ಅಜರುದ್ದೀನ್ ಮೀರಿಸಿದ ಧೋನಿಯೇ ಟೆಸ್ಟ್‌ನಲ್ಲೂ ಶ್ರೇಷ್ಠ ನಾಯಕ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ವಿದೇಶ ನೆಲದಲ್ಲಿ ಎದುರಾದ ಸತತ ಎಂಟು ಪಂದ್ಯಗಳ ಸೋಲು ಟೆಸ್ಟ್ ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಬಗ್ಗೆ ಅನುಮಾನು ಮೂಡಿಸಿರುವುದಂತೂ ಸಹಜ. ಆದರೆ ತವರಿನ ಅಂಕಿ‌ಅಂಶ ಪರಿಗಣಿಸಿದಾಗ ಈ ರಾಂಚಿ ಬಾಯ್‌ ಸಾಧನೆ ಅಮೋಘವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವೈಟ್‌ವಾಶ್ ಮಾಡಿರುವಂತೆಯೇ ನೂತನ ಸಾಧನೆ ಮಾಡಿರುವ ಧೋನಿ, ತವರು ನೆಲದಲ್ಲೂ ಟೀಮ್ ಇಂಡಿಯಾದ ಶ್ರೇಷ್ಠ ನಾಯಕನೆಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

ಯಾಕೆಂದರೆ ಮಹಿ ನಾಯಕತ್ವದಲ್ಲಿ ಭಾರತಕ್ಕೆ ಇದು ಸ್ವದೇಶದಲ್ಲಿ ಲಭಿಸುತ್ತಿರುವ 14ನೇ ಟೆಸ್ಟ್ ಗೆಲುವುವಾಗಿದೆ. ಈ ಮೂಲಕ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ (13 ಗೆಲುವು) ದಾಖಲೆಯನ್ನು ಧೋನಿ ಮೀರಿ ನಿಂತಿದ್ದಾರೆ.

ಭಾರತದ ಇತರ ಮಾಜಿ ನಾಯಕರಾದ ಸೌರವ್ ಗಂಗೂಲಿ ಮುಂದಾಳತ್ವದಲ್ಲಿ ಭಾರತ 10 ಹಾಗೂ ಸುನಿಲ್ ಗಾವಸ್ಕರ್ ನಾಯಕತ್ವದಲ್ಲಿ 7 ಟೆಸ್ಟ್ ಗೆಲುವುಗಳನ್ನು ದಾಖಲಿಸಿವೆ.

ಮತ್ತೊಂದೆಡೆ ತವರಿನಲ್ಲಿ ಈ ವರೆಗೆ 20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಮಹಿ ಈಗಾಗಲೇ 14 ಗೆಲುವು ದಾಖಲಿಸಿರುವುದು ಮಹತ್ತರ ಸಾಧನೆಯಾಗಿದೆ.

ಅಂತೆಯೇ ವಿದೇಶದಲ್ಲಿ ಧೋನಿ ಮುನ್ನಡೆಸಿರುವ 19 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಲಭಿಸಿದ್ದರೆ ಒಂಬತ್ತು ಸೋಲು ಹಾಗೂ ಐದು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಇದರಲ್ಲಿ ಆಸೀಸ್ ಹಾಗೂ ಇಂಗ್ಲೆಂಡ್ ವಿರುದ್ದ ಎದುರಾದ ಸತತ ಎಂಟು ಸೋಲುಗಳು ಸೇರಿವೆ.

2008ರಲ್ಲಿ ಅನಿಲ್ ಕುಂಬ್ಳೆ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಧೋನಿ ನೇತೃತ್ವದಲ್ಲೇ ಭಾರತ ತಂಡವು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರ‌್ಯಾಂಕಿಂಗ್ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿತ್ತು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ