ಶಿಕ್ಷಕ ವೃತ್ತಿ-ಸುಖಮಯ ಪ್ರವೃತ್ತಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಯಾಕೋ ಬೆಳಿಗ್ಗೆಯಿಂದಲೇ ಮೂಡ್ ಸರಿ ಇರಲಿಲ್ಲ. ನಿನ್ನೆ ರಾತ್ರಿ ಎರಡು ಗಂಟೆಯವರೆಗೆ ಎಲ್.ಕೆ.ಜಿ. ಓದುವ ಮಗನ ಟೀಚರಿಗೆ ಕಳಿಸಿಕೊಡುವುದಕ್ಕಾಗಿ ಶುಭಾಶಯ ಪತ್ರವನ್ನು ಮಾಡುತ್ತ ಕುಳಿತಿದ್ದರಿಂದಲೋ ಏನೋ. ಶಿಕ್ಷಕರ ದಿನದಂದು ಶಿಕ್ಷಕನಾದ ನಾನು ಲವಲವಿಕೆಯಿಂದ ಇರಬೇಕಾಗಿತ್ತು. ಈ ’ದಿನ’ಗಳ ಬಗ್ಗೆ ನನಗೆ ಮೊದಲಿಂದಲೂ ಅಸಡ್ಡೆಯೇ. ನನ್ನ ಮನಸ್ಸಿನಲ್ಲಿ ಆಗಾಗ ಏಳುವ ’ಅಪ್ಪನ ದಿನ, ಅಮ್ಮನ ದಿನ, ಪ್ರೇಮಿಗಳ ದಿನ ಇವೆಲ್ಲ ಬೇಕಾ’ ಎಂಬ ಪ್ರಶ್ನೆ ಭಾರತೀಯ ವಿಚಾರಧಾರೆಯ ಪೂರ್ವಾಗ್ರಹಕ್ಕೆ ಒಳಗಾಗಿದ್ದು ಎಂಬುದು ಸುಳ್ಳೇನಲ್ಲ. ಅದಕ್ಕೇ ಶಿಕ್ಷಕನಾಗಿದ್ದರೂ ಶಿಕ್ಷಕರ ದಿನವನ್ನು ನಾನು ಎಂಜಾಯ್ ಮಾಡಲ್ಲ.

ಈ ’ದಿನ’ ಗಳೆಲ್ಲ ಎಂಜಾಯ್ ಮಾಡಲಿಕ್ಕೆ ಇರುವುದು ಎಂಬುದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ನಾವು ಹಾಗೆ ಭಾವಿಸಿರುವುದಂತೂ ಹೌದು. ಎಲ್ಲರೂ ಒಂದಾಗಿ ಎಂಜಾಯ್ ಮಾಡುವುದು ಬೇಡ ಎಂಬ ಕಾರಣಕ್ಕೆ ವೈದ್ಯರ ದಿನ, ಇಂಜಿನಿಯರ್ ದಿನ, ಶಿಕ್ಷಕರ ದಿನ ಇವನ್ನೆಲ್ಲ ಬೇರೆ ಬೇರೆ ಮಾಡಿ ಆ ಆ ವರ್ಗದವರು ಎಂಜಾಯ್ ಮಾಡಲಿ ಎಂದು ಮಾಡಿಟ್ಟಿರಬೇಕು. ಎಂಜಾಯ್ ಮಾಡಬೇಕು ಎಂದರೆ ಆದರ್ಶಗಳಿಗೆಲ್ಲ ಆ ದಿನ ರಜೆ ಘೋಷಿಸಬೇಕಾಗುತ್ತದೆ. ರಿಲ್ಯಾಕ್ಸ್ ಆಗುವ ಸಲುವಾಗಿ ಮನಸ್ಸು ಅನೇಕ ರಿಲ್ಯಾಕ್ಸೇಶನ್ನನ್ನು ಬಯಸುತ್ತದೆ. ಇವತ್ತು ಪ್ರತಿದಿನ ಮಾಡುವ ಪಾಠವನ್ನು ಮಾಡಬೇಕೆಂದಿಲ್ಲ. ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವ ಸಲುವಾಗಿ ತರಗತಿಯ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ ತಪ್ಪೇನಿಲ್ಲ. ಮದ್ಯಸೇವನೆ ಶಿಕ್ಷಕರಿಗೆ ವರ್ಜ್ಯವಾಗಿದ್ದರೂ ಇವತ್ತೊಂದಿನ ಸಹೋದ್ಯೋಗಿಗಳ ಜೊತೆಗೆ ಪಬ್ ನಲ್ಲಿ ಕುಳಿತು ’ಟೀಚರ್ಸ್ ಸ್ಪೆಶಲ್’ ಹೀರಿದರೆ ದೋಷವೇನಲ್ಲ! ಹೀಗೆ ಶಿಕ್ಷಕರ ದಿನಾಚರಣೆಯ ದಿನ ಶಿಕ್ಷಕರು ಬಯಸುವ ರಿಲ್ಯಾಕ್ಸೇಶನ್ ಗೆ ಕೊನೆಯೆಂಬುದಿಲ್ಲ. ಇದಕ್ಕೆಲ್ಲ ವಿದ್ಯಾರ್ಥಿಗಳ ಕುಮ್ಮಕ್ಕು ಬೇರೆ! ತರಗತಿಯನ್ನು ಪ್ರವೇಶಿಸುತ್ತಿದ್ದಂತೆಯೇ ’ಸರ್! ಇವತ್ತು ಫ್ರೀ ಲೆಕ್ಚರ್. ಶಿಕ್ಷಕರ ದಿನಾಚರಣೆ ತಾನೆ? ಏನೂ ಶ್ರಮ ತೆಗೆದುಕೊಳ್ಳಬೇಡಿ’ ಎಂಬ ಉದಾರಭಾವ. ’ಆಯ್ತು, ನಾನೇನೂ ಕಲಿಸುವುದಿಲ್ಲ. ನೀವೆಲ್ಲ ಗುರುವಿನ ಬಗ್ಗೆ ಒಂದೊಂದು ವಾಕ್ಯವನ್ನು ಹೇಳಿ’ ಅಂತ ಹೇಳಿದರೆ ಗಪ್ ಚುಪ್. ಇಲ್ಲವಾದರೆ ಒಂದಿಷ್ಟು ಒಣ ಪ್ರಶಂಸೆಗಳ ಸುರಿಮಳೆ. ಶಿಕ್ಷಕರ ದಿನ ಇರುವುದೇ ತಮ್ಮ ದೋಷಗಳನ್ನು ಮರೆಮಾಚುವಂತೆ ಶಿಕ್ಷಕರನ್ನು ತುಷ್ಟಿಗೊಳಿಸಲು ಎಂದು ನಂಬಿರುವ ಘನ ವಿದ್ಯಾರ್ಥಿಗಳೂ ಇದ್ದಾರೆ. ಅದಕ್ಕಾಗಿ ಹಣ ವ್ಯಯಿಸಿ ಶುಭಾಶಯ ಪತ್ರ, ಗುಲಾಬಿ ಹೂವು, ಸಿಹಿತಿಂಡಿ ಇವನ್ನೆಲ್ಲ ತೆಗೆದುಕೊಂಡು ಬರುತ್ತಾರೆ. ಶಿಕ್ಷಕರು ಅವನ್ನೆಲ್ಲ ನಗುಮೊಗದಿಂದ ಸ್ವೀಕರಿಸಿದಾಗ ಜನ್ಮ ಸಾರ್ಥಕವಾದ ಸಂತೃಪ್ತಿ. ಮಾಸ್ಟರ್ ಪ್ಲಾನ್ ಯಶಸ್ವಿಯಾದ ಸಮಾಧಾನ. ಶಿಕ್ಷಕರಿಗಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿ, ಕಿವಿಗಡಚಿಕ್ಕುವ ಸಂಗೀತ, ಮೈಮುರಿಯುವ ನೃತ್ಯಗಳನ್ನು ಮಾಡುತ್ತ ಚಪ್ಪಾಳೆ ಗಿಟ್ಟಿಸುವ ತವಕ. ’ಗುರುರ್ಬ್ರಹ್ಮಾ … ಎಂದೆಲ್ಲ ಹೊಗಳಿ ಹೊನ್ನಶೂಲಕ್ಕೇರಿಸಿ ಬಿಡುತ್ತಾರೆ. ಎಲ್ಲ ವಿದ್ಯಾರ್ಥಿಗಳೂ ಹೀಗೇ ಅಂತಲ್ಲ . ಆದರೆ ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ತೋರಿಸುವ ಪ್ರೀತಿ ಗೌರವವನ್ನೇ ಆಧಾರವಾಗಿಟ್ಟುಕೊಂಡು ಅವರನ್ನು ಅಳೆಯುವ ಶಿಕ್ಷಕ ಯಶಸ್ವಿಯಾಗಲಾರ.

ಯಾವುದೇ ವೃತ್ತಿಯಲ್ಲಿರುವ ವ್ಯಕ್ತಿ ತನ್ನ ಕೆಲಸ ಸುಖಮಯ ಎಂದು ಹೇಳುವುದಿಲ್ಲ. ವಿವಿಧ ವೃತ್ತಿಗಳಲ್ಲಿರುವ ವ್ಯಕ್ತಿಗಳು ಒಂದೆಡೆ ಸೇರಿದಾಗ ತಮ್ಮ ವೃತ್ತಿಯಲ್ಲಿರುವ ಕಷ್ಟ, ಇತರ ವೃತ್ತಿಗಳಲ್ಲಿರುವ ಸುಖವೇ ಚರ್ಚೆಯ ವಿಷಯವಾಗುತ್ತದೆ. ತನ್ನ ವೃತ್ತಿಯಲ್ಲಿ ಇಷ್ಟೊಂದು ಕಷ್ಟಗಳಿದ್ದರೂ ನಿಭಾಯಿಸಿಕೊಂಡು ಹೋಗುವ ಕರ್ಮಯೋಗಿ ಮಹಾನುಭಾವ ತಾನು ಎಂದು ಬಿಂಬಿಸಿಕೊಳ್ಳುವ ತವಕ ಎಲ್ಲರಲ್ಲಿಯೂ ಇರುತ್ತದೆ. ಅದಕ್ಕೆ ಶಿಕ್ಷಕರೇನೂ ಹೊರತಲ್ಲ.

’ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಕರೆಂದರೆ ಸ್ವಲ್ಪವೂ ಗೌರವವಿಲ್ಲ, ಅವರು ನಮ್ಮ ಮಾತನ್ನು ಕೇಳುವುದೇ ಇಲ್ಲ, ಸರಕಾರಕ್ಕೆ ಶಿಕ್ಷಕರ ಬಗ್ಗೆ ಕಾಳಜಿಯೇ ಇಲ್ಲ, ವಿದ್ಯಾಲಯದಲ್ಲಷ್ಟೇ ಅಲ್ಲ, ಮನೆಗೆ ಬಂದು ಪಾಠದ ತಯಾರಿ, ಟಿಪ್ಪಣಿ ಪುಸ್ತಕಗಳ ಪರಿಶೀಲನೆ ಮುಂತಾದ ಕೆಲಸಗಳನ್ನು ಮಾಡಬೇಕಾಗುತ್ತದೆ, ಕೇವಲ ಕಲಿಸಿದರಾಗಲಿಲ್ಲ, ಮತ್ತೆ ಅದೆಷ್ಟೊ ಜವಾಬ್ದಾರಿಗಳು, ವೇತನ ಕಡಿಮೆ, ಫಲಿತಾಂಶ ಕೆಳಗಿಳಿದರೆ ಪ್ರಿನ್ಸಿಪಾಲರ ತರಾಟೆ, ಮಧ್ಯೆ ಮಧ್ಯೆ ಮೆನೇಜ್ ಮೆಂಟ್ ನವರ ಕಿರಿಕಿರಿ…… ಹೀಗೆ ಶಿಕ್ಷಕ ವೃತ್ತಿಯ ಕಷ್ಟಗಳ ಗೊಣಗಾಟ ಎಲ್ಲ ಶಿಕ್ಷಕರ ಬಾಯಿಂದಲೂ ಸರ್ವೇ ಸಾಮಾನ್ಯವಾಗಿ ಬರುತ್ತಿರುತ್ತದೆ. ಇವನ್ನೆಲ್ಲ ನಿಭಾಯಿಸುವ ನಾನು ಬ್ರಹ್ಮ ವಿಷ್ಣು ಮಹೇಶ್ವರರಿಗೆ ಎಂದಿಗೂ ಕಡಿಮೆಯಲ್ಲ ಎಂಬ ಸ್ವಪ್ರಶಂಸಾ ಮನೋವೃತ್ತಿ ಹೆಚ್ಚಿನ ಶಿಕ್ಷಕರಲ್ಲಿದೆ. ಈಗಂತೂ ಸರಕಾರದ ನೀತಿಯಿಂದಾಗಿ ವಿದ್ಯಾರ್ಥಿಗಳಿಗೇ ಹೆಚ್ಚು ಅಧಿಕಾರ ದೊರೆತು ಶಿಕ್ಷಕರ ಗೌರವ ಕಡಿಮೆಯಾಗಿದೆ ಅನ್ನಿಸುತ್ತಿದೆ. ಹಿಂದೆ ಗುರುಗಳಿಗೆ ದೊರೆಯುವ ಗೌರವ, ಪೂಜೆಗಳು ತಮಗೆ ಸಿಗುವುದಿಲ್ಲವಲ್ಲ ಎಂಬ ನಿರಾಶಾಭಾವವೂ ಆವರಿಸಿಕೊಳ್ಳುತ್ತಿದೆ.

ನನಗೆ ನನ್ನ ವೃತ್ತಿಯ ಬಗ್ಗೆ ಸಂತೋಷವಿದೆ ಎಂದು ಹೇಳಿದರೆ ಅದು ಪ್ರಚಾರಪ್ರಿಯತೆ ಅನ್ನಿಸಬಹುದು. ಇಂದು ನನ್ನ ಕೆಲಸದಲ್ಲಿರುವ ಸುಖದ ಪಟ್ಟಿಯನ್ನು ಮಾಡುತ್ತಾ ಹೋದೆ.

೧. ನಾನು ಪ್ರತಿದಿನ ಕೆಲಸ ಮಾಡುವುದು ಸಜೀವ ಮಾನವರೊಂದಿಗೆ, ನಿರ್ಜೀವ ವಸ್ತುಗಳೊಂದಿಗಲ್ಲ. ಹಾಗಾಗಿ ನನ್ನ ಕೆಲಸಭಾವಪೂರ್ಣ.
೨. ಪ್ರತಿ ಕಾಲಾವಧಿಯಲ್ಲೂ ಹೊಸ ಪ್ರಯೋಗಗಳನ್ನು ಮಾಡಲು ನನಗೆ ಅವಕಾಶವಿದೆ.
೩. ಇಂದು ಮಾಡಿದ ತಪ್ಪನ್ನು ನಾಳೆ ತಿದ್ದಿಕೊಳ್ಳಬಹುದು.
೪. ಒಮ್ಮೆ ಪಾಠದ ತಯಾರಿ ನಡೆಸಿದರೆ ಅನೇಕವರ್ಷಗಳವರೆಗೆ ಉಪಯೋಗಿಸಬಹುದು.
೫. ನಮ್ಮೊಂದಿಗೆ ಸಂವಾದ ಮಾಡುವ ವ್ಯಕ್ತಿಗಳು ನಮಗಿಂತ ವಯಸ್ಸಿನಲ್ಲಿ, ಜ್ಞಾನದಲ್ಲಿ, ಸ್ತರದಲ್ಲಿ ಕಿರಿಯರು.
೬. ಯಾವುದೇ ಕ್ಷೇತ್ರದ ಜ್ಞಾನವನ್ನು ನನ್ನ ವೃತ್ತಿಯಲ್ಲಿ ಬಳಸಿಕೊಳ್ಳಬಹುದು.
೭. ನಾನು ಮನರಂಜನೆಗೆ ಬೇರೆಡೆ ಹೋಗಬೇಕಿಲ್ಲ. ಸಂಗೀತ, ನಾಟಕ, ನೃತ್ಯ, ಕ್ರೀಡೆ ಮುಂತಾದ ಮನರಂಜನೆಗಳು ಉಚಿತವಾಗಿ ಕೆಲಸದ ಸಮಯದಲ್ಲಿಯೇ ಸಿಗುತ್ತದೆ. ಇದು ಬೇರಾವ ವೃತ್ತಿಯಲ್ಲಿರುವವರಿಗೆ ಲಭ್ಯವಿಲ್ಲ. ಅವರು ತಮ್ಮ ಕೆಲಸವನ್ನು ಮುಗಿಸಿ ಮನರಂಜನೆಯನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ.
೮. ತಿಂಗಳುಗಟ್ಟಲೆ ರಜೆ – ಮದುವೆ, ಮುಂಜಿ ಮುಂತಾದವುಗಳಿಗೆಲ್ಲ ಹೆಚ್ಚು ರಜೆ ಹಾಕಬೇಕಾಗಿ ಬರುವುದಿಲ್ಲ.
೯. ದಿನದಲ್ಲಿ ಕೆಲಸ ಮಾಡುವ ಅವಧಿ ಕಡಿಮೆ. ಗೋವಾದಲ್ಲಂತೂ ಮಧ್ಯಾಹ್ನ ಎರಡು ಗಂಟೆಯ ನಂತರ ಫುಲ್ ಫ್ರೀ. ಮಧ್ಯಾಹ್ನ ಊಟವಾದ ಮೇಲೆ ಸೊಂಪಾಗಿ ನಿದ್ರೆ ಮಾಡಬಹುದು. ಸಾಕಷ್ಟು ಅಧ್ಯಯನ ಮಾಡಬಹುದು. ಬೇಕಾದಷ್ಟು ಡಿಗ್ರಿ ಸಂಪಾದನೆ ಮಾಡಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಜೀವನ ನಿರ್ವಹಣೆಗೆ ವೇತನ ಸಾಲದು ಎಂದರೆ ಸೈಡ್ ಬಿಸಿನೆಸ್ಸನ್ನೂ ಮಾಡಬಹುದು! (ಟ್ಯೂಷನ್ ನಿಷೇಧ)
೧೦. ಕೆಲವೇ ವರ್ಷಗಳಲ್ಲಿ ’ನಮಸ್ಕಾರ ಸರ್!’ ಎನ್ನುವ ಅನೇಕ ಅಭಿಮಾನಿ ವಿದ್ಯಾರ್ಥಿಗಳನ್ನೂ ಅವರ ಪಾಲಕರನ್ನೂ ಗಳಿಸಿಕೊಳ್ಳಬಹುದು.
೧೧. ನನ್ನ ವೃತ್ತಿಯಲ್ಲಿ ಹಣದ ಸಂಪರ್ಕ ಕಡಿಮೆ. ಹಾಗಾಗಿ ಜಂಜಾಟ ಕಡಿಮೆ.
೧೨. ಅಕೌಂಟೆಬಿಲಿಟಿ ಕಡಿಮೆ.

ಹೀಗೆ ಅನೇಕ ಧನಾತ್ಮಕ ಅಂಶಗಳು ನನ್ನ ವೃತ್ತಿಯಲ್ಲಿದೆ ಅನ್ನಿಸ್ತು. ಈ ವೃತ್ತಿಯನ್ನು ಆಯ್ದುಕೊಂಡಿದ್ದಕ್ಕೆ ಹೆಮ್ಮೆ ಅನ್ನಿಸ್ತು. ಬೆಳಿಗ್ಗೆ ಯಿಂದ ರಾತ್ರಿಯವರೆಗೆ ದುಡಿಯುವ ಅಧಿಕಾರಿಗಳಿಗಿಂತ, ಹಗಲಿಗೆ ಮಲಗಿ ರಾತ್ರಿಯೆಲ್ಲ ಕೆಲಸಮಾಡುವ ಕಂಪನಿ ಉದ್ಯೋಗಿಗಳಿಗಿಂತ ನನ್ನ ಉದ್ಯೋಗ ಸುಖಮಯ ಅನ್ನಿಸುತ್ತಿದೆ. ಇನ್ನು ಈ ವೃತ್ತಿಯಲ್ಲಿರುವ  ಋಣಾತ್ಮಕ ಅಂಶಗಳೆಲ್ಲ ಸವಾಲುಗಳು. ಅವನ್ನು ಎದುರಿಸಿದರೆ ವೃತ್ತಿಯಲ್ಲಿನ ಥ್ರಿಲ್ ಇನ್ನೂ ಹೆಚ್ಚಾಗುತ್ತದೆ.

ಉಪಸಂಹಾರ: ನನ್ನ ಸಮಾನೋದ್ಯೋಗಿ ಶಿಕ್ಷಕಬಂಧುಗಳೇ, ನಿಮಗೂ ಇದು ಸತ್ಯ ಅನ್ನಿಸೊಲ್ವ? ನಮ್ಮ ವಿಚಾರಧಾರೆ ಹೀಗೆ ಹರಿದರೆ ನಾವೂ ಬ್ರಹ್ಮ ವಿಷ್ಣು ಮಹೇಶ್ವರರಾಗಬಹುದಲ್ಲವೆ? ಈ ದಿನ ಎಂಜಾಯ್ ಮಾಡುವುದರೊಂದಿಗೆ ’ಕಳೆದ ವರ್ಷಕ್ಕಿಂತ ನನ್ನ ಜ್ಞಾನ ಹೆಚ್ಚಾಗಿದೆಯೇ? ನನ್ನ ಪಾಠನಪದ್ಧತಿಯಲ್ಲಿ ಸುಧಾರಣೆ ಇದೆಯೇ ಮುಂತಾದ ಪ್ರಶ್ನೆಗಳೊಂದಿಗೆ ಆತ್ಮಾವಲೋಕನ ಮಾಡಿಕೊಳ್ಳುವುದೂ ಆವಶ್ಯಕ ಅನಿಸುತ್ತದೆ. ಇಲ್ಲವಾದರೆ ಮೂವತ್ತು ವರ್ಷ ಅನುಭವವಿರುವ ಶಿಕ್ಷಕ ಮೊನ್ನೆ ಉದ್ಯೋಗಕ್ಕೆ ಸೇರಿದವನ ಮುಂದೆ ತಲೆತಗ್ಗಿಸಬೇಕಾದೀತು. ಈ ಒಂದು ದಿನದ ಎಂಜಾಯ್ ಮೆಂಟ್ ಗೆ ಮನಸೋತರೆ ಇಡೀ ವರ್ಷ ಸಿಗುವ ಗೌರವವನ್ನು ಕಳೆದುಕೊಳ್ಳಬೇಕಾದೀತು.

ನನ್ನ ವೃತ್ತಿಯ ಬಗ್ಗೆ ಹಂಚಿಕೊಳ್ಳುವ ವಿಚಾರಗಳು  ಇನ್ನೂ ಎಷ್ಟೋ ಇವೆ. ಸದ್ಯಕ್ಕೆ ಇಷ್ಟು ಸಾಕು. ಇಲ್ಲ ಅಂದರೆ ನೀವು ಗಂಟೆ ಬಾರಿಸಿ ನಿಮ್ಮ ಅವಧಿ ಮುಗಿಯಿತು ಎಂದು ಎಚ್ಚರಿಸಬೇಕಾದೀತು!

- ಮಹಾಬಲ ಭಟ್,  ಉಪನ್ಯಾಸಕರು, ಗೋವಾ

ಗೋವಾದ ಸಂತ ಝೇವಿಯರ್ ಉಚ್ಚಮಾಧ್ಯಮಿಕ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿರುವ ಶ್ರೀ ಮಹಾಬಲ ಭಟ್ಟರು ಕಳೆದ ಎಂಟು ವರ್ಷಗಳಿಂದ ಗೋವಾದಲ್ಲಿ ನಡೆಯುತ್ತಿರುವ ಕನ್ನಡ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸುತ್ತ ಬಂದಿದ್ದಾರೆ. ಗೋವಾ ಕನ್ನಡ ಸಮಾಜದಕನ್ನಡ ಮಾಸಿಕ ‘ಗೋವಾ ಜನನುಡಿ’ಯ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅನೇಕ ಲೇಖನಗಳು ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ