ಪೂಜಾ ಗಾಂಧಿ ನನಗೆ ತಂಗಿ ಸಮಾನ: ಕುಮಾರಸ್ವಾಮಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (2)

ಮಳೆ ಹುಡುಗಿ’ ಪೂಜಾ ಗಾಂಧಿಯ ಬಗ್ಗೆ ಇದುವರೆಗೆ ಸುಮ್ಮನಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೊನೆಗೂ ಮೌನ ಮುರಿದಿದ್ದಾರೆ. ಇದಕ್ಕೆ ಕಾರಣರಾದವರು ಬಿಜೆಪಿ ಸಂಸದ ಆಯನೂರು ಮಂಜುನಾಥ್. ’ದಂಡುಪಾಳ್ಯದ ಕ್ವೀನ್’ಳನ್ನು ಇಟ್ಟುಕೊಂಡು ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ಕಕ್ಕೆ ಕುಮಾರಣ್ಣನ ತಾಳ್ಮೆಯ ಕಟ್ಟೆ ಒಡೆದಿದೆ.

ಪೂಜಾ ಗಾಂಧಿ ಪಕ್ಷಕ್ಕೆ ಬಂದ ನಂತರ ನಮ್ಮ ಬಗ್ಗೆ ರಾಜಕೀಯ ವಲಯದಲ್ಲಿ, ಮಾಧ್ಯಮಗಳಲ್ಲಿ, ಇಂಟರ್ನೆಟ್‌ಗಳಲ್ಲಿ ಭಾರೀ ಅಪಪ್ರಚಾರಗಳು ನಡೆಯುತ್ತಿವೆ. ಪೂಜಾ ಗಾಂಧಿಯವರೇ, ನಿಮ್ಮ ಸೇವೆ ನಮಗೆ ಸಾಕು. ಇಂತಹ ಆರೋಪಗಳಿಂದ ನಿಮಗೆ ನೋವಾಗಿದ್ದರೆ, ದಯವಿಟ್ಟು ನೀವು ದೂರ ಉಳಿಯಿರಿ. ನೀವು ನನಗೆ ತಂಗಿ ಸಮಾನ ಎಂದು ಕುಮಾರಸ್ವಾಮಿ ಬೆಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾವಾವೇಶದಿಂದ ನುಡಿದರು.

ಏನು ಆರೋಪ?

ಪೂಜಾ ಗಾಂಧಿಯನ್ನು ಆಯನೂರು ಮಂಜುನಾಥ್ ’ದಂಡುಪಾಳ್ಯ ಕ್ವೀನ್’ ಎಂದು ಜರೆದಿದ್ದರು. ಸಿನಿಮಾದವರನ್ನು ಬಳಸಿಕೊಂಡು ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ. ಆ ಗ್ಯಾಂಗ್ ಇನ್ನು ಯಾರದೆಲ್ಲ ಕತ್ತು ಕೊಯ್ಯಲಿದೆಯೋ ಎಂದು ವ್ಯಂಗ್ಯವಾಡಿದ್ದರು.

ನಮ್ಮಲ್ಲಿ ಹಾಗೇನಿಲ್ಲ…

ಯಾವುದೇ ಸಿನಿಮಾ ನಾಯಕಿಯನ್ನು ತಂದು ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ಇತ್ತೀಚೆಗೆ ನನ್ನ ಮತ್ತು ಪೂಜಾ ಗಾಂಧಿಯನ್ನು ಕೆಟ್ಟದಾಗಿ ಚಿತ್ರಿಸಲಾಗುತ್ತಿದೆ. ಆಯನೂರು ಹೇಳಿಕೆಯಿಂದ ಪೂಜಾ ಗಾಂಧಿಯವರಿಗೆ ನೋವಾಗಿದ್ದರೆ, ಅವರು ಸಿನಿಮಾದಲ್ಲೇ ಮುಂದುವರಿಯಲಿ. ಸಿನಿಮಾ ನಟಿಯರನ್ನು ಬಳಸಿಕೊಂಡು ಪಕ್ಷ ಕಟ್ಟಲು ಹೊರಟಿದ್ದಾರೆ ಎನ್ನುವುದು ಬಿಜೆಪಿಯ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಪೂಜಾ ಗಾಂಧಿಯವರೇ, ನಿಮ್ಮ ಸೇವೆ ನಮಗೆ ಸಾಕು ಎಂದು ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದರು.

ಅಪ್ಪ-ಮಗಳ ಚಾರಿತ್ರ್ಯ…ಪೂಜಾ ಗಾಂಧಿ ಮತ್ತು ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವ ಬಿಜೆಪಿ ಏನೇನು ಮಾಡುತ್ತಿದೆ ಎನ್ನುವುದು ಗೊತ್ತು. ಕೇಶವ ಕೃಪಾದಲ್ಲಿ ಕ್ವೀನ್‌ಗಳನ್ನು ಇಟ್ಟುಕೊಂಡು ಶಿವಮೊಗ್ಗದಲ್ಲಿ ರಾಜಕಾರಣ ಮಾಡಿದವರು ಯಾರು? ಅಪ್ಪ-ಮಗಳು ಎಂದು ಹೇಳಿಕೊಂಡು ಯಾರು ಏನೇನು ಮಾಡಿದ್ದಾರೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನೂ ಕುಮಾರಸ್ವಾಮಿ ಟಾರ್ಗೆಟ್ ಮಾಡಿದರು.

ಪಕ್ಷ ಬಿಡುತ್ತಾರಾ ಪೂಜಾ ಗಾಂಧಿ?

ಆರಂಭದಲ್ಲಿ ಪೂಜಾ ಗಾಂಧಿಗೆ ಕುಮಾರಸ್ವಾಮಿಯೇ ಬೆಂಗಳೂರಿನಲ್ಲಿ ದೊಡ್ಡ ಬಂಗಲೆ ಕೊಟ್ಟರಂತೆ ಎಂದು ಸುದ್ದಿಯಾಯ್ತು. ನಂತರವೂ ಅವರ ನಡುವೆ ಸಂಬಂಧಗಳ ರೂಮರ್‌ಗಳು ಹರಡಿದವು. ಇದೇ ರೀತಿ ಈ ಹಿಂದೆ ನಟಿ ರಾಧಿಕಾ ಕುರಿತೂ ಗಾಳಿಸುದ್ದಿಗಳು ಜೋರಾಗಿದ್ದವು. ಆದರೆ ಆಕೆಯ ಬಗ್ಗೆ ಇದುವರೆಗೆ ಎಲ್ಲೂ ಕುಮಾರಸ್ವಾಮಿ ಮಾತನಾಡಿಲ್ಲ. ಈಗ ಸ್ವತಃ ಕುಮಾರಸ್ವಾಮಿಯೇ ನೈತಿಕವಾಗಿ ತೊಂದರೆಯಾಗುವುದಿದ್ದರೆ ಪಕ್ಷ ಬಿಡುವಂತೆ ಪೂಜಾ ಗಾಂಧಿಯನ್ನು ಕೇಳಿಕೊಂಡಿದ್ದಾರೆ. ಪೂಜಾ ಗಾಂಧಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (2)
ಅಶ್ವಿನಿ

About ಅಶ್ವಿನಿ