‘ಈಗ’ಕ್ಕೀಗ ಆಸ್ಕರ್ ಪ್ರವೇಶ ನಿರೀಕ್ಷೆ..

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಈಗ’ ಅಮೆರಿಕಾದಲ್ಲೂ ಕೋಟಿ ಕೋಟಿ ಬಾಚಿತ್ತು. ಇಷ್ಟು ಹೇಳಿದ ಮೇಲೆ ಆ ಚಿತ್ರ ಭಾರತದಲ್ಲಿ ಎಷ್ಟು ಸದ್ದು ಮಾಡಿತ್ತು ಅನ್ನೋದನ್ನು ವಿವರಿಸಬೇಕಿಲ್ಲ ತಾನೇ? ಈಗ ಬಂದಿರೋ ಸುದ್ದಿ ಏನಪ್ಪಾ ಅಂದ್ರೆ, ‘ಈಗ’ ಆಸ್ಕರ್‌ಗೆ ಹೋಗೋ ತರಾತುರಿಯಲ್ಲಿದೆ. ಅದೂ ನಮ್ಮ ಕಿಚ್ಚ ಸುದೀಪ್ ಪ್ರಮುಖ ಪಾತ್ರ ವಹಿಸಿದ ಚಿತ್ರ ಅಂದ ಮೇಲೆ ಒಂದು ಹಿಡಿ ಹೆಮ್ಮೆ ಜಾಸ್ತಿಯೇ ಇರುತ್ತೆ ತಾನೇ?

ಎಸ್.ಎಸ್. ರಾಜಮೌಳಿ ನಿರ್ದೇಶನದ ನಾಣಿ-ಸಮಂತಾ ನಾಯಕ-ನಾಯಕಿಯರಾಗಿದ್ದ ‘ಈಗ’ದಲ್ಲಿ ನಿಜವಾಗಿಯೂ ‘ಹೀರೋ’ ಆಗಿದ್ದು ಕಿಚ್ಚ ಸುದೀಪ್. ಆ ಚಿತ್ರ ಬಾಕ್ಸಾಫೀಸಿನಲ್ಲಿ ಮಾಡಿದ ದಾಖಲೆಗಳಿಗೆ ಲೆಕ್ಕವಿಲ್ಲ. ಈಗ ಪ್ರಶಸ್ತಿಗಳ ಸರದಿಯ ಆರಂಭ. ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಳ್ಳಲಿರುವ ಚಿತ್ರಗಳ ಪಟ್ಟಿಯಲ್ಲಿ ‘ಈಗ’ ಕೂಡ ಇದೆ. ಅದು ನಿಜಕ್ಕೂ ಆಸ್ಕರ್‌ಗೆ ಹೋಗುತ್ತದೆಯೇ ಅನ್ನೋದು ಇನ್ನು ಕೆಲವೇ ಕೆಲವು ದಿನಗಳಲ್ಲಿ ನಿರ್ಧಾರವಾಗಲಿದೆ.

ತೆಲುಗಿನಿಂದ ಈಗ, ತಮಿಳಿನಿಂದ 7 ಎಎಂ ಅರಿವು, ವಲಕು ಎನ್ 18/9, ಮಲಯಾಳಂನಿಂದ ಅಕಾಶನಿಂತೆ ನೀರಂ, ಮರಾಠಿಯಿಂದ ಡಿಯೋಲ್, ಗುಜರಾತಿ ಮತ್ತು ಪಂಜಾಬಿ ಭಾಷೆಗಳಿಂದ ಒಂದೊಂದು ಚಿತ್ರಗಳು ಆಸ್ಕರ್ ಪ್ರಶಸ್ತಿಯ ನಾಮಕರಣ ಪಟ್ಟಿಯಲ್ಲಿವೆ. ಬಾಲಿವುಡ್‌ನಿಂದ ಹೀರೋಯಿನ್, ಬರ್ಫಿ, ಕಹಾನಿ, ಗ್ಯಾಂಗ್ಸ್ ಆಫ್ ವಸೇಪುರ್, ಪಾನ್ ಸಿಂಗ್ ತೋಮರ್, ಫೆರಾರಿ ಕೀ ಸವಾರಿ, ಡರ್ಟಿ ಪಿಕ್ಟರ್ ಮುಂತಾದ ಹೆಸರುಗಳೂ ಇವೆ. ಕನ್ನಡದ ಯಾವ ಚಿತ್ರಗಳೂ ಈ ಪಟ್ಟಿಯಲ್ಲಿ ಜಾಗ ಪಡೆದಿಲ್ಲ.

ಇಷ್ಟೂ ಚಿತ್ರಗಳನ್ನು ಸೆಪ್ಟೆಂಬರ್ 18ರಿಂದ 26ರ ನಡುವೆ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದ ಸದಸ್ಯರು ವೀಕ್ಷಿಸಲಿದ್ದಾರೆ. ನಂತರ ಇವುಗಳಲ್ಲಿ ಆಸ್ಕರ್‌ಗೆ ಯಾವ ಚಿತ್ರಗಳು ನಾಮಕರಣಗೊಳ್ಳಲಿವೆ ಎಂಬ ನಿರ್ಧಾರ ಹೊರ ಬೀಳಲಿದೆ. ಅದರಲ್ಲಿ ಸುದೀಪ್ ‘ಈಗ’ವೂ ಸೇರಲಿದೆಯೇ ಅನ್ನೋದು ಸದ್ಯದ ಕುತೂಹಲ.

ಒಂದು ವೇಳೆ ‘ಈಗ’ ಆಸ್ಕರ್‌ಗೆ ನಾಮಕರಣಗೊಂಡರೆ, ಈ ಎತ್ತರಕ್ಕೇರಿದ ಸ್ಯಾಂಡಲ್‌ವುಡ್‌ನ ಮೊದಲ ನಟ ಎಂಬ ಹೆಗ್ಗಳಿಕೆ ಸುದೀಪ್‌ರದ್ದಾಗಲಿದೆ. ಬಹುಶಃ ಇದುವರೆಗೆ ಕನ್ನಡದ ಯಾವುದೇ ಚಿತ್ರಗಳು ಆಸ್ಕರ್‌ಗೆ ನಾಮಕರಣವಾದಂತಿಲ್ಲ. ಕನಿಷ್ಠ ಕನ್ನಡಿಗನೊಬ್ಬ ನಟಿಸಿದ ಚಿತ್ರವಾದರೂ ಆಸ್ಕರ್‌ಗೆ ಹೋಗಲಿ ಅನ್ನೋದಷ್ಟೇ ಕನ್ನಡಿಗರ, ಕಿಚ್ಚನ ಅಭಿಮಾನಿಗಳ ಹಾರೈಕೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು