ವಿಷ್ಣು ಬದುಕಿರುತ್ತಿದ್ದರೆ ಈಗ 62ರ ಸಂಭ್ರಮ ನಮಗಿತ್ತು! …

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಅಭಿಮಾನಿಗಳ ಪಾಲಿನ ಸಾಹಸ ಸಿಂಹ ವಿಷ್ಣುವರ್ಧನ್ ಈಗಲೂ ಬದುಕಿರುತ್ತಿದ್ದರೆ? ಈಗಲೂ ಯಾಕೆ, 59ನೇ ವಯಸ್ಸಿನಲ್ಲಿ ಹೇಳದೆ ಕೇಳದೆ ಹೊರಟು ಹೋಗದೇ ಇರುತ್ತಿದ್ದರೆ ಮರು ವರ್ಷವೇ 60ರ ಸಂಭ್ರಮಕ್ಕೆ ಇಡೀ ಕನ್ನಡ ಚಿತ್ರರಂಗ ಟೊಂಕ ಕಟ್ಟಿ ನಿಲ್ಲುತ್ತಿತ್ತು. ಪ್ರತಿಯೊಬ್ಬರೂ ಆ ದಿನವನ್ನು ಸಂಭ್ರಮಿಸುತ್ತಿದ್ದರು. ಅದೇ ವಿಷ್ಣು ಈಗಲೂ ಬದುಕಿದ್ದಿದ್ದರೆ ಈಗ 62ರ ಸಂಭ್ರಮ!

ಇದು ಕನ್ನಡ ಚಿತ್ರರಂಗದ ದುರಾದೃಷ್ಟವಲ್ಲದೆ ಮತ್ತಿನ್ನೇನು? ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಅಗಾಧ ಸಾಧನೆ ಮಾಡಿದ ನಟನೊಬ್ಬ ಅಗಲುವುದನ್ನು ಯಾರಾದರೂ ನಿರೀಕ್ಷಿಸಿದ್ದರು? ಬೆಳ್ಳಂಬೆಳಗ್ಗೆ ಟಿವಿಗಳಲ್ಲಿ ಮೂಡಿ ಬಂದ ಬ್ರೇಕಿಂಗ್ ನ್ಯೂಸನ್ನು ನಂಬಲು ಅಸಾಧ್ಯವಾಗಿದ್ದ 2009ರ ವರ್ಷದ ಕೊನೆಯ ದಿನದ ಮುನ್ನಾ ದಿನವದು. ಅವರ ಕೋಟ್ಯಂತರ ಅಭಿಮಾನಿಗಳು ರೋದಿಸಿದ್ದರು.

ಆ ದಿನಕ್ಕೆ ಇನ್ನೇನು ಕೆಲವೇ ತಿಂಗಳಲ್ಲಿ ಮೂರು ವರ್ಷವೂ ತುಂಬುತ್ತದೆ. ಹೆಚ್ಚು ಕಡಿಮೆ ಮೂರು ವರ್ಷಗಳಿಂದ ಕನ್ನಡ ಚಿತ್ರರಂಗ ವಿಷ್ಣುವನ್ನು ಮಿಸ್ ಮಾಡಿಕೊಳ್ಳುತ್ತಿದೆ. ಅದೇನೂ ನಾಯಕತ್ವದ ವಿಚಾರದಲ್ಲಿ ಅಂತ ಯಾರೂ ಅಂದುಕೊಳ್ಳಬೇಕಿಲ್ಲ. ವಿಷ್ಣು ಯಾವತ್ತೂ ಚಿತ್ರರಂಗದ ಮುಂದಾಳುತ್ವ ವಹಿಸಿದವರಲ್ಲ. ಹಿಂದೆ ನಿಂತೇ ನಾಯಕನ ಗೌರವ ಉಳಿಸಿಕೊಂಡಿಸಿದ್ದರು. ಸಮಸ್ಯೆ ಬಗೆಹರಿಸಲು ಯಾರೂ ಅವರಲ್ಲಿಗೆ ಹೋಗದೆ ಇದ್ದರೂ, ಅವರ ಮಾತಿಗೆ ಪ್ರತಿಯೊಬ್ಬರೂ ಬೆಲೆ ಕೊಡುತ್ತಿದ್ದರು.

ಬಹುಶಃ ಆಪ್ತಮಿತ್ರ ಅಂಬರೀಷ್‌ರಂತಹ ಕೆಲವೇ ಕೆಲವರನ್ನು ಹೊರತುಪಡಿಸಿ ಉಳಿದ ಬಹುತೇಕರಿಗೆ ಅವರೊಬ್ಬರು ಒಗಟೊಗಟಿನ ವ್ಯಕ್ತಿ. ಕೊನೆಯ ದಿನಗಳಲ್ಲಂತೂ ಸದಾ ಆಧ್ಯಾತ್ಮವನ್ನೇ ಉಸಿರಾಡುವ, ತತ್ವಜ್ಞಾನಿಯಂತೆ ಮಾತನಾಡುವ ಗಂಭೀರ ವದನ. ಸಿನಿಮಾದೊಳಗೆ ಹೊರತುಪಡಿಸಿ ಅವರ ಮಾತು-ಕೃತಿಗಳೆಲ್ಲವೂ ಸಿನಿಮಾದ ಚೌಕಟ್ಟಿನ ಹೊರಗಿರುತ್ತಿತ್ತು. ನಿಜಕ್ಕೂ ಇವರೊಬ್ಬ ಸಿನಿಮಾ ನಟರೇ ಎಂದು ಶಂಕೆ ಪಡುವಷ್ಟು ಬೇರೆಯಾಗಿ ಕಾಣುತ್ತಿದ್ದರು.

ಇಂದಿನ ಗಿಮಿಕ್ ಮಾಡುವ ನಾಯಕರು, ನಿರ್ದೇಶಕರ ನಡುವೆ, ಅಹಂಕಾರವನ್ನೇ ಉಸಿರಾಡುವ ಬಣ್ಣದ ಮುಖಗಳ ನಡುವೆ ವಿಷ್ಣುವಿನಂತಹ ಒಬ್ಬ ಸೌಮ್ಯವದನ, ನಿರಹಂಕಾರಿ, ನಿರುಮ್ಮಳ ಹೃದಯಿ ಬೇಕಿತ್ತು. ಅಂತಹ ಮಂದಿಯ ಎದುರು ನಮ್ಮ ನಿಮ್ಮೆಲ್ಲರ ಪ್ರೀತಿಯ ವಿಷ್ಣು, ಇವ್ಯಾವುದೂ ಶಾಶ್ವತವಲ್ಲ ಎಂದು ಸೂಚ್ಯವಾಗಿ ಕಣ್ಣ ಭಾಷೆಯಲ್ಲೇ ಹೇಳುವುದನ್ನು ನೋಡಬೇಕಿತ್ತು.

ಅಂತಹ ಧೀಮಂತ ನಟ ಶ್ರೇಷ್ಠ, ಸಾಹಸ ಸಿಂಹ ಇಂದು (ಸೆಪ್ಟೆಂಬರ್ 18) ಬದುಕಿದ್ದಿದ್ದರೆ 62 ವರ್ಷ, ಸಂಭ್ರಮಿಸಬೇಕಾದ ದಿನ. ಅವರ ಮನೆಯ ಸುತ್ತ ಅಭಿಮಾನಿಗಳ ದಂಡೇ ನೆರೆದಿರಬೇಕಿತ್ತು. ಆ ಮನೆಯೀಗ ಇಲ್ಲದ ವಿಷ್ಣುವಿನಿಂದ ಖಾಲಿ ಖಾಲಿ. ಅಭಿಮಾನಿಗಳೂ ಆ ಮನೆಯತ್ತ ಈಗ ಇಣುಕುತ್ತಿಲ್ಲ. ಯಾರದೋ ಉಸ್ತುವಾರಿಯಲ್ಲಿರುವ, ಇನ್ನೂ ಒಂದು ಹಂತಕ್ಕೆ ಬರದ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದತ್ತ ಹೆಜ್ಜೆ ಹಾಕುತ್ತಾರೆ. ಅಲ್ಲೇ ತಮ್ಮ ಆರಾಧ್ಯ ದೈವಕ್ಕೆ ನಮಿಸುತ್ತಾರೆ. ಹುಟ್ಟುಹಬ್ಬದ ದಿನವಾದರೇನು, ಸಂಭ್ರಮಕ್ಕೆಲ್ಲಿದೆ ಅವಕಾಶ ಎಂದು ಮೌನವಾಗಿ ಆ ದಿನಗಳನ್ನು ಮೆಲುಕು ಹಾಕುತ್ತಾರೆ.

ನೀವೂ ಒಮ್ಮೆ ನೆನಪು ಮಾಡಿಕೊಳ್ಳಿ. ’ನಾಗರ ಹಾವು’ ಚಿತ್ರದಿಂದ ಕೊನೆಯ ’ಆಪ್ತರಕ್ಷಕ’ದವರೆಗೆ ಅವರು ಹೇಗಿದ್ದರು ಎಂಬುದನ್ನು ಕಣ್ಣ ಮುಂದೆ ತಂದುಕೊಳ್ಳಿ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ