವೆಸ್ಟ್‌ಇಂಡೀಸ್‌ನ ಡ್ವೇನ್ ಬ್ರಾವೊರನ್ನು ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಒಡೆತನದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ, ರೈನಾ ಹಾಗೂ ಸ್ಪಿನ್ನರ್ ಅಶ್ವಿನ್ ಕಳೆದ ಆರು ಆವೃತ್ತಿಯ ಐಪಿಎಲ್‌ನಲ್ಲೂ ಚೆನ್ನೈ ತಂಡದಲ್ಲಿ ಆಡಿದ್ದಾರೆ. ಜಡೇಜ ಹಾಗೂ ಬ್ರಾವೊ ಕಳೆದ ವರ್ಷ ಬೇರೆ ಫ್ರಾಂಚೈಸಿಗಳಿಂದ ಚೆನ್ನೈ ತಂಡಕ್ಕೆ ಸೇರ್ಪಡೆಯಾಗಿದ್ದರು.

ಚೆನ್ನೈ ತಂಡದ ಪ್ರಮುಖ ಆಟಗಾರರಾದ ಮೈಕಲ್ ಹಸ್ಸಿ, ಅಲ್ಬಿ ಮೊರ್ಕೆಲ್ ಹಾಗೂ ಮುರಳಿ ವಿಜಯ್‌ರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿಲ್ಲ. ತಂಡದ ಆಟಗಾರರನ್ನು ಮರಳಿ ಸೇರಿಸಿಕೊಳ್ಳಲು ಅವಕಾಶ ನೀಡುವ ಜೋಕರ್ ಕಾರ್ಡ್‌ನ ಮೂಲಕ ಚೆನ್ನೈ ತಂಡ ಈ ಮೂವರು ಆಟಗಾರರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಐಪಿಎಲ್ ನಿಯಮದ ಪ್ರಕಾರ ಒಂದು ತಂಡವು ಈಗಾಗಲೇ ಇರುವ ಆಟಗಾರರಲ್ಲಿ ಐವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದ್ದು, ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಅಂತಿಮ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಶುಕ್ರವಾರದೊಳಗೆ ಐಪಿಎಲ್ ಆಡಳಿತ ಮಂಡಳಿಗೆ ನೀಡಬೇಕು ಎಂದು ಬಿಸಿಸಿಐ ಸೂಚಿಸಿತ್ತು. ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಸಚಿನ್ ತೆಂಡುಲ್ಕರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದ್ದು, ನಿರೀಕ್ಷೆಯಂತೆಯೇ ನಾಯಕ ರೋಹಿತ್ ಶರ್ಮ, ಹರ್ಭಜನ್ ಸಿಂಗ್, ಅಂಬಟಿ ರಾಯುಡು ಸೇರಿದಂತೆ ವಿಂಡೀಸ್‌ನ ಕೀರನ್ ಪೊಲಾರ್ಡ್, ಶ್ರೀಲಂಕಾದ ಲಸಿತ್ ಮಾಲಿಂಗ ಅವರನ್ನು ಮುಂದುವರಿಸಲು ನಿರ್ಧರಿಸಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯಾವುದೇ ಆಟಗಾರನನ್ನು ಉಳಿಸಿಕೊಳ್ಳದೆ ನೇರವಾಗಿ ಹರಾಜಿನಲ್ಲಿ ಭಾಗವಹಿಸುವ ಒಮ್ಮತದ ನಿರ್ಧಾರಕ್ಕೆ ಬಂದಿತು. 8 ತಂಡಗಳಲ್ಲಿ ಡೆಲ್ಲಿ ಬಿಸಿಸಿಐ ನಿಗದಿಪಡಿಸಿದ ಹರಾಜಿನ ಮೊತ್ತ 60 ಕೋಟಿ ರೂ.ವನ್ನು ಹರಾಜಿನಲ್ಲಿ ಬಳಸಲಿದೆ. ಚೆನ್ನೈ ಹಾಗೂ ಮುಂಬೈ 21 ಕೋಟಿ ರೂ., ರಾಜಸ್ಥಾನ 22.5 ಕೋಟಿ ರೂ., ಕೆಕೆಆರ್ ಹಾಗೂ ಹೈದರಾಬಾದ್ ತಲಾ 38 ಕೋಟಿ ರೂ., ಪಂಜಾಬ್ 43.5 ಕೋಟಿ ರೂ.ವನ್ನು ಹರಾಜಿನಲ್ಲಿ ವ್ಯಯಿಸಲಿವೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಗುರುವಾರ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಹಾಗೂ ಎಬಿ ಡಿ ವಿಲಿಯರ್ಸ್‌ರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ವಿದಾಯದಿಂದಾಗಿ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ಥಾನ ರಾಯಲ್ಸ್ ತಂಡ ಕೂಡ ಆಸ್ಟ್ರೇಲಿಯದ ಶೇನ್ ವ್ಯಾಟ್ಸನ್, ಜೇಮ್ಸ್ ಫಾಕ್ನೆರ್, ಸಂಜು ಸ್ಯಾಮ್ಸನ್, ಅಜಿಂಕ್ಯ ರಹಾನೆ ಹಾಗೂ ಸ್ಟುವರ್ಟ್ ಬಿನ್ನಿಯವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಶಾರೂಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ನಾಯಕ ಗೌತಮ್ ಗಂಭೀರ್ ಹಾಗೂ ವೆಸ್ಟ್‌ಇಂಡೀಸ್ ಸ್ಪಿನ್ನರ್ ಸುನಿಲ್ ನರೇನ್‌ರನ್ನು ಮಾತ್ರ ಉಳಿಸಿಕೊಳ್ಳಲು ನಿರ್ಧರಿಸಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಸನ್‌ರೈಸರ್ಸ್ ಹೈದರಾಬಾದ್ ಭಾರತದ ಶಿಖರ್‌ಧವನ್ ಮತ್ತು ದಕ್ಷಿಣ ಆಫ್ರಿಕದ ಡೇಲ್ ಸ್ಟೇಯ್ನಿ ಅವರನ್ನು ಉಳಿಸಿಕೊಳ್ಳುವತ್ತ ಒಲವು ತೋರಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ದಕ್ಷಿಣ ಆಫ್ರಿಕದ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಹಾಗೂ ಭಾರತದ ಆರಂಭಿಕ ಆಟಗಾರ ಮನನ್ ವೋರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಒಟ್ಟು 24 ಆಟಗಾರರನ್ನು 7 ಫ್ರಾಂಚೈಸಿಗಳು ತನ್ನಲ್ಲೇ ಉಳಿಸಿಕೊಂಡಿದ್ದು, ಇದರಲ್ಲಿ 14 ಭಾರತೀಯರು ,10 ವಿದೇಶಿ ಆಟಗಾರರಿದ್ದಾರೆ.

ವಿವಿಧ ತಂಡಗಳು ಉಳಿಸಿಕೊಂಡ 24 ಆಟಗಾರರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ ್ಸ(5): ಎಂಎಸ್ ಧೋನಿ, ಸುರೇಶ್‌ರೈನಾ, ಆರ್. ಅಶ್ವಿನ್, ರವೀಂದ್ರ ಜಡೇಜ, ಡ್ವೇನ್ ಬ್ರಾವೊ.
ಮುಂಬೈ ಇಂಡಿಯನ್ಸ್(5): ರೋಹಿತ್ ಶರ್ಮ, ಕೀರನ್ ಪೊಲಾರ್ಡ್, ಹರ್ಭಜನ್, ಅಂಬಟಿ ರಾಯುಡು ಹಾಗೂ ಲಸಿತ್ ಮಾಲಿಂಗ.
ರಾಜಸ್ಥಾನ ರಾಯಲ್ಸ್ (5): ಶೇನ್‌ವ್ಯಾಟ್ಸನ್, ಜೇಮ್ಸ್ ಫಾಕ್ನೆರ್, ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್, ಸ್ಟುವರ್ಟ್ ಬಿನ್ನಿ.
ರಾಯಲ್ ಚಾಲೆಂಜರ್ಸ್‌ ಬೆಂಗಳೂರು (3):

ಕ್ರಿಸ್‌ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್. ಕೋಲ್ಕತಾ ನೈಟ್‌ರೈಡರ್ಸ್(2): ಗೌತಮ್ ಗಂಭೀರ್, ಸುನಿಲ್ ನರೇನ್. ಕಿಂಗ್ಸ್ ಇಲೆವೆನ್ ಪಂಜಾಬ್(2): ಡೇವಿಡ್ ಮಿಲ್ಲರ್, ಮನನ್ ವೋರಾ.
ಡೆಲ್ಲಿ ಡೇರ್‌ಡೆವಿಲ್ಸ್(0): ಯಾವ ಆಟಗಾರರನ್ನು ಉಳಿಸಿಕೊಂಡಿಲ್ಲ
ಸನ್‌ರೈಸರ್ಸ್ ಹೈದರಾಬಾದ್(2): ಶಿಖರ್ ಧವನ್ ಹಾಗೂ ಡೇಲ್ ಸ್ಟೇಯ್ನ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ಮಂಗಳೂರು ವಾರ್ತಾ ವಿಭಾಗ