ಕಿಂಗ್ ಕೆಡವಿದ ಯೂಕಿ: ಡೇವಿಸ್ ಕಪ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 1-0ಮುನ್ನಡೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಚಂಡೀಗಡ: ಡೇವಿಸ್ ಕಪ್‌ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಡೇನಿಯಲ್ ಕಿಂಗ್ ಟರ್ನರ್ ಅವರನ್ನು ಸೋಲಿಸಿದ ಯೂಕಿ ಭಾಂಬ್ರಿ ಭಾರತಕ್ಕೆ ೧-೦ ಮುನ್ನಡೆ ಒದಗಿಸಿದ್ದಾರೆ.

ಶುಕ್ರವಾರ ನಗರದ ಸಿ‌ಎಲ್‌ಟಿ‌ಎ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಏಶಿಯಾನಿಯಾ ಗ್ರೂಪ್ ಒಂದರ ಮೊದಲನೇ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತ ನಂ. ಒನ್ ಆಟಗಾರ ಕಿವೀಸ್‌ನ ಕಿಂಗ್ ವಿರುದ್ಧ ೩-೬, ೦-೬, ೬-೨, ೬-೪, ೬-೨ ಸೆಟ್‌ಗಳ ಅಂತರದಿಂದ ಜಯಿಸಿದರು.

ಆರಂಭದಲ್ಲಿ ಕಿಂಗ್ ಸವಾರಿ: ಮೋಡ ಮುಸುಕಿದ ವಾತಾವರಣದಲ್ಲಿ ಸುಮಾರು ಒಂದೂವರೆ ಗಂಟೆಯಷ್ಟು ತಡವಾಗಿ ಪಂದ್ಯ ಪ್ರಾರಂಭವಾಯಿತು. ಆರಂಭದಿಂದಲೇ ಭಾಂಬ್ರಿಯ ಮೇಲೆ ಹಿಡಿತ ಸಾಧಿಸಿದ ಕಿಂಗ್ ೨ ಸೆಟ್‌ಗಳನ್ನು ಬಹಳ ಸುಲಭವಾಗಿ ಗೆದ್ದುಕೊಂಡರು.

ಪ್ರಾರಂಭದ ಹಂತದಲ್ಲಿ ಎಡಗಾಲಿನ ಸ್ನಾಯು ಸೆಳೆತಕ್ಕೊಳಗಾಗಿದ್ದ ಯೂಕಿ ಆಡಲು ಬಹಳ ತ್ರಾಸುಪಟ್ಟಿದ್ದರು. ಯೂಕಿಯ ಈ ದೌರ್ಬಲ್ಯತೆಯ ಸಂಪೂರ್ಣ ಲಾಭ ಪಡೆದ ನ್ಯೂಜಿಲೆಂಡ್‌ನ ಆಟಗಾರ ಅಂಕಗಳನ್ನು ತನ್ನ ಖಾತೆಗೆ ಜೋಡಿಸುತ್ತಾ ಸಾಗಿದರು. ಕಿಂಗ್ ೨-೦ ಸೆಟ್‌ಗಳಿಂದ ಮುನ್ನಡೆ ಗಳಿಸಿದ ಹಂತದಲ್ಲಿ ಭಾಂಬ್ರಿ ಕತೆ ಮುಗಿದು ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ೩ನೇ ಸೆಟ್‌ನಲ್ಲಿ ಚಿಗುರಿಕೊಂಡ ಭಾರತದ ಯುವ ಟೆನಿಸಿಗ ಮುಂದಿನ ಮೂರೂ ಸೆಟ್‌ನಲ್ಲಿ ನಿರಂತರ ಪ್ರಾಬಲ್ಯ ಮೆರೆಯುವುದರೊಂದಿಗೆ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಹಿಂದಿನ ೨ ಸೆಟ್‌ಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡ ಭಾಂಬ್ರಿ, ಮುಂದಿನ ಸೆಟ್‌ಗಳಲ್ಲಿ ತಮ್ಮೆಲ್ಲಾ ಯುಕ್ತಿಯನ್ನು ಬಳಸಿಕೊಂಡರು. ನಾಲ್ಕನೇ ಸೆಟ್‌ನಲ್ಲಿ ಮಾತ್ರ ೧೭೯ನೇ ರ್ಯಾಂಕಿಂಗ್ ಹೊಂದಿರುವ ಭಾರತೀಯ ಟೆನಿಸಿಗನಿಗೆ ಕಿಂಗ್ ಸವಾಲು ಎಸೆದರು. ಪಂದ್ಯ ಸಾಗುತ್ತಿದ್ದಂತೆ ಕಿವೀಸ್‌ನ ಆಟಗಾರನನ್ನು ಕೋರ್ಟ್ ತುಂಬಾ ಅಲೆದಾಡಿಸಿದ ಯೂಕಿ ಭಾಂಬ್ರಿ ಅಂತಿಮ ನಗು ಬೀರಿದರು.

ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯೂಕಿ, ‘ನಾನು ಬಹಳ ಕೆಟ್ಟದಾಗಿ ಎರಡನೇ ಸೆಟ್ ಕಳೆದುಕೊಂಡೆ. ಆದರೆ ತಂಡ ನನ್ನನ್ನು ಬಹಳವಾಗಿ ಹುರಿದುಂಬಿಸಿತು. ಹಾಗಾಗಿ ನಂತರದ ಸೆಟ್‌ನಲ್ಲಿ ನಾನು ಗೆದ್ದು ಆತ್ಮವಿಶ್ವಾಸ ಗಳಿಸಿಕೊಂಡೆ’ ಎಂದಿದ್ದಾರೆ.

ತಂಡದ ಕೋಚ್ ನಂದನ್ ಬಾಲ್ ಮಾತನಾಡಿ, ‘ನಾವು ಬಹಳ ಕಠಿಣ ದಿನವನ್ನು ಕಂಡೆವು. ಪಂದ್ಯಾವಳಿ ಹೇಗೆ ಸಾಗುವುದು ಎಂದು ಹೇಳುವುದು ಕಷ್ಟ. ಹೀಗಾಗಿ ನಮ್ಮ ಹುಡುಗರು ಕಠಿಣ ಅಭ್ಯಾಸ ನಡೆಸಬೇಕಿದೆ. ಡಬಲ್ಸ್ ಪಂದ್ಯಕ್ಕೆ ವಿಷ್ಣು ಲಭ್ಯತೆಯನ್ನು ನಾವು ಬಯಸುತ್ತೇವೆ. ಆದರೆ ಸನಮ್ ಸಿಂಗ್ ಅವರೂ ಆಯ್ಕೆಗೆ ಲಭ್ಯರಿದ್ದಾರೆ.’ ಎಂದಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ